Sunday, 15th December 2024

ಹೀನಾಯ ಸೋಲುಂಡ ದ.ಆಫ್ರಿಕಾ; ದಾಖಲೆ ಸರಿಗಟ್ಟಿದ ಭಾರತ

ನವದೆಹಲಿ: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ವಿಕೆಟ್‌ಗಳಿಂದ ಸೋಲಿಸಿದ ಭಾರತ ತಂಡವು ಆಸ್ಟ್ರೇಲಿಯಾದ 19 ವರ್ಷಗಳ ಹಳೆಯ ದಾಖಲೆಯನ್ನು ಸರಿಗಟ್ಟಿತು.

2003ರಲ್ಲಿ ಆಸ್ಟ್ರೇಲಿಯಾ ತಂಡ ಮೂರನೇ ಬಾರಿಗೆ 50 ಓವರ್‌ಗಳ ವಿಶ್ವಕಪ್ ಗೆದ್ದಾಗ, ಅವರು 38 ಪಂದ್ಯಗಳನ್ನು ಗೆದ್ದರು ಮತ್ತು ಇದು ಕ್ಯಾಲೆಂಡರ್ ವರ್ಷವೊಂದರಲ್ಲಿ ತಂಡವೊಂದರಿಂದ ಅತಿ ಹೆಚ್ಚು ಗೆಲುವುಗಳನ್ನು ದಾಖಲಿಸಿದ ದಾಖಲೆಯಾಗಿತ್ತು. ಇದೀಗ 19 ವರ್ಷಗಳ ನಂತರ ಭಾರತ ತನ್ನ 38ನೇ ಪಂದ್ಯವನ್ನು ಗೆಲ್ಲುವ ಮೂಲಕ ಆಸೀಸ್ ದಾಖಲೆಯನ್ನು ಸರಿಗಟ್ಟಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಆಟಕ್ಕೆ ಸಂಬಂಧಿಸಿದಂತೆ, ಮೆನ್ ಇನ್ ಬ್ಲೂ ತಮ್ಮ ಕರಾರುವಕ್ಕಾದ ಬೌಲಿಂಗ್ ದಾಳಿಯಿಂದ ಪ್ರವಾಸಿ ತಂಡವನ್ನು 27.1 ಓವರ್‌ಗಳಲ್ಲಿ 99 ರನ್‌ಗಳಿಗೆ ಔಟ್ ಮಾಡಿದರು. ಕುಲದೀಪ್ ಯಾದವ್ ನಾಲ್ಕು ವಿಕೆಟ್ ಪಡೆದು ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಲೈನ್‌ಅಪ್‌ನ ಬಲವನ್ನು ಮುರಿದರು.42 ಎಸೆತಗಳಲ್ಲಿ 34 ರನ್ ಗಳಿಸಿದ ಹೆನ್ರಿಕ್ ಕ್ಲಾಸೆನ್ ಹೊರತುಪಡಿಸಿ, ದಕ್ಷಿಣ ಆಫ್ರಿಕಾದ ಯಾವ ಬ್ಯಾಟರ್‌ಗಳು ಭಾರತದ ಬೌಲರ್‌ಗಳ ವಿರುದ್ಧ ಹೋರಾಟ ತೋರಲಿಲ್ಲ. ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್ ಮತ್ತು ಶಹಬಾಜ್ ಅಹ್ಮದ್ ತಲಾ ಎರಡು ವಿಕೆಟ್ ಪಡೆದರು.

ಭಾರತ ತಂಡ ನಂತರ 19.1 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಿತು ಮತ್ತು ಏಕದಿನ ಪಂದ್ಯದಲ್ಲಿ ತನ್ನ ಐದನೇ ಅತಿದೊಡ್ಡ ಗೆಲುವನ್ನು ದಾಖಲಿಸಿತು. ಇನ್ನು 185 ಎಸೆತಗಳು ಬಾಕಿ ಇರುವಂತೆಯೇ ಶಿಖರ್ ಧವನ್ ನಾಯ ಕತ್ವದ ತಂಡ ಪಂದ್ಯವನ್ನು ಗೆದ್ದರು. ಶ್ರೇಯಸ್ ಅಯ್ಯರ್ ಅವರು ಮಾರ್ಕೊ ಜಾನ್ಸೆನ್ ಅವರ ಬೌಲಿಂಗ್‌ನಲ್ಲಿ ಗೆಲುವಿನ ಸಿಕ್ಸರ್ ಬಾರಿಸಿದರು ಮತ್ತು ಭಾರತದ ಗೆಲುವನ್ನು ಖಚಿತಪಡಿಸಿಕೊಂಡರು.

ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ವಿಫಲವಾದ ನಂತರ ಶುಭಮನ್ ಗಿಲ್ ಅರ್ಧಶತಕ ಗಳಿಸುವ ಹಾದಿಯಲ್ಲಿದ್ದರು, ಆದರೆ ಕೇವಲ ಒಂದು ರನ್‌ಗಳಿಂದ ಅರ್ಧಶತಕ ವಂಚಿತರಾದರು. ಲುಂಗಿ ಎನ್‌ಗಿಡಿ ಅವರ ಬೌಲಿಂಗ್‌ನಲ್ಲಿ ವಿಕೆಟ್‌ ನೀಡಿದರು.