Sunday, 22nd September 2024

Chess Olympiad : ಚೆಸ್ ಒಲಿಂಪಿಯಾಡ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದು ಚರಿತ್ರೆ ಬರೆದ ಭಾರತ

Chess Olympiad

ನವದೆಹಲಿ: ಹಂಗರಿಯ ಬುಡಾಪೆಸ್ಟ್‌ನಲ್ಲಿ ನಡೆದ 45 ನೇ ಚೆಸ್ ಒಲಿಂಪಿಯಾಡ್‌ನಲ್ಲಿ (Chess Olympiad) ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಭಾನುವಾರ ಚಿನ್ನದ ಪದಕಗಳನ್ನು ಗೆದ್ದು ಚರಿತ್ರೆ ಬರೆದಿವೆ. ಪುರುಷರ ತಂಡದ ಸದಸ್ಯರಾದ ಡಿ ಗುಕೇಶ್, ಅರ್ಜುನ್ ಎರಿಗೈಸಿ ಮತ್ತು ಆರ್ ಪ್ರಗ್ನಾನಂದ 11ನೇ ಮತ್ತು ಅಂತಿಮ ಸುತ್ತಿನ ಪಂದ್ಯದಲ್ಲಿ ಸ್ಲೊವೇನಿಯಾ ವಿರುದ್ಧ ತಮ್ಮ ತಮ್ಮ ಸ್ಪರ್ಧೆಗಳನ್ನು ಗೆಲ್ಲುವ ಮೂಲಕ ಚಿನ್ನದ ಪದಕ ಜಯಿಸಿದರು. ಮಹಿಳಾ ತಂಡವು ಅಜೆರ್‌ಬೈಜಾನ್ ತಂಡವನ್ನು 3.5-0.5 ಅಂತರದಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು. ಈ ಹಿಂದೆ 2014 ಮತ್ತು 2022ರಲ್ಲಿ ಭಾರತ ಪುರುಷರ ತಂಡ ಕಂಚಿನ ಪದಕ ಜಯಿಸಿತ್ತು. ಆದರೆ, ಈ ಬಾರಿ ಡಬಲ್ ಚಿನ್ನ ಗೆದ್ದು ವಿನೂತನ ದಾಖಲೆ ಬರೆದಿದೆ.

ಚೆನ್ನೈನಲ್ಲಿ ನಡೆದ 2022 ರ ಆವೃತ್ತಿಯಲ್ಲಿ ಭಾರತೀಯ ಮಹಿಳೆಯರು ಕಂಚಿನ ಪದಕ ಗೆದ್ದಿದ್ದರು. ವಿಶ್ವ ಚಾಂಪಿಯನ್‌ಶಿಪ್‌ ಚಾಲೆಂಜರ್ ಗುಕೇಶ್ ಮತ್ತು ಅರ್ಜುನ್ ಎರಿಗೈಸಿ ಮತ್ತೊಮ್ಮೆ ಪ್ರಮುಖ ಗೇಮ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಭಾರತಕ್ಕೆ ಮೊದಲ ಪ್ರಶಸ್ತಿ ಗೆಲ್ಲಲು ಸಹಾಯ ಮಾಡಿದರು.

ಸ್ಲೊವೇನಿಯಾ ವಿರುದ್ಧ, ಗುಕೇಶ್ ಪಂದ್ಯದ ತಾಂತ್ರಿಕ ಹಂತದಲ್ಲಿ ವ್ಲಾದಿಮಿರ್ ಫೆಡೋಸೆವ್ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದರು. ಇದು ಶ್ರಮದಾಯಕ ವಿಜಯವಾಗಿದ್ದರೂ, 18 ವರ್ಷದ ಗ್ರ್ಯಾಂಡ್ ಮಾಸ್ಟರ್ ತಮ್ಮ ಅದ್ಭುತ ಕಾರ್ಯತಂತ್ರದ ಪ್ರದರ್ಶನದಿಂದ ಗಮನ ಸೆಳೆದರು. ಜಾನ್ ಸುಬೆಲಿ ವಿರುದ್ಧ ಎರಿಗೈಸಿ ಗೆದ್ದರೆ ಪ್ರಗ್ನಾನಂದ ಆಂಟನ್ ಡೆಮ್ಚೆಂಕೊ ವಿರುದ್ಧ ಭರ್ಜರಿ ಗೆಲುವು ಸಾಧಿಸಿದರು. ಈ ಮೂಲಕ ಭಾರತ ಸ್ಲೊವೇನಿಯಾ ವಿರುದ್ಧ 3-0 ಗೆಲುವು ಸಾಧಿಸಿತು.

ಅಜೆರ್‌ಬೈಜಾನ್‌ ವಿರುದ್ಧ 3.5-0.5 ಅಂತರದಲ್ಲಿ ಜಯ ಸಾಧಿಸಿದ ಭಾರತೀಯ ವನಿತೆಯರು ದೇಶಕ್ಕೆ ಅಪರೂಪದ ಡಬಲ್ ಚಿನ್ನ ತಂದುಕೊಡಲು ನೆರವಾದರು. ಡಿ ಹರಿಕಾ ತಂಡದ ತಾಂತ್ರಿಕವಾಗಿ ಅತ್ಯುತ್ತಮ ಪ್ರದರ್ಶನ ನೀಡಿದರು. ದಿವ್ಯಾ ದೇಶ್‌ಮುಖ್‌ ಮತ್ತೊಮ್ಮೆ ಎದುರಾಳಿಯನ್ನು ಹಿಂದಿಕ್ಕಿ ಚಿನ್ನದ ಪದಕವನ್ನು ಖಚಿತಪಡಿಸಿದರು.

ಇದನ್ನೂ ಓದಿ: R Ashwin: ಶೇನ್‌ ವಾರ್ನ್‌ ದಾಖಲೆ ಸರಿಗಟ್ಟಿದ ಆರ್‌.ಅಶ್ವಿನ್‌

ಆರ್ ವೈಶಾಲಿ ತಮ್ಮ ಪಂದ್ಯವನ್ನು ಡ್ರಾ ಮಾಡಿಕೊಂಡ ನಂತರ, ವಂತಿಕಾ ಅಗರ್ವಾಲ್ ಚಿನ್ನದ ಪದಕಕ್ಕೆ ತಮ್ಮನೆರವು ಕೊಟ್ಟರು.