Thursday, 14th November 2024

IND vs SA: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ; ನಾಳೆ ಅಂತಿಮ ಟಿ20

ಜೊಹಾನ್ಸ್‌ಬರ್ಗ್‌: ಸೆಂಚುರಿಯನ್‌ನಲ್ಲಿ ಮೂರನೇ ಟಿ20 ಪಂದ್ಯ ಗೆದ್ದು ಬೀಗಿರುವ ಟೀಮ್‌ ಇಂಡಿಯಾ ಇದೀಗ ಅಂತಿಮ ಪಂದ್ಯದಲ್ಲಿಯೂ ಇದೇ ಜೋಶ್‌ನೊಂದಿಗೆ ಜೊಹಾನ್ಸ್‌ಬರ್ಗ್‌ನಲ್ಲಿ ಕಣಕ್ಕಿಳಿಯಲಿದೆ. ಸರಣಿಯಲ್ಲಿ 2-1 ಮುನ್ನಡೆಯಲ್ಲಿರುವ ಸೂರ್ಯಕುಮಾರ್‌ ಪಡೆ ಈ ಪಂದ್ಯವನ್ನು ಗೆದ್ದು ಸರಣಿ ಗೆಲ್ಲುವ ಉಮೇದಿನಲ್ಲಿದೆ. ಸರಣಿ ಸೋಲಿನ ಭೀತಿಯಿಂದ ಪಾರಾಗಬೇಕಿದ್ದರೆ ದಕ್ಷಿಣ ಆಫ್ರಿಕಾಗೂ(IND vs SA) ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಹೀಗಾಗಿ ಈ ಪಂದ್ಯವನ್ನು ಹೈವೋಲ್ಟೇಜ್‌ ಎಂದು ನಿರೀಕ್ಷೆ ಮಾಡಬಹುದು.

ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ ಜೋಶ್‌ನಲ್ಲಿರುವ ಎಡಗೈ ಬ್ಯಾಟರ್‌ ತಿಲಕ್‌ ವರ್ಮಾ ಬ್ಯಾಟಿಂಗ್‌ ಪ್ರದರ್ಶನದ ಮೇಲೆ ಈ ಪಂದ್ಯದಲ್ಲಿಯೂ ತಂಡ ಭಾರೀ ನಿರೀಕ್ಷೆ ಇರಿಸಿದೆ. ಆರಂಭಿಕ 2 ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಕಂಡಿದ್ದ ಅಭಿಷೇಕ್‌ ಶರ್ಮ ಮತ್ತೆ ಬ್ಯಾಟಿಂಗ್‌ ಲಯಕ್ಕೆ ಮರಳಿರುವುದು ತಂಡಕ್ಕೆ ಕೊಂಚ ಬಲ ಕೊಟ್ಟಿದೆ. ಆದರೆ, ಶತಕ ಬಾರಿಸಿದ ಬಳಿಕ ಸತತವಾಗಿ 2 ಶೂನ್ಯ ಸುತ್ತಿರುವ ಸಂಜು ಸ್ಯಾಮ್ಸನ್‌ ಫಾರ್ಮ್‌ ಬಗ್ಗೆ ಚಿಂತಿಸುವಂತೆ ಮಾಡಿದೆ. ಜತೆಗೆ ಸೂರ್ಯಕುಮಾರ್‌, ಹಾರ್ದಿಕ್‌ ಅವರ ಬ್ಯಾಟ್‌ ಕೂಡ ಸದ್ದು ಮಾಡುತ್ತಿಲ್ಲ. ರಿಂಕು ಕೂಡ ಕಮಾಲ್‌ ಮಾಡಲು ವಿಫಲರಾಗಿದ್ದಾರೆ. ಹೀಗಾಗಿ ಇವರೆಲ್ಲ ನಾಳಿನ ಪಂದ್ಯದಲ್ಲಿ ಸಿಡಿದು ನಿಲ್ಲಬೇಕಾದ ಅನಿವಾರ್ಯತೆ ಇದೆ.

