Saturday, 23rd November 2024

ರೋಹಿತ್​ ಬಿರುಗಾಳಿ ಶತಕ, ಕೊಹ್ಲಿ ಅರ್ಧಶತಕ: ಭಾರತಕ್ಕೆ ಎರಡನೇ ಜಯ

ನವದೆಹಲಿ: ರೋಹಿತ್​ ಶರ್ಮಾ ಬಿರುಗಾಳಿ ಶತಕ, ಚೇಸಿಂಗ್​ ಮಾಸ್ಟರ್​ ವಿರಾಟ್​ ಕೊಹ್ಲಿ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ತಾನ ವಿರುದ್ಧ ಭಾರತ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು.

ಅರುಣ್​ ಜೇಟ್ಲಿ ಮೈದಾನದಲ್ಲಿಂದು ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಪಾಯಿಂಟ್​ ಪಟ್ಟಿಯಲ್ಲಿ ಸತತ ಎರಡು ಗೆಲುವಿನೊಂದಿಗೆ 2 ನೇ ಸ್ಥಾನ ಪಡೆಯಿತು.

ಸಾಧಾರಣ ಗುರಿ ಬೆನ್ನತ್ತಿದ ಭಾರತಕ್ಕೆ ಇಶಾನ್​ ಕಿಶನ್​ ಮತ್ತು ನಾಯಕ ರೋಹಿತ್​ ಶರ್ಮಾ ಬಿರುಸಿನ ಆರಂಭ ನೀಡಿದರು. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದ ಇಬ್ಬರೂ ಆಟಗಾರರು ಅಫ್ಘನ್​ ವಿರುದ್ಧ ಲೀಲಾಜಾಲವಾಗಿ ಬ್ಯಾಟ್​ ಬೀಸಿದರು. ಮೊದಲ ಹತ್ತು ಓವರ್​ಗಳ ಪವರ್​ಪ್ಲೇನಲ್ಲಿ 94 ರನ್​ ಕಲೆ ಹಾಕಿ ಬ್ಯಾಟಿಂಗ್​ ತಾಕತ್ತು ತೋರಿಸಿದರು.

ಅರ್ಧಶತಕದ ಬಳಿಕ ಮತ್ತಷ್ಟು ಆಕ್ರಮಣಕಾರಿಯಾದ ಶರ್ಮಾ 84 ಎಸೆತಗಳಲ್ಲಿ 131 ರನ್​ ಗಳಿಸಿದರು. ಇದು ವಿಶ್ವಕಪ್​ನಲ್ಲಿ ದಾಖಲಾದ 7 ನೇ ಶತಕವಾಗಿದೆ. ಈ ಮೂಲಕ ಸಚಿನ್​ ತೆಂಡೂಲ್ಕರ್​(6)ದಾಖಲೆಯನ್ನು ರೋಹಿತ್​ ಮುರಿದರು.

ಅದ್ಭುತವಾಗಿ ಬ್ಯಾಟ್​ ಮಾಡಿದ ಅಫ್ಘನ್​ ನಾಯಕ ಹಸ್ಮತುಲ್ಲಾ ಶಾಹಿದಿ (80), ಅಜ್ಮತುಲ್ಲಾ ಒಮರ್​ಝಾಯಿ (62) ಅರ್ಧಶತಕ ಗಳಿಸಿದರು. ಇಬ್ಬರನ್ನು ಬಿಟ್ಟು ಬೇರೆ ಯಾವ ಬ್ಯಾಟರ್​ಗಳು ಪರಿಣಾಮಕಾರಿ ಎನಿಸಲಿಲ್ಲ. ಆರಂಭಿಕರಾದ ಗುರ್ಬಾಜ್​ (21), ಇಬ್ರಾಹಿಂ ಝದ್ರಾನ್​ 22 ರನ್​​ ಗಳಿಸಿದರು. ಹೀಗಾಗಿ ತಂಡ ಬ್ಯಾಟಿಂಗ್ ವೈಫಲ್ಯದಿಂದ 272 ರನ್​ ಗಳಿಸಿತು.

ಭಾರತ ಯಾರ್ಕರ್​ ಸ್ಪೆಷಲಿಸ್ಟ್​ ಜಸ್ಪ್ರೀತ್​ ಬೂಮ್ರಾ ಮಾರಕ ದಾಳಿಗೆ ಅಫ್ಘನ್​ ಪಡೆ ರನ್​ ಗಳಿಸಲು ಪರದಾಡಿತು. ತಮ್ಮ ಕೋಟಾದ 10 ಓವರ್​ಗಳಲ್ಲಿ 39 ರನ್​ ನೀಡಿದ ಬೂಮ್ರಾ ಇಬ್ರಾಹಿಂ ಝದ್ರಾನ್​, ಮಹಮದ್​ ನಬಿ, ನಜೀಬುಲ್ಲಾ ಝದ್ರಾನ್​, ರಶೀದ್​ ಖಾನ್​ ವಿಕೆಟ್​ ಕಿತ್ತರು.