ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ದ (IND vs SA) ಮೊದಲನೇ ಟಿ20ಐ ಪಂದ್ಯದಲ್ಲಿ ಸ್ಪೋಟಕ ಶತಕ ಸಿಡಿಸಿದ ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಅವರನ್ನು ಬ್ಯಾಟಿಂಗ್ ದಿಗ್ಗಜ ಎಬಿ ಡಿ ವಿಲಿಯರ್ಸ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ನಾನು ಸಂಜು ಸ್ಯಾಮ್ಸನ್ ಅವರ ದೊಡ್ಡ ಅಭಿಮಾನಿ ಎಂದು ಎಬಿಎಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಡರ್ಬನ್‌ನಲ್ಲಿ ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡದ ಪರ ಸಂಜು ಸ್ಯಾಮ್ಸನ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಈ ಪಂದ್ಯದಲ್ಲಿ 47 ಎಸೆತಗಳಲ್ಲಿಎರಡನೇ ಟಿ20ಐ ಶತಕ ಸಿಡಿಸಿದ್ದರು. ಆ ಮೂಲಕ ಭಾರತ ತಂಡ 202 ರನ್‌ಗಳನ್ನು ಕಲೆ ಹಾಕುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಆ ಮೂಲಕ 29ರ ಪ್ರಾಯದ ಬ್ಯಾಟ್ಸ್‌ಮನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಸಂಜು ಸ್ಯಾಮ್ಸನ್ ಬಗ್ಗೆ ಎಬಿಡಿ ಹೇಳಿದ್ದೇನು?
“ಸಂಜು ಸ್ಯಾಮ್ಸನ್ ಅವರು ತಮ್ಮ ಅಗ್ರ ದರ್ಜೆಯ ಆಟವನ್ನು ಆಡಿದ್ದಾರೆ. ಮೂರೂ ಸ್ವರೂಪದ ಸಲುವಾಗಿ ಆಯ್ಕೆದಾರರು ಸಂಜು ಅವರನ್ನು ನೋಡುತ್ತಿದ್ದಾರೆಂದು ನಾನು ಭಾವಿಸುತ್ತೇನೆ. ಸಂಜು ಎಲ್ಲಾ ಸ್ವರೂಪದಲ್ಲಿಯೂ ಭಾರತ ತಂಡವನ್ನು ಪ್ರತಿನಿಧಿಸಬೇಕೆಂದು ನಾನು ಬಯಸುತ್ತೇನೆ. ಇಡೀ ವಿಶ್ವದಾದ್ಯಂತ ಎಲ್ಲಾ ಕಂಡೀಷನ್ಸ್‌ನಲ್ಲಿ ಹಾಗೂ ಮೂರೂ ಸ್ವರೂಪದಲ್ಲಿ ಆಡಬಲ್ಲ ಆಟಗಾರರ ಪೈಕಿ ಸಂಜು ಸ್ಯಾಮ್ಸನ್ ವಿಶೇಷ ಎಂದು ನಾನು ಭಾವಿಸುತ್ತೇನೆ. ಬಲಗೈ ಬ್ಯಾಟ್ಸ್‌ಮನ್ ಸಾಮರ್ಥ್ಯದ ಬಗ್ಗೆ ಕೋಚಿಂಗ್ ಸಿಬ್ಬಂದಿಗೆ ಯಾವುದೇ ಅನುಮಾನ ಬೇಡ,” ಎಂದು ಎಬಿ ಡಿ ವಿಲಿಯರ್ಸ್ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.
ಡರ್ಬನ್‌ನಲ್ಲಿ ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರು ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಅವರು ಅವರು 7 ಬೌಂಡರಿಗಳು ಹಾಗೂ 10 ಸಿಕ್ಸರ್‌ಗಳ ಮೂಲಕ 50 ಎಸೆತಗಳಲ್ಲಿ 107 ರನ್‌ಗಳನ್ನು ದಾಖಲಿಸಿದ್ದರು. ಬಳಿಕ ಭಾರತ ತಂಡ ನೀಡಿದ್ದ 203 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ದಕ್ಷಿಣ ಆಫ್ರಿಕಾ ತಂಡ 141 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಆ ಮೂಲಕ ಟೀಮ್ ಇಂಡಿಯಾ 61 ರನ್‌ಗಳ ಗೆಲುವು ಪಡೆಯುವ ಮೂಲಕ ಟಿ20ಐ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದಿದೆ.
ಸಂಜು ಸ್ಯಾಮ್ಸನ್‌ಗೆ ನಾನು ದೊಡ್ಡ ಅಭಿಮಾನಿ: ಎಬಿಡಿ
ಕಳೆದ ಹಲವು ವರ್ಷಗಳಿಂದ ನಾನು ಕೇರಳ ಮೂಲದ ಬ್ಯಾಟ್ಸ್‌ಮನ್ ಜೊತೆ ಸಂಪರ್ಕದಲ್ಲಿರುವುದಾಗಿ ಇದೇ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ದಿಗ್ಗಜ ಬಹಿರಂಗಪಡಿಸಿದ್ದಾರೆ.
“ಸಂಜು ಸ್ಯಾಮ್ಸನ್ ಬಗ್ಗೆ ನನಗೆ ತುಂಬಾ ಗೌರವವಿದೆ ಹಾಗೂ ತುಂಬಾ ಹೆಮ್ಮೆ ಇದೆ. ಏಕೆಂದರೆ ಅವರೊಂದಿಗೆ ಹಲವು ವರ್ಷಗಳಿಂದ ವೈಯಕ್ತಿಕವಾಗಿ ಸಂಪರ್ಕದಲ್ಲಿದ್ದೇನೆ. ಸಂಜು ಬ್ಯಾಟಿಂಗ್‌ಗೆ ನಾನು ದೊಡ್ಡ ಅಭಿಮಾನಿ. ನಾನು ಅವರ ಆಟವನ್ನು ನೋಡಲು ಯಾವಾಗಲೂ ಇಷ್ಟಪಡುತ್ತೇನೆ ಹಾಗೂ ಅವರು ಚೆನ್ನಾಗಿ ಆಡಬೇಕೆಂಬುದು ನನ್ನ ಆಶಯ,” ಎಂದು ದಕ್ಷಿಣ ಆಫ್ರಿಕಾ ಮಾಜಿ ನಾಯಕ ತಿಳಿಸಿದ್ದಾರೆ.