Monday, 25th November 2024

IND vs SA: ತಮ್ಮ ಬ್ಯಾಟಿಂಗ್‌ ಯಶಸ್ಸಿನ ಶ್ರೇಯವನ್ನು ಸೂರ್ಯಗೆ ಸಮರ್ಪಿಸಿದ ಸಂಜು ಸ್ಯಾಮ್ಸನ್‌!

Sanju Samson Reveals Honest Chat With India Captain Suryakumar Yadav

ಡರ್ಬನ್‌: ದಕ್ಷಿಣ ವಿರುದ್ದ ಮೊದಲನೇ ಟಿ20ಐ ಪಂದ್ಯದಲ್ಲಿ (IND vs SA) ಸಂಜು ಸ್ಯಾಮ್ಸನ್‌ (Sanju Samson) ಭರ್ಜರಿ ಶತಕ ಸಿಡಿಸಿ ಭಾರತ ತಂಡದ 61 ರನ್‌ಗಳ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಬಳಿಕ ಮಾತನಾಡಿದ ಸಂಜು ಸ್ಯಾಮ್ಸನ್‌, ತಮ್ಮ ಬ್ಯಾಟಿಂಗ್‌ ಯಶಸ್ಸಿನ ಶ್ರೇಯವನ್ನು ನಾಯಕ ಸೂರ್ಯಕುಮಾರ್‌ ಯಾದವ್‌ಗೆ ಸಮರ್ಪಿಸಿದರು ಹಾಗೂ ದುಲೀಪ್‌ ಟ್ರೋಫಿ ಸಮಯದಲ್ಲಿ ಸೂರ್ಯಕುಮಾರ್‌ ಯಾದವ್‌ ಹೇಳಿದ್ದ ಮಾತನ್ನು ಬಹಿರಂಗಪಡಿಸಿದ್ದಾರೆ.

ಶುಕ್ರವಾರ ಇಲ್ಲಿನ ಕಿಂಗ್ಸ್‌ಮೀಡ್‌ ಸ್ಟೇಡಿಯಂನಲ್ಲಿ ನಡೆದಿದ್ದ ಮೊದಲನೇ ಟಿ20 ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಸಂಜು ಸ್ಯಾಮ್ಸನ್‌ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಅವರು ಆಡಿದ್ದ 50 ಎಸೆತಗಳಲ್ಲಿ 107 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸತತ ಎರಡನೇ ಶತಕವನ್ನು ಸಿಡಿಸಿದ್ದರು. ಸಂಜು ಶತಕದ ಬಲದಿಂದ ಭಾರತ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 202 ರನ್‌ಗಳನ್ನು ಗಳಿಸಿತ್ತು ಹಾಗೂ ದಕ್ಷಿಣ ಆಫ್ರಿಕಾ ತಂಡಕ್ಕೆ 203 ರನ್‌ಗಳ ಗುರಿಯನ್ನು ನೀಡಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಆಫ್ರಿಕಾ 141 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು.

ಇದಕ್ಕೂ ಮುನ್ನ ಬಾಂಗ್ಲಾದೇಶ ವಿರುದ್ಧದ ತಮ್ಮ ಕೊನೆಯ ಪಂದ್ಯದಲ್ಲಿಯೂ ಸಂಜು ಸ್ಯಾಮ್ಸನ್‌ ಶತಕವನ್ನು ಸಿಡಿಸಿದ್ದರು. ಈ ಪಂದ್ಯದಲ್ಲಿ ಅವರು 111 ರನ್‌ಗಳನ್ನು ಸಿಡಿಸಿದ್ದರು. ಇದು ಸಂಜು ಅವರ ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ನಲ್ಲಿ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಪಂದ್ಯದ ಬಳಿಕ ಜಿಯೋ ಸಿನಿಮಾ ಜೊತೆ ಮಾತನಾಡಿದ ಸಂಜು ಸ್ಯಾಮ್ಸನ್‌, ದುಲೀಪ್‌ ಟ್ರೋಫಿ ಪಂದ್ಯದ ವೇಳೆ ಸೂರ್ಯಕುಮಾರ್‌ ಯಾದವ್‌ ತನಗೆ ಹೇಳಿದ್ದ ಮಾತನ್ನು ರಿವೀಲ್‌ ಮಾಡಿದ್ದಾರೆ.

