ಡರ್ಬನ್: ಭಾರತ ಹಾಗೂ ದಕ್ಷಿಣ ಆಫ್ರಿಕಾ (IND vs SA) ನಡುವಣ ನಾಲ್ಕು ಪಂದ್ಯಗಳ ಟಿ20ಐ ಸರಣಿಯು ನವೆಂಬರ್ 8 ರಂದು ಆರಂಭವಾಗಲಿದೆ. ಮೊದಲನೇ ಟಿ20ಐ ಪಂದ್ಯ ಡರ್ಬನ್‌ನ ಕಿಂಗ್ಸ್‌ಮೇಡ್ ಕ್ರೀಡಾಂಗಣದಲ್ಲಿ ನಡೆಯಲಿದೆ. 2026ರ ಟಿ20 ವಿಶ್ವಕಪ್ ನಿಮಿತ್ತ ಇಂದಿನಿಂದಲೇ ಬಲಿಷ್ಠ ತಂಡವನ್ನು ಕಟ್ಟಲು ಬಿಸಿಸಿಐ ಆಯ್ಕೆ ಸಮಿತಿ ತಯಾರಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಟಿ20ಐ ಸರಣಿಯು ಭಾರತ ತಂಡದ ಯುವ ಆಟಗಾರರಿಗೆ ಅತ್ಯಂತ ನಿರ್ಣಾಯಕವಾಗಲಿದೆ. ಬಾಂಗ್ಲಾದೇಶ ವಿರುದ್ದ ಟಿ20 ಸರಣಿ ಆಡಿದ್ದ ಬಹುತೇಕ ಅದೇ ಆಟಗಾರರನ್ನು ದಕ್ಷಿಣ ಆಫ್ರಿಕಾ ಟಿ20ಐ ಸರಣಿಗೂ ಉಳಿಸಿಕೊಳ್ಳಲಾಗಿದೆ.
ಬಾಂಗ್ಲಾದೇಶ ವಿರುದ್ದ ಟಿ20 ಸರಣಿ ಆಡಿದ್ದ ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್ ಹಾಗೂ ಹರ್ಷಿತ್ ರಾಣಾ ಅವರು ಈ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಮತ್ತೊಂದೆಡೆ ಗಾಯದ ಕಾರಣ ರಿಯಾನ್ ಪರಾಗ್ ಹಾಗೂ ಮಯಾಂಕ್ ಯಾದವ್ ಅವರು ಸರಣಿಯಿಂದ ಹೊರಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಟಿ೨೦ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ನಾಲ್ಕು ಬದಲಾವಣೆ ಮಾಡುವ ಸಾಧ್ಯತೆ ಇದೆ.
ಭಾರತದ ಪ್ಲೇಯಿಂಗ್ XIನಲ್ಲಿ 4 ಬದಲಾವಣೆ ಸಾಧ್ಯತೆ
ಬಾಂಗ್ಲಾ ಎದುರು ಟಿ20 ಸರಣಿಯ ಮೂರೂ ಪಂದ್ಯಗಳಲ್ಲಿ ಆಡಿದ್ದ ರಿಯಾನ್, ವಾಷಿಂಗ್ಟನ್, ನಿತೀಶ್ ಹಾಗೂ ಮಯಾಂಕ್ ಅವರು ಆಫ್ರಿಕಾ ಸರಣಿಯಲ್ಲಿ ಆಡುತ್ತಿಲ್ಲ. ಈ ಕಾರಣದಿಂದ ಇವರ ಸ್ಥಾನಕ್ಕೆ ಹೊಸಬರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬರೋಬ್ಬರಿ 11 ತಿಂಗಳ ಬಳಿಕ ಎಡಗೈ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಭಾರತ ಟಿ20 ತಂಡದ ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇವರು ಬ್ಯಾಟಿಂಗ್ ಜೊತೆಗೆ ಮಧ್ಯಮ ಓವರ್‌ಗಳಲ್ಲಿ ಬೌಲ್ ಮಾಡುವ ಸಾಧ್ಯತೆ ಇದೆ.
