Friday, 22nd November 2024

100ನೇ ಟೆಸ್ಟ್ ಆಡಿದ ಕೊಹ್ಲಿಗೆ ಗೆಲುವಿನ ಗಿಫ್ಟ್

ಮೊಹಾಲಿ: ಭಾರತ ಕ್ರಿಕೆಟ್ ತಂಡ ಟೆಸ್ಟ್ ಸರಣಿಯಲ್ಲೂ ಅಮೋಘ ಶುಭಾ ರಂಭ ಮಾಡಿದೆ. ಮೊಹಾಲಿಯಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಕೇವಲ 3 ದಿನಗಳಲ್ಲಿ ಕೊನೆಗೊಂಡಿತು.

ಭಾರತ ತಂಡದ ಮುಂದೆ ಶ್ರೀಲಂಕಾ ತಂಡವು ಒಂದೂವರೆ ದಿನವೂ ಉಳಿ ಯಲು ಸಾಧ್ಯವಾಗಲಿಲ್ಲ. ಮೊದಲ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಹಾಗೂ 222 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಈ ಮೂಲಕ ರೋಹಿತ್ ಶರ್ಮಾ (Rohit Sharma) ಅವರ ಟೆಸ್ಟ್ ನಾಯಕತ್ವದ ಅವಧಿ ಅದ್ಧೂರಿಯಾಗಿ ಆರಂಭವಾಗಿದೆ. ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಗೆ 100ನೇ ಟೆಸ್ಟ್ ಪಂದ್ಯದ ಗೆಲುವಿನ ಉಡುಗೊರೆ ನೀಡಿದೆ. ಶ್ರೀಲಂಕಾವನ್ನು ಆಲ್‌ರೌಂಡರ್ ರವೀಂದ್ರ ಜಡೇಜಾ ಇನ್ನಿಲ್ಲದಂತೆ ಕಾಡಿದರು.

ಪಂದ್ಯದ ಮೂರನೇ ದಿನದಂದು, ಭಾರತವು ಶ್ರೀಲಂಕಾವನ್ನು ಎರಡೂ ಇನಿಂಗ್ಸ್‌ಗಳಲ್ಲಿ ಆಲ್​ಔಟ್ ಮಾಡುವ ಮೂಲಕ ತನ್ನ ಕೆಲಸವನ್ನು ಬೇಗನೆ ಮುಗಿಸಿತು. ಭಾನುವಾರ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ನೇತೃತ್ವದ ಭಾರತೀಯ ಬೌಲರ್‌ ಗಳು 16 ವಿಕೆಟ್‌ಗಳನ್ನು ಪಡೆದುಕೊಂಡರೆ, ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು 250 ರನ್ ಗಳಿಸಲು ಸಹ ಸಾಧ್ಯವಾಗಲಿಲ್ಲ.

ಎರಡೂ ಇನ್ನಿಂಗ್ಸ್‌ಗಳಲ್ಲಿ, ತಲಾ ಒಬ್ಬ ಬ್ಯಾಟ್ಸ್‌ಮನ್ ಏಕಾಂಗಿಯಾಗಿ ಹೋರಾ ಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಪಾತುಮ್ ನಿಸಂಕ ಅರ್ಧಶತಕ ಗಳಿಸಿದರೆ, ನಿರೋಶನ್ ಡಿಕ್ವೆಲ್ಲಾ ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ದಾಟಿದರು.

ಶನಿವಾರ ರವೀಂದ್ರ ಜಡೇಜಾ ತನ್ನ ಬ್ಯಾಟಿಂಗ್ ಮೂಲಕ ಶ್ರೀಲಂಕಾವನ್ನು ಇನ್ನಿಲ್ಲದಂತೆ ಕಾಡಿದರು.

ಪಾತುಮ್ ನಿಸಂಕ ಮತ್ತು ಚರಿತ್ ಅಸಲಂಕಾ ದಿನದಾಟವನ್ನು ಉತ್ತಮವಾಗಿ ಪ್ರಾರಂಭಿಸಿದ್ದರಿಂದ ಭಾರತಕ್ಕೆ ಮೊದಲ ಒಂದು ಗಂಟೆ ಯಾವುದೇ ವಿಕೆಟ್ ಪಡೆಯಲು ಅವಕಾಶ ನೀಡಲಿಲ್ಲ. ನಂತರ ಬುಮ್ರಾ ಅಸಲಂಕಾ ಅವರನ್ನು ಎಲ್‌ಬಿಡಬ್ಲ್ಯು ಔಟ್ ಮಾಡಿ ಶ್ರೀಲಂಕಾಕ್ಕೆ ದಿನದ ಮೊದಲ ಹೊಡೆತ ಮತ್ತು ಇನ್ನಿಂಗ್ಸ್‌ನ ಐದನೇ ಹೊಡೆತವನ್ನು ನೀಡಿದರು. ನಂತರ, ಜಡೇಜಾ ಪ್ರಾಬಲ್ಯ ಸಾಧಿಸಿ ತಮ್ಮ ಹೆಸರಿನಲ್ಲಿ ಉಳಿದ 5 ವಿಕೆಟ್‌ಗಳಲ್ಲಿ 4 ವಿಕೆಟ್​ಗಳನ್ನು ಕಬಳಿಸಿದರು. ಇದರೊಂದಿಗೆ ಶ್ರೀಲಂಕಾವನ್ನು ಕೇವಲ 174 ರನ್‌ಗಳಿಗೆ ಆಲ್​ಔಟ್ ಮಾಡಿದರು.

ಮೊದಲ ಇನ್ನಿಂಗ್ಸ್‌ನಲ್ಲಿ 400 ರನ್‌ಗಳ ಮುನ್ನಡೆ ಸಾಧಿಸಿದ ಭಾರತ ತಂಡ ಶ್ರೀಲಂಕಾಕ್ಕೆ ಫಾಲೋ-ಆನ್ ನೀಡಿತು. ನಂತರ ಮುಂದಿನ ಎರಡು ಸೆಷನ್​ಗಳಲ್ಲಿ ಎರಡನೇ ಇನ್ನಿಂಗ್ಸ್ ಅನ್ನು ಸಂಪೂರ್ಣವಾಗಿ ಇತ್ಯರ್ಥಪಡಿಸಿತು. ಅಶ್ವಿನ್ ಎರಡನೇ ಇನ್ನಿಂಗ್ಸ್‌ ನಲ್ಲಿ ಲಹಿರು ತಿರಿಮನ್ನೆ ಮತ್ತು ಪಾತುಮ್ ನಿಸಂಕಾ ಅವರನ್ನು ಬೇಗನೆ ಔಟ್ ಮಾಡುವ ಮೂಲಕ ಉತ್ತಮ ಆರಂಭವನ್ನು ಪಡೆದರು.

ಎರಡನೇ ಇನ್ನಿಂಗ್ಸ್‌ನಲ್ಲಿ ಜಡೇಜಾ 4, ಅಶ್ವಿನ್ 3 ಮತ್ತು ಮೊಹಮ್ಮದ್ ಶಮಿ 2, ಜಸ್ಪ್ರೀತ್ ಬುಮ್ರಾ ಒಂದು ವಿಕೆಟ್ ಪಡೆದರು.