Saturday, 23rd November 2024

ನಾಳೆಯಿಂದ ಭಾರತ-ದಕ್ಷಿಣ ಆಫ್ರಿಕಾ ಏಕದಿನ ಸರಣಿ ಆರಂಭ

ಪಾರ್ಲ್: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿ ಬುಧವಾರದಿಂದ ಆರಂಭವಾಗಲಿದೆ.

ಮೊದಲ ಪಂದ್ಯ ಪಾರ್ಲ್​ನ ಬೋಲ್ಯಾಂಡ್ ಪಾರ್ಕ್​ನಲ್ಲಿ ನಡೆಯಲಿದ್ದು, ಈಗಾಗಲೇ ಟೀಮ್ ಇಂಡಿಯಾ ಆಟಗಾರರು ಇಲ್ಲಿಗೆ ತಲುಪಿದ್ದು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡವನ್ನು ಕೆಎಲ್ ರಾಹುಲ್ ಮುನ್ನಡೆಸುತ್ತಿದ್ದಾರೆ. ಜಸ್​ಪ್ರೀತ್ ಬುಮ್ರಾ ಉಪ ನಾಯಕನಾಗಿದ್ದಾರೆ.

ಇದೇ ಮೊದಲ ಬಾರಿಗೆ ಸಂಪೂರ್ಣ ಏಕದಿನ ಸರಣಿಯನ್ನು ರಾಹುಲ್ ಮುನ್ನಡೆಸುತ್ತಿದ್ದಾರೆ. ಐಪಿಎಲ್ ಸೇರಿದಂತೆ ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಗಮನಸೆಳೆದಿರುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಹಾಗೂ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 2017ರ ಬಳಿಕ ಮೊದಲ ಬಾರಿಗೆ ಭಾರತ ಏಕದಿನ ತಂಡಕ್ಕೆ ವಾಪಸಾಗಿದ್ದಾರೆ.

ಭಾರತ ಪರ ಇಬ್ಬರು ಅಥವಾ ಓರ್ವ ಆಟಗಾರ ಪದಾರ್ಪಣೆ ಮಾಡುವ ನಿರೀಕ್ಷೆಯಿದೆ. ಅವರೇ ವೆಂಕಟೇಶ್ ಅಯ್ಯರ್ ಮತ್ತು ರುತುರಾಜ್ ಗಾಯಕ್ವಾಡ್. ಕೆಎಲ್ ರಾಹುಲ್ ಜೊತೆ ಅನುಭವಿ ಓಪನರ್ ಶಿಖರ್ ಧವನ್ ಇರುವ ಕಾರಣ ಗಾಯಕ್ವಾಡ್​ಗೆ ಸ್ಥಾನ ಅನುಮಾನ. ಆದರೆ, ವೆಂಕಟೇಶ್ ಅಯ್ಯರ್​ಗೆ ಸ್ಥಾನ ಖಚಿತವಾಗಿದೆ. ಇವರು ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ ಆಲ್ರೌಂಡರ್ ಜವಾಬ್ದಾರಿ ಹೊರಲಿ ದ್ದಾರೆ.

ಸ್ಪಿನ್ನರ್​ಗಳ ಸಾಲಿನಲ್ಲಿ ಯುಜ್ವೇಂದ್ರ ಚಹಾಲ್, ಆರ್. ಅಶ್ವಿನ್ ಮತ್ತು ಜಯಂತ್ ಯಾದವ್ ಸ್ಥಾನ ಪಡೆದು ಕೊಂಡಿದ್ದಾರೆ. ಚಹಾಲ್ ಆಡುವ ಬಳಗದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ.

ರಿಷಭ್ ಪಂತ್ ಹಾಗೂ ಇಶಾನ್ ಕಿಶನ್ ಪೈಕಿ ಬ್ಬರೂ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಹಾಗೆಯೇ ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಅವರನ್ನು ಆಡಿಸುವುದೋ ಅಥವಾ ಶ್ರೇಯಸ್ ಅಯ್ಯರ್​ಗೆ ಸ್ಥಾನ ನೀಡಬೇಕಾ ಎಂಬ ಗೊಂದಲದಲ್ಲಿ ಕೋಚ್ ಹಾಗೂ ನಾಯಕನಿದ್ದಾರೆ.

ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ವೇಳೆ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಇದರಿಂದಾಗಿ ಮೂರನೇ ಟೆಸ್ಟ್​ಗೆ ಅಲಭ್ಯರಾಗಿದ್ದರು.ಆದರೀಗ ಸಿರಾಜ್ ಸಂಪೂರ್ಣ ಗುಣಮುಖರಾಗಿದ್ದು, ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಬುಮ್ರಾ ಮಾಹಿತಿ ನೀಡಿದ್ದಾರೆ.

ಭಾರತ ತಂಡ: ಕೆ.ಎಲ್.ರಾಹುಲ್ (ನಾಯಕ), ಜಸ್‌ಪ್ರೀತ್ ಬುಮ್ರಾ (ಉಪ-ನಾಯಕ), ಶಿಖರ್ ಧವನ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಭ್ ಪಂತ್ (ವಿಕೆಟ್‌ಕೀಪರ್), ಇಶಾನ್ ಕಿಶನ್ (ವಿಕೆಟ್‌ಕೀಪರ್), ಯುಜ್ವೇಂದ್ರ ಚಹಾಲ್, ಆರ್. ಅಶ್ವಿನ್, ಭುವನೇಶ್ವರ ಕುಮಾರ್, ದೀಪಕ್ ಚಹಾರ್, ಪ್ರಸಿದ್ಧ ಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಜಯಂತ್ ಯಾದವ್ ಹಾಗೂ ನವದೀಪ್ ಸೈನಿ.