ಅಕ್ಷರ್ ಪಟೇಲ್ ಕಮ್‌ಬ್ಯಾಕ್
೨೦೨೪ರ ಐಸಿಸಿ ಟಿ೨೦ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಭಾರತ ತಂಡದಲ್ಲಿ ಆಡಿದ್ದ ಸ್ಪಿನ್ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರು ಮೊದಲನೇ ಪಂದ್ಯದ ಪ್ಲೇಯಿಂಗ್ XIನಲ್ಲಿ ನೇರವಾಗಿ ಆಡಲಿದ್ದಾರೆ. ಅಂದ ಹಾಗೆ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ಎದುರಿನ ಟೆಸ್ಟ್ ಸರಣಿಯ ಭಾರತ ತಂಡದಲ್ಲಿದ್ದ ಅಕ್ಷರ್ ಪಟೇಲ್, ಒಂದೇ ಒಂದು ಪಂದ್ಯದಲ್ಲಿಯೂ ಆಡಿರಲಿಲ್ಲ.
ಮೂವರು ವೇಗಿಗಳಿಗೆ ಸ್ಥಾನ
ಬಾಂಗ್ಲಾ ಎದುರಿನ ಟಿ20 ಸರಣಿಯಲ್ಲಿ ವರುಣ್ ಚಕ್ರವರ್ತಿ ಮೂರೂ ಪಂದ್ಯಗಳಲ್ಲಿ ಆಡಿದ್ದರು. ಆದರೆ, ಆಫ್ರಿಕಾ ಟಿ20 ಸರಣಿಯ ಆರಂಭಿಕ ಪಂದ್ಯದಲ್ಲಿ ವರುಣ್ ಸ್ಥಾನವನ್ನು ರವಿ ಬಿಷ್ಣೋಯ್ ತುಂಬಬಹುದು. ಇನ್ನು ವೇಗದ ಬೌಲಿಂಗ್ ವಿಭಾಗದಲ್ಲಿ ಮೂವರು ವೇಗಿಗಳು ಆಡುವ ಸಾಧ್ಯತೆ ಇದೆ. ಆವೇಶ್ ಖಾನ್ ಹಾಗೂ ಅರ್ಷದೀಪ್ ಸಿಂಗ್ ಅವಕಾಶ ಪಡೆದರೆ, ಆರ್‌ಸಿಬಿ ವೇಗಿ ಯಶ್ ದಯಾಳ್ ಅವರು ಅಂತಾರಾಷ್ಟ್ರೀಯ ಟಿ೨೦ಐಗೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ.
ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಟಿ೨೦ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
- ಸಂಜು ಸ್ಯಾಮ್ಸನ್ (ಓಪನರ್, ವಿಕೆಟ್ ಕೀಪರ್)
- ಅಭಿಷೇಕ್ ಶರ್ಮಾ (ಓಪನರ್)
- ಸೂರ್ಯಕುಮಾರ್ ಯಾದವ್ (ನಾಯಕ, ಬ್ಯಾಟ್ಸ್‌ಮನ್)
- ತಿಲಕ್ ವರ್ಮಾ (ಬ್ಯಾಟ್ಸ್‌ಮನ್)
- ಹಾರ್ದಿಕ್ ಪಾಂಡ್ಯ (ಆಲ್‌ರೌಂಡರ್)
- ರಿಂಕು ಸಿಂಗ್ (ಬ್ಯಾಟ್ಸ್‌ಮನ್)
- ಅಕ್ಷರ್ ಪಟೇಲ್ (ಆಲ್‌ರೌಂಡರ್)
- ರವಿ ಬಿಷ್ಣೋಯ್ (ಸ್ಪಿನ್ನರ್)
- ಅರ್ಷದೀಪ್ ಸಿಂಗ್ (ವೇಗದ ಬೌಲರ್)
- ಯಶ್ ದಯಾಳ್ (ವೇಗದ ಬೌಲರ್)
- ಆವೇಶ್ ಖಾನ್ (ವೇಗದ ಬೌಲರ್)
ಈ ಸುದ್ದಿಯನ್ನು ಓದಿ: IND vs AUS: ಆಸ್ಟ್ರೇಲಿಯಾ ಟೆಸ್ಟ್ ಸರಣಿ ಗೆಲ್ಲಲು ಭಾರತಕ್ಕೆ ಉಪಯುಕ್ತ ಸಲಹೆ ನೀಡಿದ ಮೈಕಲ್ ವಾನ್!