ನವದೆಹಲಿ: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸತತ ಎರಡು ಶತಕಗಳನ್ನು ಸಿಡಿಸುವ ಮೂಲಕ ವಿಶೇಷ ದಾಖಲೆ ಬರೆದಿದ್ದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್, ದಕ್ಷಿಣ ಆಫ್ರಿಕಾ ವಿರುದ್ದ ಎರಡನೇ ಪಂದ್ಯದಲ್ಲಿ (IND vs SA) ಶೂನ್ಯಕ್ಕೆ ವಿಕೆಟ್ ಒಪ್ಪಿಸುವ ಮೂಲಕ ಅನಗತ್ಯ ದಾಖಲೆಯೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ನವೆಂಬರ್ 10 ರಂದು ಭಾನುವಾರ ಮೆಬೇಕದ ಸೇಂಟ್ ಜಾರ್ಜ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದಿದ್ದ ಎರಡನೇ ಟಿ20ಐ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಭಾರತ ತಂಡದ ಪರ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಇನಿಂಗ್ಸ್ ಆರಂಭಿಸಿದರು. ಆದರೆ, ಎದುರಿಸಿದ ಮೂರು ಎಸೆತಗಳಲ್ಲಿ ಸಂಜು ಸ್ಯಾಮ್ಸನ್, ಮಾರ್ಕೊ ಯೆನ್ಸನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಆ ಮೂಲಕ ಖಾತೆ ತೆರೆಯದೆ ಕೇರಳ ಮೂಲದ ಬ್ಯಾಟ್ಸ್‌ಮನ್ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು.
ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಸಂಜು
ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟಿ20ಐ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಬಳಿಕ ಸಂಜು ಸ್ಯಾಮ್ಸನ್ ಅವರು ಟಿ20ಐ ಕ್ರಿಕೆಟ್‌ನಲ್ಲಿ ಅನಗತ್ಯ ದಾಖಲೆಯನ್ನು ಹೆಗಲೇರಿಸಿಕೊಂಡಿದ್ದಾರೆ. ಏಕೈಕ ಕ್ಯಾಲೆಂಡರ್ ವರ್ಷದ ಟಿ20ಐ ಕ್ರಿಕೆಟ್‌ನಲ್ಲಿ ನಾಲ್ಕು ಬಾರಿ ಡಕ್‌ಔಟ್ ಆದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಅನಗತ್ಯ ದಾಖಲೆಯನ್ನು ಸಂಜು ಸ್ಯಾಮ್ಸನ್ ಬರೆದಿದ್ದಾರೆ. ಜನವರಿಯಲ್ಲಿ ಅಫಘಾನಿಸ್ತಾನ ವಿರುದ್ದ ಬೆಂಗಳೂರಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಡಕ್‌ಔಟ್ ಆಗಿದ್ದರು. ಇದಾದ ಬಳಿಕ ಜುಲೈನಲ್ಲಿ ಶ್ರೀಲಂಕಾ ವಿರುದ್ಧ ಸತತ ಎರಡು ಬಾರಿ ಡಕ್‌ಔಟ್ ಆಗಿದ್ದರು.
ಟಿ20ಐ ಕ್ರಿಕೆಟ್‌ನ ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚು ಬಾರಿ ಡಕ್‌ಔಟ್ ಆದ ಭಾರತೀಯ ಬ್ಯಾಟರ್ಸ್
ಸಂಜು ಸ್ಯಾಮ್ಸನ್: ನಾಲ್ಕು ಬಾರಿ ಡಕ್‌ಔಟ್ (2024)
ಯೂಸಫ್ ಪಠಾಣ್: ಮೂರು ಬಾರಿ ಡಕ್‌ಔಟ್ (2009)
ರೋಹಿತ್ ಶರ್ಮಾ: ಮೂರು ಬಾರಿ ಡಕ್‌ಔಟ್ (2018)
ರೋಹಿತ್ ಶರ್ಮಾ: ಮೂರು ಬಾರಿ ಡಕ್‌ಔಟ್ (2022)
ವಿರಾಟ್ ಕೊಹ್ಲಿ: ಮೂರು ಬಾರಿ ಡಕ್‌ಔಟ್ (2024)
ಮೊದಲನೇ ಪಂದ್ಯ ಶತಕ ಬಾರಿಸಿದ್ದ ಸಂಜು
ಡರ್ಬನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟಿ20ಐ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಶತಕ ಬಾರಿಸಿದ್ದರು. ಈ ಪಂದ್ಯದಲ್ಲಿ ಆಡಿದ್ದ 50 ಎಸೆತಗಳಲ್ಲಿ ಬರೋಬ್ಬರಿ 10 ಸಿಕ್ಸರ್ ಹಾಗೂ 7 ಮನಮೋಹಕ ಬೌಂಡರಿಗಳೊಂದಿಗೆ 107 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಸತತ ಎರಡನೇ ಟಿ20ಐ ಶತಕ ಸಿಡಿಸಿದ ಮೊದಲನೇ ಭಾರತೀಯ ಹಾಗೂ ವಿಶ್ವದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಬರೆದಿದ್ದರು. ಆದರೆ, ಎರಡನೇ ಪಂದ್ಯದಲ್ಲಿ ಅದೇ ಲಯವನ್ನು ಮುಂದುವರಿಸುವಲ್ಲಿ ವಿಫಲರಾದರು.
124 ರನ್‌ಗಳನ್ನು ದಾಖಲಿಸಿದ ಭಾರತ
ಸಂಜು ಸ್ಯಾಮ್ಸನ್ ಸೇರಿದಂತೆ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಹಾರ್ದಿಕ್ ಪಾಂಡ್ಯ (39ರನ್) ಹಾಗೂ ಅಕ್ಷರ್ ಪಟೇಲ್ (27) ಅವರ ನಿರ್ಣಾಯಕ ಬ್ಯಾಟಿಂಗ್ ನೆರವಿನಿಂದ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 124 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ದಕ್ಷಿಣ ಆಫ್ರಿಕಾ ತಂಡಕ್ಕೆ 125 ರನ್‌ಗಳ ಸಾಧಾರಣ ಗುರಿಯನ್ನು ನೀಡಿತು.
ಈ ಸುದ್ದಿಯನ್ನು ಓದಿ: IND vs SA: ʼನನ್ನ ಮಗನ 10 ವರ್ಷಗಳ ವೃತ್ತಿ ಜೀವನವನ್ನು ಈ ನಾಲ್ವರು ಹಾಳು ಮಾಡಿದ್ದಾರೆʼ-ಸಂಜು ಸ್ಯಾಮ್ಸನ್ ತಂದೆ ಶಾಕಿಂಗ್ ಹೇಳಿಕೆ!