Friday, 15th November 2024

IND vs SA Match Highlights: ಸಂಜು-ತಿಲಕ್‌ ಶತಕಗಳ ಅಬ್ಬರ, ಟಿ20ಐ ಸರಣಿ ಗೆದ್ದ ಭಾರತ!

Sanju Samson-Tilak Verma's hundreds helps India to win 4th game and won T20I Series by 3-1

ಜೋಹನ್ಸ್‌ಬರ್ಗ್‌: ಸಂಜು ಸ್ಯಾಮ್ಸನ್ (109*) ಮತ್ತು ತಿಲಕ್ ವರ್ಮಾ (120*) ಅವರ ಸ್ಫೋಟಕ ಅಜೇಯ ಶತಕಗಳ ನೆರವಿನಿಂದ ಭಾರತ ತಂಡ ನಾಲ್ಕನೇ ಟಿ20ಐ (IND vs SA) ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು 135 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಇದರೊಂದಿಗೆ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಟೀಮ್‌ ಇಂಡಿಯಾ 3-1 ಅಂತರದಲ್ಲಿ ಟಿ20ಐ ಸರಣಿಯನ್ನು ಮುಡಿಗೇರಿಸಿಕೊಂಡಿತು.

ಶುಕ್ರವಾರ ಇಲ್ಲಿನ ವಾಂಡರರ್ಸ್‌ ಸ್ಟೇಡಿಯಂನಲ್ಲಿ ಭಾರತ ತಂಡ ನೀಡಿದ್ದ 284 ರನ್‌ಗಳ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡ, ಅರ್ಷದೀಪ್‌ ಸಿಂಗ್‌ ಶಿಸ್ತುಬದ್ದ ಬೌಲಿಂಗ್‌ ದಾಳಿಗೆ ನಲುಗಿ 18.2 ಓವರ್‌ಗಳಿಗೆ 148 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ತವರು ಅಭಿಮಾನಿಗಳ ಎದುರು ಏಡೆನ್‌ ಮಾರ್ಕ್ರಮ್‌ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ ಹೀನಾಯ ಸೋಲು ಅನುಭವಿಸಿತು ಹಾಗೂ ಚುಟಕು ಸರಣಿಯನ್ನು ಕಳೆದುಕೊಂಡಿತು.

ಸ್ಕೋರ್‌ ಬೋರ್ಡ್‌ ಒತ್ತಡದಲ್ಲಿ ಚೇಸಿಂಗ್‌ಗೆ ಬಂದ ದಕ್ಷಿಣ ಆಫ್ರಿಕಾ ತಂಡದ ಪರ ಟ್ರಿಸ್ಟನ್‌ ಸ್ಟಬ್ಸ್‌ (43), ಡೇವಿಡ್‌ ಮಿಲ್ಲರ್‌ (36) ಹಾಗೂ ಮಾರ್ಕೊ ಯೆನ್ಸನ್‌ (29) ಅವರು ಸ್ವಲ್ಪ ಪ್ರತಿರೋಧ ತೋರಿದ್ದು ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಭಾರತದ ಪರ ಅರ್ಷದೀಪ್‌ ಸಿಂಗ್‌ ಮೂರು ವಿಕೆಟ್‌ ಪಡೆದರೆ, ಅಕ್ಷರ್‌ ಪಟೇಲ್‌ ಮತ್ತು ವರುಣ್‌ ಚಕ್ರವರ್ತಿ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.

IND vs SA: ಸ್ಪೋಟಕ ಶತಕಗಳನ್ನು ಸಿಡಿಸಿ ಇತಿಹಾಸ ಬರೆದ ಸಂಜು ಸ್ಯಾಮ್ಸನ್‌-ತಿಲಕ್‌ ವರ್ಮಾ!

