Saturday, 16th November 2024

IND vs SA: ಓಪನರ್‌ ಆಗಿ ಸಂಜು ಸ್ಯಾಮ್ಸನ್‌ ಮುಂದುವರಿಯುತ್ತಾರಾ? ಸೂರ್ಯಕುಮಾರ್‌ ಹೇಳಿದಿದ್ದು!

IND vs SA: Sanju Samson to continue opening in T20Is? Skipper Suryakumar Yadav reveals healthy headache

ಜೋಹನ್ಸ್‌ಬರ್ಗ್: ತಾನು ಭವಿಷ್ಯದ ಬಗ್ಗೆ ಹೆಚ್ಚಾಗಿ ಯೋಚಿಸದೆ ಪ್ರಸಕ್ತ ಸಂಗತಿಗಳ ಬಗ್ಗೆ ಹೆಚ್ಚು ಚಿಂತಿಸುತ್ತೇನೆ. ಅಲ್ಲದೆ ತಂಡದಲ್ಲಿ ಒಂದು ಸ್ಥಾನಕ್ಕೆ ಹೆಚ್ಚು ಆಯ್ಕೆಗಳಿರುವುದು (IND vs SA) ಆರೋಗ್ಯಕರ ತಲೆನೋವಾಗಿ ಪರಿಣಮಿಸಿದೆ ಎಂದು ಟೀಮ್ ಇಂಡಿಯಾದ ಟಿ20ಐ ನಾಯಕ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಭಾರತ ತಂಡದ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ ಹಾಗೂ ಶುಭಮನ್ ಗಿಲ್ ಅವರ ಅಲಭ್ಯತೆಯಲ್ಲಿ ಪವರ್‌-ಪ್ಲೇನಲ್ಲಿ ರನ್ ಮಳೆ ಹರಿಸಿ ತಂಡದ ಮೊತ್ತ ಹೆಚ್ಚಲು ನೆರವಾಗುತ್ತಿರುವ ಸಂಜು ಸ್ಯಾಮ್ಸನ್, ಕಳೆದ ಐದು ಪಂದ್ಯಗಳಿಂದ ಮೂರು ಶತಕ ಸಿಡಿಸಿ ಆರಂಭಿಕ ಸ್ಥಾನವನ್ನು ಬಹುತೇಕ ಗಟ್ಟಿಮಾಡಿಕೊಂಡಿದ್ದಾರೆ. ಈ ಕುರಿತು ಸೂರ್ಯಕುಮಾರ್ ಯಾದವ್ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ಫೋಟಕ ಆಟಗಾರರಾದ ಯಶಸ್ವಿ ಜೈಸ್ವಾಲ್ ಹಾಗೂ ಶುಭಮನ್ ಗಿಲ್ ಅವರು ತಂಡಕ್ಕೆ ಮರಳಿದ ನಂತರ ಇನ್‌ ಫಾರ್ಮ್‌ ಬ್ಯಾಟರ್‌ ಕೇರಳ ಮೂಲದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರನ್ನು 2026ರ ಟಿ20ಐ ವಿಶ್ವಕಪ್ ಟೂರ್ನಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆರಂಭಿಕರಾಗಿ ಮುಂದುವರಿಸುತ್ತೀರಾ ಎಂಬ ಪ್ರಶ್ನೆಯನ್ನು ಸೂರ್ಯ ಕುಮಾರ್ ಯಾದವ್‌ಗೆ ಕೇಳಲಾಯಿತು. ಇದಕ್ಕೆ ಸೂರ್ಯಕುಮಾರ್‌ ಯಾದವ್‌ ತಮ್ಮದೇ ಉತ್ತರವನ್ನು ನೀಡಿದ್ದಾರೆ.

IND vs SA: ಸ್ಪೋಟಕ ಶತಕಗಳನ್ನು ಸಿಡಿಸಿ ಇತಿಹಾಸ ಬರೆದ ಸಂಜು ಸ್ಯಾಮ್ಸನ್‌-ತಿಲಕ್‌ ವರ್ಮಾ!

