ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬುಧವಾರ ನಡೆದ ಗ್ರೇಟ್ ಬ್ರಿಟನ್ ವಿರುದ್ಧ ಪಂದ್ಯದಲ್ಲಿ 1-4 ಗೋಲುಗಳ ಅಂತರದಿಂದ ಭಾರತದ ಮಹಿಳಾ ಹಾಕಿ ತಂಡ ಸೋಲನುಭವಿಸಿದೆ.
ಭಾರತವು ಒಲಿಂಪಿಕ್ಸ್ ನಲ್ಲಿ ಎ ಗುಂಪಿನ ಮೂರನೇ ಪಂದ್ಯದಲ್ಲೂ ಮುಗ್ಗರಿಸಿತು. ಈ ಮೂಲಕ ಹ್ಯಾಟ್ರಿಕ್ ಸೋಲಿನ ಮುಖಭಂಗ ಅನುಭವಿಸಿತು.
ಬ್ರಿಟನ್ ಪರ ಹನ್ನ ಮಾರ್ಟಿನ್ (2ನೇ ಹಾಗೂ 19ನೇ ನಿಮಿಷ), ಲಿಲ್ಲಿ ಓಸ್ಲೆ (41ನೇ ನಿಮಿಷ)ಹಾಗೂ ಗ್ರೇಸ್ ಬಾಲ್ಸ್ ಡನ್(57ನೇ ನಿಮಿಷ) ಗೆಲುವಿನ ಗೋಲು ಗಳಿಸಿದರು. ಭಾರತದ ಪರ ಶರ್ಮಿಳಾ ದೇವಿ 23ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿ ಸೋಲಿನ ಅಂತರವನ್ನು ಕುಗ್ಗಿಸಿದರು.
ಈಗ ಕ್ವಾರ್ಟರ್ ಫೈನಲ್ ಹಂತವನ್ನು ತಲುಪಲು ಮುಂದಿನ 2 ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಭಾರತ ಸಿಲುಕಿದೆ. ಅಂಕಪಟ್ಟಿಯಲ್ಲಿ ಖಾತೆ ತೆರೆಯಬೇಕಾಗಿರುವ ಭಾರತ ತಂಡವು ಕೊನೆಯ ಸ್ಥಾನದಲ್ಲಿದೆ.
ರಾಣಿ ರಾಂಪಾಲ್ ನಾಯಕತ್ವದ ತಂಡವು ಹಾಲೆಂಡ್ ವಿರುದ್ಧ 1-5 ಹಾಗೂ ಜರ್ಮನಿ ವಿರುದ್ದ 0-2 ಅಂತರದಿಂದ ಸೋಲನುಭವಿಸಿದೆ. ಶುಕ್ರವಾರ ಐರ್ಲ್ಯಾಂಡ್ ಸವಾಲನ್ನು ಎದುರಿಸಲಿದೆ.