ಮುಂದಿನ 7 ಪಂದ್ಯಗಳಲ್ಲಿ ನೀವೇ ಓಪನರ್‌: ಸಂಜು

“ದುಲೀಪ್‌ ಟ್ರೋಫಿ ಆಡುವ ಸಂದರ್ಭದಲ್ಲಿ ಸೂರ್ಯಕುಮಾರ್‌ ಯಾದವ್‌ ಅವರು ನನ್ನ ಬಳಿ ಬಂದು, ʼಮುಂದಿನ 7 ಪಂದ್ಯಗಳಲ್ಲಿ ನೀವೇ ಇನಿಂಗ್ಸ್‌ ಆರಂಭಿಸಲಿದ್ದೀರಿ, ನೀವು ಎಷ್ಟು ರನ್‌ಗಳನ್ನು ಹೊಡೆದರೂ ಯಾವುದೇ ಪರವಾಗಿಲ್ಲʼ ಎಂದು ನನಗೆ ಹೇಳಿದ್ದರು. ನನಗೆ ಅವರು ಈ ರೀತಿಯ ಭರವಸೆಯನ್ನು ನೀಡಿದ್ದರು. ನಾಯಕರಾದವರು ಈ ರೀತಿ ಮಾತನಾಡುವುದರಿಂದ ನಿಮಗೆ ಹೆಚ್ಚುವರಿ ವಿಶ್ವಾಸ ಉಂಟಾಗುತ್ತದೆ,” ಎಂದು ಜಿಯೋ ಸಿನಿಮಾಗೆ ಸಂಜು ಸ್ಯಾಮ್ಸನ್‌ ತಿಳಿಸಿದ್ದಾರೆ.

ರವಿ ಶಾಸ್ತ್ರಿ ಮಾತನ್ನು ನೆನೆದ ಸಂಜು

ಕಳೆದ ತಿಂಗಳು ಬಾಂಗ್ಲಾದೇಶ ವಿರುದ್ದದ ಟಿ20 ಸರಣಿಯ ವೇಳೆ ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ ನೀಡಿದ್ದ ಸಲಹೆಯನ್ನು ಇದೇ ವೇಳೆ ಸಂಜು ಸ್ಯಾಮ್ಸನ್‌ ಬಹಿರಂಗಪಡಿಸಿದ್ದಾರೆ.

“ಹೈದರಾಬಾದ್‌ನಲ್ಲಿ ಬಾಂಗ್ಲಾದೇಶ ವಿರುದ್ದದ ಪಂದ್ಯಕ್ಕೂ ಮುನ್ನ ರವಿ ಶಾಸ್ತ್ರಿ ನನಗೆ ಸಲಹೆ ನೀಡಿದ್ದರು. ʼಸಂಜು! ನಿಮಗೆ ದೊಡ್ಡ ಶತಕದ ಅಗತ್ಯವಿದೆ. ನಾನು ನಿಮಗೆ ಹೇಳುತ್ತಿದ್ದೇನೆ ಹಾಗೂ ನೀವು ಹೊಡೆಯುತ್ತೀರಿ,ʼ ಎಂದು ಹೇಳಿದ್ದರು. ಇದೀಗ ಶತಕವನ್ನು ಸಿಡಿಸಿದ್ದೇನೆ. ಇದರಿಂದ ನಮಗೆ ಹಾಗೂ ಎಲ್ಲರಿಗೂ ತುಂಬಾ ಖುಷಿಯಾಗುತ್ತಿದೆ,” ಎಂದು ಸಂಜು ಸ್ಯಾಮ್ಸನ್‌ ತಿಳಿಸಿದ್ದಾರೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟಿ20ಐ ಪಂದ್ಯ ಭಾನುವಾರ ಜಿಕೆಬೆರಾದಲ್ಲಿ ನಡೆಯಲಿದೆ.

ಈ ಸುದ್ದಿಯನ್ನು ಓದಿ: IND vs SA: ಸಂಜು ಸ್ಫೋಟಕ ಶತಕ, ಡರ್ಬನ್‌ನಲ್ಲಿ ಹರಿಣ ಪಡೆಯನ್ನು ಬೇಟೆಯಾಡಿದ ಭಾರತ!