ದುಬಾೖ: ಆಸ್ಟ್ರೇಲಿಯ ವಿರುದ್ಧದ ಅಭ್ಯಾಸ ಪಂದ್ಯದಲ್ಲೂ ಜಯಭೇರಿ ಮೊಳಗಿಸಿದ ಭಾರತ ಟಿ20 ವಿಶ್ವಕಪ್ ಪಂದ್ಯಾವಳಿಗೆ ಭರ್ಜರಿ ತಾಲೀಮು ನಡೆಸಿದೆ.
ಬುಧವಾರದ ದ್ವಿತೀಯ ಹಾಗೂ ಕೊನೆಯ ಅಭ್ಯಾಸ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳಿಂದ ಆರನ್ ಫಿಂಚ್ ಪಡೆಗೆ ಪಂಚ್ ಕೊಟ್ಟಿತು. ಆಸ್ಟ್ರೇಲಿಯ 5 ವಿಕೆಟಿಗೆ 152 ರನ್ ಮಾಡಿ ಸವಾಲೊಡ್ಡಿದರೆ, ಭಾರತ 17.5 ಓವರ್‌ಗಳಲ್ಲಿ ಒಂದೇ ವಿಕೆಟಿಗೆ ಗುರಿ ಮುಟ್ಟಿತು. ಮೊದಲ ಪ್ರ್ಯಾಕ್ಟೀಸ್ ಗೇಮ್‌ನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡನ್ನು ಪರಾಭವಗೊಳಿಸಿತ್ತು.
ಇಂಗ್ಲೆಂಡ್ ವಿರುದ್ಧ ಸಿಡಿದು ನಿಂತ ಕೆ.ಎಲ್. ರಾಹುಲ್ ಆಸ್ಟ್ರೇಲಿಯದ ಬೌಲರ್‌ಗಳ ಮೇಲೂ ದಂಡೆತ್ತಿ ಹೋದರು. ಈ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ ರೋಹಿತ್ ಶರ್ಮ ಕಪ್ತಾನನ ಆಟವಾಡಿದರು. ಸೂರ್ಯಕುಮಾರ್ ಯಾದವ್ ಕೂಡ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಸಿಕ್ಸರ್ ಸಿಡಿಸಿ ಭಾರತದ ಗೆಲುವನ್ನು ಸಾರಿದರು.
ರೋಹಿತ್ ಶರ್ಮ ಸೊಗಸಾದ ಬ್ಯಾಟಿಂಗ್ ಮೂಲಕ ಪಂದ್ಯದಲ್ಲೇ ಸರ್ವಾಧಿಕ 60 ರನ್ ಮಾಡಿದರು. 41 ಎಸೆತಗಳ ಈ ಆಟದ ವೇಳೆ 5 ಬೌಂಡರಿ, 3 ಸಿಕ್ಸರ್ ಸಿಡಿಯಲ್ಪಟ್ಟಿತು. ರಾಹುಲ್ ಕೊಡುಗೆ 31 ಎಸೆತಗಳಿಂದ 39 ರನ್. ಸಿಡಿಸಿದ್ದು 2 ಫೋರ್, 3 ಸಿಕ್ಸರ್. ರೋಹಿತ್- ರಾಹುಲ್ 9.2 ಓವರ್ ಜತೆಯಾಟ ನಿಭಾಯಿಸಿ 68 ರನ್ ಪೇರಿಸಿ ಭದ್ರ ಬುನಾದಿ ನಿರ್ಮಿಸಿದರು. ಸೂರ್ಯಕುಮಾರ್ 27 ಎಸೆತಗಳಿಂದ ಅಜೇಯ 38 ರನ್ ಹೊಡೆದರು (5 ಬೌಂಡರಿ, 1 ಸಿಕ್ಸರ್).
