Wednesday, 13th November 2024

IND vs SA: ವರುಣ್‌ ಚಕ್ರವರ್ತಿ ಸ್ಪಿನ್‌ ಮ್ಯಾಜಿಕ್‌ ವ್ಯರ್ಥ, ಹರಿಣ ಪಡೆಗೆ ಒಲಿದ ಜಯ!

IND vs SA: South Africa won by 3 Wickets against India in 2nd T20I at St George's Park, Gqeberha

ಮೆಬೇಕ(ದಕ್ಷಿಣ ಆಫ್ರಿಕಾ): ವರುಣ್‌ ಚಕ್ರವರ್ತಿ (17ಕ್ಕೆ5) ಸ್ಪಿನ್‌ ಮೋಡಿಯ ಹೊರತಾಗಿಯೂ ಟ್ರಿಸ್ಟನ್‌ ಸ್ಟಬ್ಸ್‌ (47ರನ್ ) ಹಾಗೂ ಜೆರಾಲ್ಡ್‌ ಕೊಯೆಡ್ಜಿ (19ರನ್‌ ) ನಿರ್ಣಾಯಕ ಬ್ಯಾಟಿಂಗ್‌ನಿಂದ ದಕ್ಷಿಣ ಆಫ್ರಿಕಾ ತಂಡ (IND vs SA) ಎರಡನೇ ಟಿ20ಐ ಪಂದ್ಯದಲ್ಲಿ ಭಾರತದ ವಿರುದ್ಧ 3 ವಿಕೆಟ್‌ಗಳ ಜಯ ಸಾಧಿಸಿತು. ಆ ಮೂಲಕ ಮೊದಲನೇ ಪಂದ್ಯ ಸೋತಿದ್ದ ಆತಿಥೇಯರು ಎರಡನೇ ಪಂದ್ಯದಲ್ಲಿ ಕಮ್‌ಬ್ಯಾಕ್‌ ಮಾಡಿದ್ದಾರೆ.

ಭಾನುವಾರ ಮೆಬೇಕದ ಸೇಂಟ್‌ ಜಾರ್ಜ್‌ ಕ್ರೀಡಾಂಗಣದಲ್ಲಿ ಭಾರತ ನೀಡಿದ್ದ 125 ರನ್‌ಗಳ ಸಾಧಾರಣ ಗುರಿಯನ್ನು ಹಿಂಬಾಲಿಸಿದ ಆತಿಥೇಯ ದಕ್ಷಿಣ ಆಫ್ರಿಕಾ ತಂಡ, 19 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 128 ರನ್‌ ಗಳಿಸಿ ಗೆಲುವಿನ ದಡ ಸೇರಿತು. ಒಂದು ಹಂತದಲ್ಲಿ ವರುಣ್‌ ಚಕ್ರವರ್ತಿ ಸ್ಪಿನ್‌ ಮೋಡಿಗೆ ನಲುಗಿದ್ದ ಹರಿಣ ಪಡೆ 86 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡು ಸೋಲಿನಂಚಿಗೆ ತಲುಪಿತ್ತು. ಆದರೆ, ಟ್ರಿಸ್ಟನ್‌ ಸ್ಟಬ್ಸ್‌ ಮತ್ತು ಜೆರಾಲ್ಡ್‌ ಕೊಯೆಡ್ಜಿ 42 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೊನೆಯವರೆಗೂ ಜವಾಬ್ದಾರಿಯುತ ಬ್ಯಾಟ್‌ ಮಾಡಿದ ಟ್ರಿಸ್ಟನ್‌ ಸ್ಟಬ್ಸ್‌ 41 ಎಸೆತಗಳಲ್ಲಿ ಅಜೇಯ 47 ರನ್‌ ಗಳಿಸಿ ಆಫ್ರಿಕಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇವರಿಗೆ 8ನೇ ವಿಕೆಟ್‌ಗೆ ಜೊತೆಯಾಗಿದ್ದ ಜೆರಾಲ್ಡ್‌ ಕೊಯೆಡ್ಜಿ ಅಜೇಯ 19 ರನ್‌ ಗಳಿಸಿದರು.