ವಿಶ್ವಕಪ್ ಟೂರ್ನಿಗೂ ಮುನ್ನ ಹೆಚ್ಚು ಪಂದ್ಯ ಆಡುತ್ತೇವೆ: ಸೂರ್ಯ

“2026ರ ಟಿ20ಐ ವಿಶ್ವಕಪ್ ಟೂರ್ನಿಗೂ ಮುನ್ನ ನಾವು ಸಾಕಷ್ಟು ಪಂದ್ಯಗಳನ್ನು ಆಡಲಿದ್ದೇವೆ. ಮುಂದೆ ನಾವು ಯಾವ ರೀತಿಯ ಆಟ ಪ್ರದರ್ಶಿಸಬೇಕೆಂಬ ಬಗ್ಗೆಯೂ ನಾವು ಚರ್ಚಿಸಬೇಕಾಗಿದೆ. ನಾವು ಐಪಿಎಲ್ ಟೂರ್ನಿಯಲ್ಲಿ ವಿವಿಧ ಫ್ರಾಂಚೈಸಿ ಪರ ಆಡಿದ್ದರೂ, ಟೀಮ್ ಇಂಡಿಯಾದಲ್ಲಿ ಒಟ್ಟಾಗಿ ಆಡುತ್ತೇವೆ. ನಾವು ಫ್ರಾಂಚೈಸಿ ಪರ ಆಡುವಾಗ ಯಾವ ನಿಲುವು ಹೊಂದಿರುತ್ತೇವೋ, ರಾಷ್ಟ್ರೀಯ ತಂಡದ ಪರವೂ ಅದೇ ನಿಲುವಿನೊಂದಿಗೆ ಆಡಬೇಕೆಂಬುದೇ ನನ್ನ ಅನಿಸಿಕೆ,” ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಬಿಸಿಸಿಐ ಹಾಗೂ ಆಯ್ಕೆ ಮಂಡಳಿಗೆ ಬಿಟ್ಟ ವಿಚಾರ

ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿರುವ ಸಂಜು ಸ್ಯಾಮ್ಸನ್ ಆರಂಭಿಕ ಆಟಗಾರನಾಗಿ ಮುಂದುವರಿಯುತ್ತಾರೋ? ಇಲ್ಲವೋ ಎಂಬುದು ಬಿಸಿಸಿಐ ಹಾಗೂ ಆಯ್ಕೆ ಮಂಡಳಿ ನಿರ್ಧರಿಸುತ್ತದೆ ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.

Sanju Samson: ಮಹಿಳೆಯ ಕೆನ್ನೆಗೆ ಸಿಕ್ಸರ್‌ ಬಾರಿಸಿದ ಸಂಜು ಸ್ಯಾಮ್ಸನ್‌; ಇಲ್ಲಿದೆ ವಿಡಿಯೊ

“ನಾನು ಈ ವಿಷಯದ ಕುರಿತು ಮಾತನಾಡಲು ಬಯಸುವುದಿಲ್ಲ. ನಾನು ಪ್ರಸಕ್ತ ಸರಣಿ ಕುರಿತು ಮಾತ್ರ ಯೋಚಿಸುತ್ತೇನೆ. ಇದು ಸರಣಿ ಗೆಲುವನ್ನು ಸಂಭ್ರಮಿಸುವ ಕ್ಷಣವಾಗಿದೆ. ಪಂದ್ಯದ ವೇಳೆ ನಾವು ತರಬೇತುದಾರರ ಜೊತೆಗೆ ಕುಳಿತುಕೊಳ್ಳುವುದು ಕಠಿಣ ಸಂಗತಿಯಾದರೂ ಇದೊಂದು ಉತ್ತಮ ತಲೆ ನೋವಾಗಿದೆ. ನಿಮ್ಮಲ್ಲಿ 20-25 ಉತ್ತಮ ಆಟಗಾರರಿದ್ದು, ಅದರಲ್ಲಿ ಕೇವಲ 10-15 ಆಟಗಾರರನ್ನು ಆಯ್ಕೆ ಮಾಡುವುದು ನಿಜಕ್ಕೂ ಸವಾಲಿನ ವಿಷಯವಾಗಿದೆ. ಆದರೆ ಈ ಬಿಕ್ಕಟ್ಟನ್ನು ನಿವಾರಿಸುವ ಹೊಣೆಯನ್ನು ಬಿಸಿಸಿಐ ಹಾಗೂ ಆಯ್ಕೆ ಮಂಡಳಿ ನಿಭಾಯಿಸುವುದರಿಂದ ಅವರಿಗೆ ಧನ್ಯವಾದ ತಿಳಿಸುತ್ತೇನೆ,” ಎಂದು ಟಿ20ಐ ತಂಡದ ಕಪ್ತಾನ ಹೇಳಿದ್ದಾರೆ.

ಚಾಂಪಿಯನ್ ಟ್ರೋಫಿಗೂ ಮುನ್ನ ಟೀಮ್ ಇಂಡಿಯಾ, ಇಂಗ್ಲೆಂಡ್ ವಿರುದ್ಧದ ಸವಾಲನ್ನು ಎದುರಿಸಲಿದ್ದು, ತಮ್ಮ ನಾಯಕತ್ವದ ಗೆಲುವಿನ ಓಟವನ್ನು ಮುಂದುವರಿಸಲು ಸೂರ್ಯಕುಮಾರ್ ಯಾದವ್ ಎದುರು ನೋಡುತ್ತಿದ್ದಾರೆ.