ಆಸ್ಟ್ರೇಲಿಯ ಕಡೆಯಿಂದ 8 ಮಂದಿ ಬೌಲಿಂಗ್ ದಾಳಿಗಿಳಿದರೂ ಯಶಸ್ಸು ಗಳಿಸಿದವರು ಅಗರ್ ಮಾತ್ರ. ಸ್ಟಾರ್ಕ್, ಕಮಿನ್ಸ್, ಝಂಪ, ರಿಚರ್ಡ್‌ಸನ್, ಸ್ಟೋಯಿನಿಸ್, ಮ್ಯಾಕ್ಸ್‌ವೆಲ್ ಎಲ್ಲರೂ “ವಿಕೆಟ್ ಲೆಸ್’ ಎನಿಸಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯದ ಆರಂಭ ಅತ್ಯಂತ ಶೋಚನೀಯವಾಗಿತ್ತು. 11 ರನ್ ಆಗುವಷ್ಟರಲ್ಲಿ ಅಗ್ರ ಕ್ರಮಾಂಕದ ಮೂವರು ಪೆವಿಲಿಯನ್ ಸೇರಿಯಾಗಿತ್ತು. ಆರ್. ಅಶ್ವಿನ್ ತಮ್ಮ ಮೊದಲ ಓವರ್‌ನ ಸತತ ಎಸೆತಗಳಲ್ಲಿ ಡೇವಿಡ್ ವಾರ್ನರ್ (1) ಮತ್ತು ಮಿಚೆಲ್ ಮಾರ್ಷ್ (0) ಅವರನ್ನು ಔಟ್ ಮಾಡಿ ಘಾತಕವಾಗಿ ಗೋಚರಿಸಿದರು. ರವೀಂದ್ರ ಜಡೇಜ ತಮ್ಮ ಮೊದಲ ಎಸೆತದಲ್ಲೇ ನಾಯಕ ಆರನ್ ಫಿಂಚ್ (8) ಆಟ ಮುಗಿಸಿದರು.
ಆದರೆ ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮಾರ್ಕಸ್ ಸ್ಟೋಯಿನಿಸ್ ಅವರ ದಿಟ್ಟ ಬ್ಯಾಟಿಂಗ್ ಹೋರಾಟದಿಂದ ಆಸೀಸ್ ಚೇತರಿಕೆ ಕಂಡಿತು. ಅಂತಿಮ 5 ಎಸೆತಗಳಲ್ಲಿ 58 ರನ್ ಬಾರಿಸುವುದರೊಂದಿಗೆ ಕಾಂಗರೂ ಪಡೆಯ ಮೊತ್ತ ನೂರೈವತ್ತರ ಗಡಿ ದಾಟಿತು.
57 ರನ್ ಬಾರಿಸಿದ ಸ್ಮಿತ್ ಆಸೀಸ್ ಸರದಿಯ ಟಾಪ್ ಸ್ಕೋರರ್ (48 ಎಸೆತ, 7 ಬೌಂಡರಿ). ಐಪಿಎಲ್ ಫಾರ್ಮನ್ನೇ ಮುಂದುವರಿಸಿದ ಮ್ಯಾಕ್ಸ್‌ವೆಲ್ 28 ಎಸೆತಗಳಿಂದ 37 ರನ್ ಬಾರಿಸಿದರು (4 ಬೌಂಡರಿ). ಸ್ಟೋಯಿನಿಸ್ 25 ಎಸೆತ ನಿಭಾಯಿಸಿ ಅಜೇಯ 41 ರನ್ ಮಾಡಿದರು. ಇದರಲ್ಲಿ 4 ಫೋರ್ ಹಾಗೂ ಆಸೀಸ್ ಸರದಿಯ ಏಕೈಕ ಸಿಕ್ಸರ್ ಒಳಗೊಂಡಿತ್ತು.
ದ್ವಿತೀಯ ಅಭ್ಯಾಸ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ ಸಂಭವಿಸಿತು. ವಿರಾಟ್ ಕೊಹ್ಲಿ ಬದಲು ರೋಹಿತ್ ಶರ್ಮ ತಂಡವನ್ನು ಮುನ್ನಡೆಸಿ ದರು. ಆದರೆ ಕೊಹ್ಲಿ ಬೌಲಿಂಗಿಗೆ ಇಳಿದದ್ದು ಕುತೂಹಲವೆನಿಸಿತು. ಅವರು ಭಾರತದ 6ನೇ ಬೌಲರ್ ಆಗಿದ್ದರು. ಆದರೆ ಬ್ಯಾಟಿಂಗ್ ಯಾದಿಯಲ್ಲಿ ಕೊಹ್ಲಿ ಹೆಸರಿರ ಲಿಲ್ಲ. ರೋಹಿತ್ ಶರ್ಮ ಇಂಗ್ಲೆಂಡ್ ಎದುರಿನ ಮೊದಲ ಅಭ್ಯಾಸ ಪಂದ್ಯ ಆಡಿರಲಿಲ್ಲ.ಪೇಸ್ ಬೌಲರ್‌ಗಳಾದ ಜಸ್‌ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರಿಗೂ ವಿಶ್ರಾಂತಿ ನೀಡಲಾಯಿತು. ಇವರ ಬದಲು ಶಾರ್ದೂಲ್ ಠಾಕೂರ್ ಮತ್ತು ವರುಣ್ ಚಕ್ರವರ್ತಿ ಆಡಲಿಳಿದರು. ರಿಷಭ್ ಪಂತ್ ಬದಲು ಇಶಾನ್ ಕಿಶನ್ ಕೀಪಿಂಗ್ ನಡೆಸಿದರು.