ವರುಣ್‌ ಚಕ್ರವರ್ತಿ 5 ವಿಕೆಟ್‌ ಸಾಧನೆ

ಭಾರತ ತಂಡ ಎದುರಾಳಿ ತಂಡಕ್ಕೆ ಅಲ್ಪ ಮೊತ್ತದ ಗುರಿ ನೀಡಿದ್ದ ಕಾರಣ ಭಾರತ ತಂಡ ಸೋಲುವುದು ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ, ವರುಣ್‌ ಚಕ್ರವರ್ತಿ ತಮ್ಮ ಸ್ಪಿನ್‌ ಮೋಡಿಯಿಂದ ಪಂದ್ಯದ ದಿಕ್ಕನ್ನು ಬದಲಿಸಿದ್ದರು. ಬೌಲ್‌ ಮಾಡಿದ ನಾಲ್ಕು ಓವರ್‌ಗಳಿಗೆ ಕೇವಲ 17 ರನ್‌ ನೀಡಿ 5 ವಿಕೆಟ್‌ ಸಾಧನೆ ಮಾಡಿದರು. ರೀಝಾ ಹೆಂಡ್ರಿಕ್ಸ್‌, ಏಡೆನ್‌ ಮಾರ್ಕ್ರಮ್‌, ಮಾರ್ಕೊ ಯೆನ್ಸನ್‌, ಹೆನ್ರಿಚ್‌ ಕ್ಲಾಸೆನ್‌ ಹಾಗೂ ಡೇವಿಡ್‌ ಮಿಲ್ಲರ್‌ ಸೇರಿ ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ವರುಣ್‌ ಔಟ್‌ ಮಾಡಿ ಭಾರತ ತಂಡವನ್ನು ಬಹುತೇಕ ಗೆಲುವಿನ ಸನಿಹಕ್ಕೆ ತಂದಿದ್ದರು. ಆದರೆ, ಅರ್ಷದೀಪ್‌ ಸಿಂಗ್‌ ಹಾಗೂ ಆವೇಶ್‌ ಖಾನ್‌ ಅವರು ಡೆತ್‌ ಓವರ್‌ಗಳಲ್ಲಿ ಹೆಚ್ಚಿನ ರನ್‌ಗಳನ್ನು ನೀಡುವ ಮೂಲಕ ಭಾರತ ತಂಡದ ಗೆಲುವಿನ ಕನಸನ್ನು ಭಗ್ನಗೊಳಿಸಿದರು.

124 ರನ್‌ ಕಲೆ ಹಾಕಿದ ಭಾರತ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಭಾರತ ತಂಡ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಹಾರ್ದಿಕ್‌ ಪಾಂಡ್ಯ (39ರನ್‌) ಅವರ ನಿರ್ಣಾಯಕ ರನ್‌ಗಳ ಹೊರತಾಗಿಯೂ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಭಾರತ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 124 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ 125 ರನ್‌ಗಳ ಸಾಧಾರಣ ಗುರಿಯನ್ನು ನೀಡಿತ್ತು.

ಭಾರತ ತಂಡಕ್ಕೆ ಆರಂಭಿಕ ಆಘಾತ

ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಸಂಜು ಸ್ಯಾಮ್ಸನ್‌ ಹಾಗೂ ಅಭಿಷೇಕ್‌ ಶರ್ಮಾ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ಮೊದಲನೇ ಪಂದ್ಯದಲ್ಲಿ ಶತಕ ಸಿಡಿಸಿದ್ದ ಸಂಜು ಸ್ಯಾಮ್ಸನ್‌, ಈ ಪಂದ್ಯದಲ್ಲಿ ಎದುರಿಸಿದ ಮೂರು ಎಸೆತಗಳಲ್ಲಿ ಖಾತೆ ತೆರೆಯದೆ ಮಾರ್ಕೊ ಯೆನ್ಸನ್‌ಗೆ ಕ್ಲೀನ್‌ ಬೌಲ್ಡ್‌ ಆದರು. ಇದರ ಬೆನ್ನಲ್ಲೆ ಅಭಿಷೇಕ್‌ ಶರ್ಮಾ ಮತ್ತು ನಾಯಕ ಸೂರ್ಯಕುಮಾರ್‌ ಯಾದವ್‌ ತಲಾ 4 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.

