ಡೊಮಿನಿಕಾ: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 141 ರನ್‌ಗಳ ಗೆಲುವು ಸಾಧಿಸಿದೆ.
ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 150 ರನ್‌ಗಳಿಗೆ ಸರ್ವಪತನ ಕಂಡಿತ್ತು. ಇದಕ್ಕೆ ಉತ್ತರವಾಗಿ ಭಾರತ ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ಗೆ 421 ರನ್ ಗಳಿಸಿ ಡಿಕ್ಲೇರ್ ನೀಡುವ ಮೂಲಕ 271 ರನ್‌ಗಳ ಮುನ್ನಡೆ ಸಾಧಿಸಿತು.
ಎರಡನೇ ಇನ್ನಿಂಗ್ಸ್ನಲ್ಲೂ ಅಶ್ವಿನ್ ವಿಂಡೀಸ್ ಬ್ಯಾಟರ್ಗಳನ್ನು ಕಾಡಿದರು. ಪ್ರಥಮ ಇನ್ನಿಂಗ್ಸ್ನಂತೆ ಎರಡನೇ ಇನ್ನಿಂಗ್ಸ್ ನಲ್ಲೂ ಕಳಪೆ ಫಾರ್ಮ್ ಮುಂದುವರೆಸಿದ ವಿಂಡೀಸ್ ಬ್ಯಾಟ್ಸ್‌ಮನ್‌ಗಳು ಮತ್ತೊಮ್ಮೆ ನಿರಾಸೆ ಮೂಡಿಸಿ, ಕೇವಲ 130 ರನ್‌ಗಳಿಗೆ ಆಲೌಟ್ ಆಗುವ ಮೂಲಕ ತಂಡ ಹೀನಾಯ ಸೋಲನುಭವಿಸಿತು. ಯಾವೊಬ್ಬ ಬ್ಯಾಟರ್ 50ರ ಗಡಿ ದಾಟಲು ಸಾಧ್ಯವಾಗಲಿಲ್ಲ.
ಭಾರತ ಪರ ಯಶಸ್ವಿ ಜೈಸ್ವಾಲ್ (171) ಮತ್ತು ವಿರಾಟ್ ಕೊಹ್ಲಿ (76) ರನ್‌ಗಳ ನೆರವಿನಿಂದ ಭಾರತ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನ ಮೂರನೇ ದಿನದಂದು ಐದು ವಿಕೆಟ್ ನಷ್ಟಕ್ಕೆ ಭಾರತ 421 ರನ್ ಗಳಿಸಿತು. ಜೈಸ್ವಾಲ್ 387 ಎಸೆತಗಳಲ್ಲಿ 171 ರನ್ ಗಳಿಸಿದರೆ, ಕೊಹ್ಲಿ 182 ಎಸೆತಗಳಲ್ಲಿ 76 ರನ್ಗಳಿಸಿ ಔಟಾದರು. ರವೀಂದ್ರ ಜಡೇಜಾ 37 ರನ್ಗಳಿಸಿ ಅಜೇಯರಾಗಿ ಉಳಿದರು.
ಕೊಹ್ಲಿ ಔಟಾದ ಅರ್ಧ ಗಂಟೆಯ ನಂತರ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದರು. ಪಂದ್ಯದಲ್ಲಿ ಅಶ್ವಿನ್ 7 ವಿಕೆಟ್ ಪಡೆದು ಮಿಂಚಿದರು.