Saturday, 23rd November 2024

IND vs SA: ಸಂಜು ಸ್ಫೋಟಕ ಶತಕ, ಡರ್ಬನ್‌ನಲ್ಲಿ ಹರಿಣ ಪಡೆಯನ್ನು ಬೇಟೆಯಾಡಿದ ಭಾರತ!

Sanju Samson's Hundred and Spinners script dominating victory against South Africa in Durban

ಡರ್ಬನ್‌: ಸಂಜು ಸ್ಯಾಮ್ಸನ್‌ರ (107 ರನ್‌) ದಾಖಲೆಯ ಶತಕ ಹಾಗೂ ವರುಣ್‌ ಚಕ್ರವರ್ತಿ (25ಕ್ಕೆ 3) ಮತ್ತು ರವಿ ಬಿಷ್ಣೋಯ್‌ (28ಕ್ಕೆ ) ಅವರ ಸ್ಪಿನ್‌ ಮೋಡಿಯ ಸಹಾಯದಿಂದ ಭಾರತ ತಂಡ, ಮೊದಲನೇ ಟಿ20ಐ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ(IND vs SA) 61 ರನ್‌ಗಳ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ ನಾಲ್ಕು ಪಂದ್ಯಗಳ ಟಿ20ಐ ಸರಣಿಯಲ್ಲಿ ಪ್ರವಾಸಿ ಟೀಮ್‌ ಇಂಡಿಯಾ 1-0 ಮುನ್ನಡೆಯನ್ನು ಪಡೆದಿದೆ.

ಶುಕ್ರವಾರ ಇಲ್ಲಿನ ಕಿಂಗ್ಸ್‌ಮೀಡ್‌ ಕ್ರೀಡಾಂಗಣದಲ್ಲಿ ಭಾರತ ತಂಡ ನೀಡಿದ್ದ 203 ರನ್‌ಗಳ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡ, ವರುಣ್‌ ಚಕ್ರವರ್ತಿ ಮತ್ತು ರವಿ ಬಿಷ್ಣೋಯ್‌ ಅವರ ಸ್ಪಿನ್‌ ಮೋಡಿಗೆ ನಲುಗಿ 17.5 ಓವರ್‌ಗಳಿಗೆ 141 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ತವರು ಅಭಿಮಾನಿಗಳ ಎದುರು ಹರಿಣ ಪಡೆ 61 ರನ್‌ಗಳ ಹೀನಾಯ ಸೋಲು ಅನುಭವಿಸಿತು.

ಬೃಹತ್‌ ಮೊತ್ತದ ಗುರಿ ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡದ ಪರ ಯಾವೊಬ್ಬ ಬ್ಯಾಟ್ಸ್‌ಮನ್‌ ದೀರ್ಘಾವಧಿ ಕ್ರೀಸ್‌ನಲ್ಲಿ ನಿಂತು ಬ್ಯಾಟ್‌ ಮಾಡಲಿಲ್ಲ. ರಿಯಾನ್‌ ರಿಕಲ್ಟನ್‌ (21) ಹಾಗೂ ಹೆನ್ರಿಚ್‌ ಕ್ಲಾಸೆನ್‌ (25 ರನ್‌) ಅವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವೈಯಕ್ತಿಕ 20 ರನ್‌ಗಳನ್ನು ದಾಖಲಿಸುವಲ್ಲಿ ಎಡವಿದರು. ಭಾರತ ತಂಡದ ಸ್ಪಿನ್‌ ಮೋಡಿ ಮಾಡಿದ ವರುಣ್‌ ಚಕ್ರವರ್ತಿ (25-3) ಮತ್ತು ರವಿ ಬಿಷ್ಣೋಯ್‌ (28-3) ತಮ್ಮ-ತಮ್ಮ ಪಾಲಿನ 4 ಓವರ್‌ಗಳ ಸ್ಪೆಲ್‌ ಮುಗಿಸಿ ತಲಾ ಮೂರು ವಿಕೆಟ್‌ಗಳನ್ನು ಪಡೆದರು.

202 ರನ್‌ಗಳನ್ನು ಕಲೆ ಹಾಕಿದ್ದ ಭಾರತ

ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 202 ರನ್‌ಗಳನ್ನು ಕಲೆ ಹಾಕಿತ್ತು. ಟೀಮ್‌ ಇಂಡಿಯಾ ಪರ ಸ್ಪೋಟಕ ಬ್ಯಾಟ್‌ ಮಾಡಿದ್ದ ಸಂಜು ಸ್ಯಾಮ್ಸನ್‌ (107 ರನ್‌) ಶತಕ ಸಿಡಿಸಿದ್ದರೆ, ತಿಲಕ್‌ ವರ್ಮಾ 33 ರನ್‌ ಗಳಿಸಿದ್ದರು.

