Sunday, 8th September 2024

ಬಾಬರ್, ರಿಝ್ವಾನ್ ಅಬ್ಬರ: ಭಾರತವನ್ನು ಮೊದಲ ಬಾರಿ ಮಣಿಸಿದ ಪಾಕ್

ದುಬೈ: ಆರಂಭಿಕ ಬ್ಯಾಟ್ಸ್ ಮನ್ ಗಳಾದ ಬಾಬರ್ ಆಝಂ ಹಾಗೂ ಮುಹಮ್ಮದ್ ರಿಝ್ವಾನ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ತಂಡವು ಟ್ವೆಂಟಿ-20 ವಿಶ್ವಕಪ್ ನ ಸೂಪರ್-12ರ ಪಂದ್ಯದಲ್ಲಿ ಭಾರತದ ವಿರುದ್ಧ 10 ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತವು ಆರಂಭಿಕ ಬ್ಯಾಟಿಂಗ್ ವೈಫಲ್ಯದಿಂದಾಗಿ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತು. ಗೆಲ್ಲಲು 152 ರನ್ ಗುರಿ ಪಡೆದ ಪಾಕಿಸ್ತಾನವು 17.5 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 152 ರನ್ ಗಳಿಸಿದೆ.

ವಿಶ್ವಕಪ್ ನಲ್ಲಿ ಭಾರತದ ವಿರುದ್ಧ 12 ಬಾರಿ ಸೋತ ನಂತರ ಪಾಕಿಸ್ತಾನ ಯಶಸ್ಸಿನ ರುಚಿ ಕಂಡಿದೆ. ಟ್ವೆಂಟಿ- 20 ವಿಶ್ವಕಪ್‌ನಲ್ಲಿ ಪಾಕಿಸ್ತಾನವು 5 ಸೋಲುಗಳನ್ನು ಅನುಭವಿಸಿದ ನಂತರ ಭಾರತದ ವಿರುದ್ಧ ಮೊದಲ ಬಾರಿ ಪಂದ್ಯವನ್ನು ಗೆದ್ದಿದೆ. ಇದು ಅಂತರ್ ರಾಷ್ಟ್ರೀಯ ಟಿ-20ಯಲ್ಲಿ ಪಾಕಿಸ್ತಾನ ಮೊದಲ ಬಾರಿ 10 ವಿಕೆಟ್ ಜಯ ದಾಖಲಿಸಿದೆ. ಭಾರತವು ಇಂದು ಟಿ-20 ಯಲ್ಲಿ ಮೊದಲ ಬಾರಿ 10 ವಿಕೆಟ್ ಗಳ ಸೋಲು ಅನುಭವಿಸಿದೆ.

ಆಝಂ 40 ಎಸೆತಗಳಲ್ಲಿ(4 ಬೌಂಡರಿ, 2 ಸಿಕ್ಸರ್) ಹಾಗೂ ರಿಝ್ವಾನ್ 41 ಎಸೆತಗಳಲ್ಲಿ(3 ಬೌಂ., 2 ಸಿ.)ಅರ್ಧಶತಕಗಳನ್ನು ಪೂರೈಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತವು ಪವರ್ ಪ್ಲೇ ವೇಳೆ ಅಗ್ರ ಮೂರು ವಿಕೆಟ್ ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ನಾಯಕ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಭಾರತವು ಸ್ಪರ್ಧಾತ್ಮಕ ಸ್ಕೋರ್ ಗಳಿಸಲು ನೆರವಾದರು.

Leave a Reply

Your email address will not be published. Required fields are marked *

error: Content is protected !!