ಆದರೆ, ಮಧ್ಯಮ ಕ್ರಮಾಂಕದಲ್ಲಿ ಕೊಂಚ ಪ್ರತಿರೋಧ ತೋರಿದ ಎಡಗೈ ಬ್ಯಾಟ್ಸ್‌ಮನ್‌ ತಿಲಕ್‌ ವರ್ಮಾ 20 ಎಸೆತಗಳಲ್ಲಿ 20 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ತಿಲಕ್‌ ವರ್ಮಾ ವಿಕೆಟ್‌ ಒಪ್ಪಿಸಿದ ಬಳಿಕ ಅಕ್ಷರ್‌ ಪಟೇಲ್‌ 21 ಎಸೆತಗಳಲ್ಲಿ 27 ರನ್‌ಗಳನ್ನು ಕಲೆ ಹಾಕಿದರು. ಆದರೆ ಉತ್ತಮ ಪ್ರದರ್ಶನ ತೋರುತ್ತಿದ್ದ ಅಕ್ಷರ್‌, ಅಚ್ಚರಿ ರೀತಿಯಲ್ಲಿ ರನ್‌ಔಟ್‌ ಆದರು. ಆದರೆ, ಕೊನೆಯವರೆಗೂ ಬ್ಯಾಟ್‌ ಮಾಡಿದ ಹಾರ್ದಿಕ್‌ ಪಾಂಡ್ಯ 45 ಎಸೆತಗಳಲ್ಲಿ ನಿರ್ಣಾಯಕ 39 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಭಾರತ ತಂಡ 124 ರನ್‌ಗಳನ್ನು ಕಲೆ ಹಾಕಲು ಸಾಧ್ಯವಾಯಿತು.

ಸ್ಕೋರ್‌ ವಿವರ

ಭಾರತ: 20 ಓವರ್‌ಗಳಿಗೆ 124-6 (ಹಾರ್ದಿಕ್‌ ಪಾಂಡ್ಯ 39 ರನ್‌, ಅಕ್ಷರ್‌ ಪಟೇಲ್‌ 27, ತಿಲಕ್‌ ವರ್ಮಾ 20; ಮಾರ್ಕೊ ಯೆನ್ಸನ್‌ 25 ಕ್ಕೆ 1, ಜೆರಾಲ್ಡ್‌ ಕೊಯೆಡ್ಜಿ 25 ಕ್ಕೆ1, ಏಡೆನ್‌ ಮಾರ್ಕ್ರಮ್‌ 4ಕ್ಕೆ1)

ದಕ್ಷಿಣ ಆಫ್ರಿಕಾ: 19 ಓವರ್‌ಗಳಿಗೆ 128-7 (ಟ್ರಿಸ್ಟನ್‌ ಸ್ಟಬ್ಸ್‌ 47, ರೀಝಾ ಹೆಂಡ್ರಿಕ್ಸ್‌ 24, ಜೆರಾಲ್ಡ್‌ ಕೋಯೆಡ್ಜಿ 19; ವರುಣ್‌ ಚಕ್ರವರ್ತಿ 17ಕ್ಕೆ 5)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಟ್ರಿಸ್ಟನ್‌ ಸ್ಟಬ್ಸ್‌

ಈ ಸುದ್ದಿಯನ್ನು ಓದಿ: IND vs SA: ಡಕ್‌ಔಟ್‌ ಆಗುವ ಮೂಲಕ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಸಂಜು ಸ್ಯಾಮ್ಸನ್‌!