ಸ್ಫೋಟಕ ಶತಕ ಸಿಡಿಸಿ ವಿಶೇಷ ದಾಖಲೆ ಬರೆದ ಸಂಜು

ಅದ್ಭುತ ಫಾರ್ಮ್‌ ಮೂಲಕ ಮೊದಲನೇ ಟಿ20 ಪಂದ್ಯದ ಕಣಕ್ಕೆ ಇಳಿದಿದ್ದ ಸಂಜು ಸ್ಯಾಮ್ಸನ್‌, ಬಾಂಗ್ಲಾದೇಶ ವಿರುದ್ದ ಕೊನೆಯ ಪಂದ್ಯದಲ್ಲಿ ತೋರಿದ್ದ ಸ್ಫೋಟಕ ಬ್ಯಾಟಿಂಗ್‌ ಅನ್ನು ಇಲ್ಲಿಯೂ ಮುಂದುವರಿಸಿದರು. 47 ಎಸೆತಗಳಲ್ಲಿ ಶತಕ ಬಾರಿಸಿದ ಸಂಜು, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸತತ ಎರಡು ಶತಕಗಳನ್ನು ಸಿಡಿಸಿದ ಭಾರತದ ಮೊದಲನೇ ಬ್ಯಾಟ್ಸ್‌ಮನ್‌ ಎಂಬ ನೂತನ ಮೈಲುಗಲ್ಲು ಸ್ಥಾಪಿಸಿದರು.

ಮೊದಲನೇ ಎಸೆತದಿಂದಲೇ ಸ್ಪೋಟಕ ಬ್ಯಾಟಿಂಗ್‌ಗೆ ಕೈ ಹಾಕಿದ ಸಂಜು, ಎದುರಾಳಿ ಬೌಲರ್‌ಗಳನ್ನು ಮನಬಂದಂತೆ ಥಳಿಸಿದರು. ಎದುರಿಸಿದ 50 ಎಸೆತಗಳಲ್ಲಿ ಬರೋಬ್ಬರಿ 10 ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 107 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಭಾರತ ತಂಡದ ಮೊತ್ತವನ್ನು 200ರ ಸನಿಹ ತರುವಲ್ಲಿ ಪ್ರಮುಖ ಪಾತ್ರವಹಿಸಿದರು. ಸಂಜು ಸ್ಯಾಮ್ಸನ್‌ಗೆ ಕ್ರೀಸ್‌ನಲ್ಲಿ ದೀರ್ಘಾವಧಿ ಸಾಥ್‌ ನೀಡಿದ್ದ ತಿಲಕ್‌ ವರ್ಮಾ 18 ಎಸೆತಗಳಲ್ಲಿ ಸ್ಪೋಟಕ 33 ರನ್‌ಗಳನ್ನು ಕಲೆ ಹಾಕಿ ವಿಕೆಟ್‌ ಒಪ್ಪಿಸಿದ್ದರು. ನಾಯಕ ಸೂರ್ಯಕುಮಾರ್‌ ಯಾದವ್‌ 21 ರನ್‌ಗಳ ಅಲ್ಪ ಕಾಣಿಕೆಯನ್ನು ತಂಡಕ್ಕೆ ನೀಡಿದ್ದರು. ದಕ್ಷಿಣ ಆಫ್ರಿಕಾ ಪರ ಶಿಸ್ತು ಬದ್ದ ಬೌಲಿಂಗ್‌ ದಾಳಿ ನಡೆಸಿದ್ದ ಜೆರಾಲ್ಡ್‌ ಕೊಯೆಡ್ಜೀ 3 ವಿಕೆಟ್‌ ಕಬಳಿಸಿದ್ದರು.

ಸ್ಕೋರ್‌ ವಿವರ

ಭಾರತ: 20 ಓವರ್‌ಗಳಿಗೆ 202-8 (ಸಂಜು ಸ್ಯಾಮ್ಸನ್‌ 107 ರನ್‌, ತಿಲಕ್‌ ವರ್ಮಾ 33, ಸೂರ್ಯಕುಮಾರ್‌ ಯಾದವ್‌ 21 ರನ್‌; ಜೆರಾಲ್ಡ್‌ ಕೊಯೆಡ್ಜೀ 37ಕ್ಕೆ 3)

ದಕ್ಷಿಣ ಆಫ್ರಿಕಾ: 17.5 ಓವರ್‌ಗಳಿಗೆ 141-10 (ಹೆನ್ರಿಚ್‌ ಕ್ಲಾಸೆಲ್‌ 25, ರಿಯಾನ್‌ ರಿಕಲ್ಟನ್‌ 21, ಜೆರಾಲ್ಡ್‌ ಕೊಯೆಡ್ಜಿ 23; ವರುಣ್‌ ಚಕ್ರವರ್ತಿ 25ಕ್ಕೆ 3, ರವಿಬಿಷ್ಣೋಯ್‌ 28ಕ್ಕೆ 3, ಆವೇಶ್‌ ಖಾನ್‌ 28 ಕ್ಕೆ 1)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಸಂಜು ಸ್ಯಾಮ್ಸನ್‌