ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಟಿ20ಐ (IND vs SA) ಪಂದ್ಯದಲ್ಲಿ ಸ್ಪೋಟಕ ಶತಕ ಸಿಡಿಸುವ ಮೂಲಕ ಸಂಜು ಸ್ಯಾಮ್ಸನ್ ಅವರು ಭಾರತ ತಂಡದ 61 ರನ್‌ಗಳ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ತಮ್ಮ ಪುತ್ರನ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಸಂಜು ತಂದೆ ಸ್ಯಾಮ್ಸನ್ ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ. ಕಳೆದ 10 ವರ್ಷಗಳ ತಮ್ಮ ಪುತ್ರನ ವೃತ್ತಿ ಜೀವನವನ್ನು ನಾಲ್ವರು ಹಾಳು ಮಾಡಿದ್ದಾರೆಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಭಾರತ ಅಂಡರ್ 19 ತಂಡದ ಮೂಲಕ ಎಲ್ಲರ ಗಮನ ಸೆಳೆಯುವ ಮೂಲಕ ಕೇರಳ ಮೂಲದ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ದೇಶಿ ಕ್ರಿಕೆಟ್‌ನಲ್ಲಿಯೂ ಉತ್ತಮ ಪ್ರದರ್ಶನ ತೋರಿದ್ದರು.ಆ ಮೂಲಕ ಭಾರತ ಹಿರಿಯರ ತಂಡದ ಪರ 2015ರಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆದರೆ. ಎಂಎಸ್ ಧೋನಿ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಸಂಜುಗೆ ಹೆಚ್ಚು ಅವಕಾಶಗಳು ಸಿಕ್ಕಿರಲಿಲ್ಲ. ಆದರೆ, ಸೂರ್ಯಕುಮಾರ್ ಯಾದವ್ ನಾಯಕತ್ವ ಹಾಗೂ ಗೌತಮ್ ಗಂಭೀರ್ ಹೆಡ್ ಕೋಚ್ ಅವಧಿಯಲ್ಲಿ ಸಂಜು ಸ್ಯಾಮ್ಸನ್‌ಗೆ ಭಾರತ ಟಿ20 ತಂಡದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಸ್ಥಾನ ಕಲ್ಪಿಸಲಾಗಿದೆ.
ಬಾಂಗ್ಲಾ ವಿರುದ್ದವೂ ಶತಕ ಸಿಡಿಸಿದ್ದ ಸ್ಯಾಮ್ಸನ್
ಅದರಂತೆ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿಯೂ ಸಂಜು ಇನಿಂಗ್ಸ್ ಆರಂಭಿಸಿ ಗಮನ ಸೆಳೆದಿದ್ದರು. ಅವರು ಹೈದರಾಬಾದ್‌ನಲ್ಲಿ ನಡೆದಿದ್ದ ಮೂರನೇ ಪಂದ್ಯದಲ್ಲಿ ಚೊಚ್ಚಲ ಶತಕವನ್ನು ಸಿಡಿಸಿದ್ದರು. ಈ ಪಂದ್ಯದಲ್ಲಿ ಅವರು 111 ರನ್‌ಗಳನ್ನು ಗಳಿಸಿದ್ದರು. ಅದರಂತೆ ಈ ಪಂದ್ಯದಲ್ಲಿ ಭಾರತ ತಂಡ ಗೆಲುವು ಪಡೆದಿತ್ತು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿಯೂ ಸಂಜು ಸ್ಪೋಟಕ ಬ್ಯಾಟಿಂಗ್ ಅನ್ನು ಮುಂದುವರಿಸಿ 47 ಎಸೆತಗಳಲ್ಲಿ ಶತಕ ಸಿಡಿಸಿದ್ದರು.