ಪದಾರ್ಪಣ ಪಂದ್ಯದ ಚೊಚ್ಚಲ ಎಸೆತವನ್ನೇ ಸಿಕ್ಸರ್‌ಗೆ ಬಡಿದಿಟ್ಟಿದ್ದ ರಮಣ್‌ದೀಪ್‌ ಸಿಂಗ್‌ ಮೇಲು ಭಾರೀ ನಿರೀಕ್ಷೆ ಇರಿಸಲಾಗಿದೆ. ಬೌಲಿಂಗ್‌ನಲ್ಲಿ ಅರ್ಷದೀಪ್‌ ಸಿಂಗ್‌ ಮತ್ತು ವರಣ್‌ ಚಕ್ರವರ್ತಿ ಉತ್ತಮ ಲಯದಲ್ಲಿದ್ದು ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಇದೇ ಪ್ರದರ್ಶನವನ್ನು ಅಂತಿಮ ಪಂದ್ಯದಲ್ಲಿಯೂ ಮುಂದುವರಿಸಿದ್ದೇ ಆದಲ್ಲಿ ಭಾರತಕ್ಕೆ ಗೆಲುವು ನಿಶ್ಚಿತ ಎನ್ನಲಡ್ಡಿಯಿಲ್ಲ. ಭಾರತ ಕಳೆದ ಪಂದ್ಯದ ತಂಡವನ್ನೇ ಈ ಪಂದ್ಯದಲ್ಲಿಯೂ ಕಣಕ್ಕಿಳಿಸಬಹುದು.

ಇದನ್ನೂ ಓದಿ IND vs SA: ಮೂರನೇ ಕ್ರಮಾಂಕವನ್ನು ತಿಲಕ್‌ ವರ್ಮಾಗೆ ತ್ಯಾಗ ಮಾಡಲು ಕಾರಣ ತಿಳಿಸಿದ ಸೂರ್ಯ!

ದಕ್ಷಿಣ ಆಫ್ರಿಕಾ ತಂಡದಲ್ಲಿ ಡೇವಿಡ್‌ ಮಿಲ್ಲರ್‌, ಕ್ಲಾಸೆನ್‌, ನಾಯಕ ಮಾರ್ಕ್ರಮ್‌ ಅವರಂತಹ ಅಪಾಯಕಾರಿ ಬ್ಯಾಟರ್‌ಗಳಿದ್ದರೂ ಇವರಿಂದ ಇದುವರೆಗೂ ನಿರೀಕ್ಷಿತ ಪ್ರದರ್ಶನ ಕಂಡುಬಂದಿಲ್ಲ. ಇದು ದಕ್ಷಿಣ ಆಫ್ರಿಕಾಗೆ ಹಿನ್ನಡೆಯಾಗಿ ಪರಿಣಮಿಸಿದೆ.

ಪಿಚ್‌ ರಿಪೋರ್ಟ್‌

ವಾಂಡರರ್ ಸ್ಟೇಡಿಯಂನ ಪಿಚ್‌ ಬ್ಯಾಟರ್‌ಗಳಿಗೆ ಹೇಳಿ ಮಾಡಿಸಿದಂತಿದೆ. ಇಲ್ಲಿ ನಡೆದಿರುವ ಬಹುತೇಕ ಎಲ್ಲ ಚುಟುಕು ಪಂದ್ಯದಲ್ಲಿಯೂ ಬೃಹತ್‌ ಮೊತ್ತ ದಾಖಲಾಗಿದೆ. ಕನಿಷ್ಠ 200 ರನ್‌ ಗಳಿಸಲು ಇಲ್ಲಿ ಯಾವುದೇ ಸಮಸ್ಯೆಯಿಲ್ಲ. ಹೀಗಾಗಿ ಬೌಲರ್‌ಗಳು ಶಕ್ತಿ ಮೀರಿದ ಪ್ರದರ್ಶನ ತೋರುವ ಅಗತ್ಯವಿದೆ. ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು.