Saturday, 23rd November 2024

IND vs SA: ಚೊಚ್ಚಲ ಟಿ20ಐ ಶತಕ ಸಿಡಿಸಿ ವಿಶ್ವ ದಾಖಲೆ ಬರೆದ ತಿಲಕ್‌ ವರ್ಮಾ!

Tilak Varma Becomes First Youngest Players T0 Score T20 Century vs South Africa

ಸೆಂಚುರಿಯನ್‌: ದಕ್ಷಿಣ ಆಫ್ರಿಕಾ ವಿರುದ್ದ ಮೂರನೇ ಟಿ20ಐ ಪಂದ್ಯದಲ್ಲಿ (IND vs SA) ಭಾರತ ತಂಡದ ಯುವ ಬ್ಯಾಟ್ಸ್‌ಮನ್‌ ತಿಲಕ್‌ ವರ್ಮಾ ತಮ್ಮ ಚೊಚ್ಚಲ ಶತಕವನ್ನು ಸಿಡಿಸಿದ್ದಾರೆ. 51 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದ ತಿಲಕ್‌ ವರ್ಮಾ, ವಿಶ್ವ ದಾಖಲೆಯನ್ನು ಬರೆದಿದ್ದಾರೆ ಹಾಗೂ ಭಾರತ ತಂಡದ ಮಾಜಿ ಆಲ್‌ರೌಂಡರ್‌ ಸುರೇಶ್‌ ರೈನಾ ಅವರ 14 ವರ್ಷಗಳ ಹಳೆ ದಾಖಲೆಯನ್ನು ಮುರಿದಿದ್ದಾರೆ.

ಇಲ್ಲಿನ ಸೂಪರ್‌ಸ್ಪೋರ್ಟ್‌ ಪಾರ್ಕ್‌ ಸ್ಟೇಡಿಯಂನಲ್ಲಿ ಬುಧವಾರ ನಡೆದಿದ್ದ ಮೂರನೇ ಟಿ20ಐ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಸಂಜು ಸ್ಯಾಮ್ಸನ್‌ ಎರಡನೇ ಎಸೆತದಲ್ಲಿ ಮಾರ್ಕೊ ಯೆನ್ಸನ್‌ಗೆ ಕ್ಲೀನ್‌ ಬೌಲ್ಡ್‌ ಆದರು. ನಂತರ ಮೂರನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಕ್ರೀಸ್‌ಗೆ ಬಂದ ತಿಲಕ್‌ ವರ್ಮಾ, ತಾವು ಎದುರಿಸಿದ ಮೊದಲನೇ ಎಸೆತದಿಂದಲೇ ಸ್ಪೋಟಕ ಬ್ಯಾಟಿಂಗ್‌ಗೆ ಕೈ ಹಾಕಿದರು.

IND vs SA: ಸತತ ಎರಡನೇ ಬಾರಿ ಡಕ್‌ಔಟ್‌ ಆಗಿ ಅನಗತ್ಯ ದಾಖಲೆ ಬರೆದ ಸಂಜು ಸ್ಯಾಮ್ಸನ್‌!

ದಕ್ಷಿಣ ಆಫ್ರಿಕಾ ತಂಡದ ಬೌಲರ್‌ಗಳ ಎದುರು ಆಕ್ರಮಣಕಾರಿ ಬ್ಯಾಟಿಂಗ್‌ ಪ್ರದರ್ಶನ ತೋರಿದ ತಿಲಕ್‌ ವರ್ಮಾ, ಆರಂಭಿಕ ಅಭಿಷೇಕ್‌ ಶರ್ಮಾ ಅವರ ಜೊತೆಗೂಡಿ ಮುರಿಯದ ಎರಡನೇ ವಿಕೆಟ್‌ಗೆ 50 ಎಸೆತಗಳಲ್ಲಿ 107 ರನ್‌ಗಳ ಜೊತೆಯಾಟವನ್ನು ಆಡಿದರು. 25 ಎಸೆತಗಳಲ್ಲಿ ಅಭಿಷೇಕ್‌ ಶರ್ಮಾ ಅರ್ಧಶತಕ ಸಿಡಿಸಿ ವಿಕೆಟ್‌ ಒಪ್ಪಿಸಿದರು. ನಂತರ ಸೂರ್ಯಕುಮಾರ್‌ ಯಾದವ್‌, ಹಾರ್ದಿಕ್‌ ಪಾಂಡ್ಯ ಹಾಗೂ ರಿಂಕು ಸಿಂಗ್‌ ಬಹುಬೇಗ ವಿಕೆಟ್‌ ಒಪ್ಪಿಸಿದರು.

ಚೊಚ್ಚಲ ಶತಕ ಸಿಡಿಸಿದ ಎಡಗೈ ಬ್ಯಾಟರ್‌

ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಸ್ಪೋಟಕ ಬ್ಯಾಟ್‌ ಮಾಡಿದ ತಿಲಕ್‌ ವರ್ಮಾ, ಹರಿಣ ಪಡೆಯ ಬೌಲರ್‌ಗಳಿಗೆ ಬೆವರಿಳಿಸಿದರು. ಒಟ್ಟು 56 ಎಸೆತಗಳನ್ನು ಆಡಿದ ತಿಲಕ್‌, 191.07ರ ಸ್ಟ್ರೈಕ್‌ ರೇಟ್‌ನಲ್ಲಿ 7 ಭರ್ಜರಿ ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ ಅಜೇಯ 107 ರನ್‌ಗಳನ್ನು ಸಿಡಿಸಿದರು. ಮತ್ತೊಂದು ತುದಿಯಲ್ಲಿ ಡೆಬ್ಯೂಂಟಂಟ್‌ ರಮಣ್‌ಸಿಂಗ್‌ ಆರು ಎಸೆತಗಳಲ್ಲಿ ಅಜೇಯ 15 ರನ್‌ ಸಿಡಿಸಿದರು.

ವಿಶ್ವ ದಾಖಲೆ ಬರೆದ ತಿಲಕ್‌ ವರ್ಮಾ

ದಕ್ಷಿಣ ಆಫ್ರಿಕಾ ವಿರುದ್ಧ ಟಿ20ಐ ಶತಕ ಸಿಡಿಸಿದ ವಿಶ್ವದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್‌ ಎಂಬ ವಿಶ್ವ ದಾಖಲೆಯನ್ನು ತಿಲಕ್‌ ವರ್ಮಾ ಬರೆದಿದ್ದಾರೆ. 2010ರ ಟಿ20 ವಿಶ್ವಕಪ್‌ ಟೂರ್ನಿಯ ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದಲ್ಲಿ 23ರ ವಯಸ್ಸಿನಲ್ಲಿ ಮಾಜಿ ಆಲ್‌ರೌಂಡರ್‌ ಸುರೇಶ್‌ ರೈನಾ ಶತಕ ಸಿಡಿಸಿದ್ದರು. ಇದೀಗ 23ರ ಹರೆಯದ ತಿಲಕ್‌ ವರ್ಮಾ ಈ ದಾಖಲೆಯನ್ನು ಮುರಿದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ದ ಟಿ20ಐ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್‌ಗಳು

ತಿಲಕ್‌ ವರ್ಮಾ (ಭಾರತ)- 22 ವರ್ಷಗಳು 4 ದಿನಗಳು-2024-ಸೆಂಚುರಿಯನ್‌
ಸುರೇಶ್ ರೈನಾ (ಭಾರತ)- 23 ವರ್ಷಗಳು, 156 ದಿನಗಳು-2010-ಗ್ರಾಸ್ ಐಲೆಟ್
ಮಾರ್ಟಿನ್‌ ಗಪ್ಟಿಲ್ (ನ್ಯೂಜಿಲೆಂಡ್) 26 ವರ್ಷಗಳು, 84 ದಿನಗಳು-2012- ಪೂರ್ವ ಲಂಡನ್
ಬಾಬರ್ ಅಝಮ್ (ಪಾಕಿಸ್ತಾನ)-26 ವರ್ಷಗಳು, 181 ದಿನಗಳು-2021-ಸೆಂಚುರಿಯನ್
ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್)-27 ವರ್ಷಗಳು, 355 ದಿನಗಳು-2007-ಜೋಹಾನ್ಸ್‌ಬರ್ಗ್