ದಾಖಲೆಯ ಮೊತ್ತ ಕಲೆ ಹಾಕಿದ ಭಾರತ

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡ, ಸಂಜು ಸ್ಯಾಮ್ಸನ್‌ ಹಾಗೂ ತಿಲಕ್‌ ವರ್ಮಾ ಸ್ಪೋಟಕ ಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ ಒಂದು ವಿಕೆಟ್‌ ನಷ್ಟಕ್ಕೆ 283 ರನ್‌ಗಳನ್ನು ಕಲೆ ಹಾಕಿತು. ವಿದೇಶಿ ನೆಲದಲ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಗರಿಷ್ಠ ಮೊತ್ತ ಇದಾಗಿದೆ. ಅಲ್ಲದೆ ದಕ್ಷಿಣ ಆಫ್ರಿಕಾ ಎದುರು ಯಾವುದೇ ತಂಡ ಕಲೆ ಹಾಕಿದ ಅತ್ಯಂತ ಗರಿಷ್ಠ ಟಿ20ಐ ಮೊತ್ತವಿದು.

ಸಂಜು ಸ್ಯಾಮ್ಸನ್‌-ತಿಲಕ್‌ ವರ್ಮಾ ಐತಿಹಾಸಿಕ ಶತಕಗಳು

ಆರಂಭಿಕ ಅಭಿಷೇಕ್‌ ಶರ್ಮಾ 36 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ ಬಳಿಕ ಎರಡನೇ ವಿಕೆಟ್‌ಗೆ ಜೊತೆಯಾದ ಸಂಜು ಸ್ಯಾಮ್ಸನ್‌ ಹಾಗೂ ತಿಲಕ್‌ ವರ್ಮಾ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಭರ್ಜರಿ ಮನರಂಜನೆ ಒದಗಿಸಿದರು ಹಾಗೂ ಆಫ್ರಿಕಾ ಬೌಲರ್‌ಗಳಿಗೆ ಮಣ್ಣ ಮುಕ್ಕಿಸಿದರು. ಸಂಜು ಸ್ಯಾಮ್ಸನ್‌ ಆಡಿದ 56 ಎಸೆತಗಳಲ್ಲಿ 9‌ ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ ಅಜೇಯ 109 ರನ್‌ಗಳನ್ನು ಸಿಡಿಸಿದರೆ, ಇವರ ಜೊತೆ 210 ರನ್‌ಗಳ ಜತೆಯಾಟವನ್ನು ಆಡಿದ ತಿಲಕ್‌ ವರ್ಮಾ ಕೇವಲ 47 ಎಸೆತಗಳಲ್ಲಿ 10 ಸಿಕ್ಸರ್‌ ಹಾಗೂ 9 ಬೌಂಡರಿಗಳೊಂದಿಗೆ ಅಜೇಯ 120 ರನ್‌ಗಳನ್ನು ದಾಖಲಿಸಿದರು. ಆ ಮೂಲಕ ಈ ಸರಣಿಯಲ್ಲಿ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ತಲಾ ಎರಡೆರಡು ಶತಕಗಳನ್ನು ಪೂರ್ಣಗೊಳಿಸಿದರು.

ಸ್ಕೋರ್‌ ವಿವರ

ಭಾರತ: 20 ಓವರ್‌ಗಳಿಗೆ 283-1 (ಸಂಜು ಸ್ಯಾಮ್ಸನ್‌ 109, ತಿಲಕ್‌ ವರ್ಮಾ 120; ಸಿಪಾಮ್ಲ 58ಕ್ಕೆ 1)

ದಕ್ಷಿಣ ಆಫ್ರಿಕಾ: 18.2 ಓವರ್‌ಗಳಿಗೆ 148-10 (ಟ್ರಿಸ್ಟನ್‌ ಸ್ಟಬ್ಸ್‌ 43, ಡೇವಿಡ್‌ ಮಿಲ್ಲರ್‌ 36, ಮಾರ್ಕೊ ಯೆನ್ಸನ್‌ 29; ಅರ್ಷದೀಪ್‌ ಸಿಂಗ್‌ 20ಕ್ಕೆ 3, ಅರ್ಷದೀಪ್‌ ಸಿಂಗ್‌ 6 ಕ್ಕೆ 2)

ಪಂದ್ಯ ಶ್ರೇಷ್ಠ ಪ್ರಶಸ್ತಿ: ತಿಲಕ್‌ ವರ್ಮಾ

ಸರಣಿ ಶ್ರೇಷ್ಠ ಪ್ರಶಸ್ತಿ: ತಿಲಕ್‌ ವರ್ಮಾ