2 ವಿಕೆಟ್‌ಗಳಿಂದ ಕಂಡ ಸಮಾಧಾನಕರ ಗೆಲುವಿನೊಂದಿಗೆ ವೈಟ್‌ವಾಷ್‌ನಿಂದ ಸೋಲಿನಿಂದ ಪಾರಾದ ಮಿಥಾಲಿ ರಾಜ್ ಪಡೆ ಸರಣಿ ಸೋಲಿನ ಅಂತರವನ್ನು 1-2ಕ್ಕೆ ಇಳಿಸಿಕೊಂಡಿತು. ಈ ಜಯದೊಂದಿಗೆ, ಏಕದಿನ ಕ್ರಿಕೆಟ್‌ನಲ್ಲಿ ಆಸೀಸ್ ತಂಡದ ಸತತ 26 ಗೆಲುವಿನ ಓಟಕ್ಕೂ ಬ್ರೇಕ್ ಬಿತ್ತು.
ಜೂಲನ್ ಗೋಸ್ವಾಮಿ (37ಕ್ಕೆ 3) ಮತ್ತು ಪೂಜಾ ವಸಾಕರ್ (46ಕ್ಕೆ 3) ಬಿಗಿ ದಾಳಿಯ ನಡುವೆ ಬೆತ್ ಮೂನಿ (52) ಮತ್ತು ಆಶ್ಲೆಗ್ ಗಾರ್ಡ್ನರ್ (67) ಅರ್ಧಶತಕ ದಿಂದ 9 ವಿಕೆಟ್‌ಗೆ 264 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಶೆಫಾಲಿ-ಯಸ್ತಿಕಾ 2ನೇ ವಿಕೆಟ್‌ಗೆ ನಡೆಸಿದ ಶತಕದ ಜತೆಯಾಟದಿಂದ ಭಾರತ ದಿಟ್ಟವಾಗಿ ಮುನ್ನುಗ್ಗಿತು. ಆದರೆ ಅನಾಬೆಲ್ ಸುದರ್‌ಲ್ಯಾಂಡ್ (30ಕ್ಕೆ 3) ಭಾರತ ತಂಡದ ಮಧ್ಯಮ ಕ್ರಮಾಂಕಕ್ಕೆ ಆಘಾತ ನೀಡಿದರು. ದೀಪ್ತಿ ಶರ್ಮ (31) ಮತ್ತು ಸ್ನೇಹಾ ರಾಣಾ (30) ಉಪಯುಕ್ತ ಕೊಡುಗೆ ನೀಡಿ ಗೆಲುವಿನ ಆಸೆ ಜೀವಂತವಿಟ್ಟರು.
ಕೊನೇ ಓವರ್‌ನಲ್ಲಿ ಭಾರತಕ್ಕೆ 4 ರನ್ ಬೇಕಿದ್ದಾಗ ಬೌಂಡರಿ ಸಿಡಿಸುವ ಮೂಲಕ ಜೂಲನ್ ಗೋಸ್ವಾಮಿ ಗೆಲುವು ತಂದುಕೊಟ್ಟರು.
ಕಳೆದ ಪಂದ್ಯದ ಕೊನೇ ಓವರ್‌ನಲ್ಲಿ 2 ನೋಬಾಲ್ ಎಸೆದು ಎಡವಟ್ಟು ಮಾಡಿದ್ದ ಅನುಭವಿ ಆಟಗಾರ್ತಿ ಜೂಲನ್ ಈ ಬಾರಿ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸೆಪ್ಟೆಂಬರ್ 30ರಿಂದ ಕ್ಯಾರ‌್ರಾರಾದಲ್ಲಿ ಉಭಯ ತಂಡಗಳ ನಡುವೆ ಏಕೈಕ ಟೆಸ್ಟ್ ಪಂದ್ಯ ನಡೆಯಲಿದೆ.