ಡರ್ಬನ್‌ನಲ್ಲಿ ಮಿಂಚಿದ್ದ ಸಂಜು
ಡರ್ಬನ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಸಂಜು ಸ್ಯಾಮ್ಸನ್ ಕೇವಲ 50 ಎಸೆತಗಳಲ್ಲಿ ಬರೋಬ್ಬರಿ 10 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 107 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಭಾರತ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 202 ರನ್‌ಗಳನ್ನು ದಾಖಲಿಸಿತ್ತು. ಆ ಮೂಲಕ ಎದುರಾಳಿ ದಕ್ಷಿಣ ಆಫ್ರಿಕಾ ತಂಡಕ್ಕೆ 203 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಅಂತಿಮವಾಗಿ ಈ ಪಂದ್ಯದಲ್ಲಿ ಭಾರತ 61 ರನ್‌ಗಳಿಂದ ಗೆಲುವು ಪಡೆದಿತ್ತು.
ಸ್ಯಾಮ್ಸನ್ ವಿಶ್ವನಾಥ್ ಹೇಳಿದ್ದೇನು?
ತಮ್ಮ ಪುತ್ರನ ಬ್ಯಾಟಿಂಗ್ ಪ್ರದರ್ಶನವನ್ನು ಸಂಜು ಸ್ಯಾಮ್ಸನ್ ಅವರ ತಂದೆ ಸ್ಯಾಮ್ಸನ್ ವಿಶ್ವನಾಥ್ ಮುಕ್ತ ಕಂಠದಿಂದ ಗುಣಗಾನ ಮಾಡಿದ್ದಾರೆ. ಅಲ್ಲದೆ, ಭಾರತ ತಂಡದ ಮಾಜಿ ಹೆಡ್ ಕೋಚ್ ರಾಹುಲ್ ದ್ರಾವಿಡ್, ಹಾಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ. ಈ ನಾಲ್ವರು ತಮ್ಮ ಪುತ್ರ 10 ವರ್ಷಗಳ ವೃತ್ತಿ ಜೀವನವನ್ನು ಹಾಳು ಮಾಡಿದ್ದಾರೆಂದು ಆರೋಪ ಮಾಡಿದ್ದಾರೆ. ಆದರೆ, ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಮತ್ತು ಟಿ20ಐ ತಂಡದ ನಾಯಕ ಸೂರ್ಯಕುಮಾರ್ ಯಾದವ್‌ಗೆ ಧನ್ಯವಾದವನ್ನು ಅರ್ಪಿಸಿದ್ದಾರೆ.
“ನನ್ನ ಮಗನ ಕಳೆದ 10 ವರ್ಷಗಳನ್ನು ಹಾಳು ಮಾಡಲಾಗಿದೆ ಹಾಗೂ ಈ ವರ್ಷಗಳು ಕ್ರೀಡಾ ವೃತ್ತಿಪರತೆಯನ್ನು ಹೊಂದಿರಲಿಲ್ಲ. ಅವರು ನೋಯಿಸಿದಷ್ಟೂ ಸಂಜು ಬಿಕ್ಕಟ್ಟಿನಿಂದ ಹೊರಬಂದರು. ಕಳೆದ 10 ವರ್ಷಗಳಲ್ಲಿ ಅವರು ಕಳೆದುಕೊಂಡಿದ್ದನ್ನು ಮುಂದಿನ ದಿನಗಳಲ್ಲಿ ಹೊರ ತರಲಿದ್ದಾರೆ. ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್‌ನಲ್ಲಿ ಕ್ಲಾಸಿಕ್ ಸ್ಪರ್ಶವಿದೆ. ಸಂಜು ಸ್ಯಾಮ್ಸನ್ ಅವರ ಶೈಲಿಯು ಸಚಿನ್ ಹಾಗೂ ದ್ರಾವಿಡ್ ಅವರ ಆಟವನ್ನು ನೆನಪಿಸಿದೆ,” ಎಂದು ಸ್ಯಾಮ್ಸನ್ ವಿಶ್ವನಾಥ್ ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: IND vs SA: ಕೊಹ್ಲಿ-ರೋಹಿತ್ ಅಲ್ಲ, ಸಂಜು ಸ್ಯಾಮ್ಸನ್‌ಗೆ ನಾನು ದೊಡ್ಡ ಅಭಿಮಾನಿ ಎಂದ ಎಬಿಡಿ!