Sunday, 15th December 2024

ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟ ರೋಹಿತ್ ಬಳಗ

ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ಭಾರತದ ಬ್ಯಾಟರ್‌ಗಳು ರನ್‌ಪ್ರವಾಹ ಹರಿಸಿದರೆ, ಬೌಲರ್‌ಗಳು ಬೆಂಕಿ ಚೆಂಡು ಎಸೆದರು. ವಿಶ್ವಕಪ್ ಟೂರ್ನಿಯಲ್ಲಿ ಸತತ ಏಳನೇ ಪಂದ್ಯ ಗೆದ್ದ ರೋಹಿತ್ ಶರ್ಮಾ ಬಳಗವು ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿತು.

ಶುಭಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್ ಮುಂದೆ ಲಂಕಾ ಬೌಲರ್‌ಗಳು ಬಸವಳಿದರು. 358 ರನ್‌ಗಳ ಗುರಿ ಬೆನ್ನಟ್ಟಿದ ಲಂಕಾ ಪಡೆ ಯು ಮೊಹಮ್ಮದ್ ಶಮಿ (18ಕ್ಕೆ5), ಮೊಹಮ್ಮದ್ ಸಿರಾಜ್ (16ಕ್ಕೆ3) ಮತ್ತು ಜಸ್‌ಪ್ರೀತ್ ಬೂಮ್ರಾ (8ಕ್ಕೆ1) ಅವರ ಬೌಲಿಂಗ್ ಮುಂದೆ ದೂಳೀಪಟವಾಯಿತು.

ಶ್ರೀಲಂಕಾ ಕೇವಲ 55 ರನ್‌ ಗಳಿಸಿ ಎಲ್ಲ ವಿಕೆಟ್ ಕಳೆದು ಕೊಂಡಿತು. ಇದರೊಂದಿಗೆ 302 ರನ್‌ಗಳ ಬೃಹತ್ ಅಂತರದಿಂದ ಸೋತಿತು.

ಮಧ್ಯಮವೇಗಿ ಮೊಹಮ್ಮದ್ ಶಮಿ ಎರಡನೇ ಬಾರಿ ಐದು ವಿಕೆಟ್‌ಗಳ ಗೊಂಚಲು ಗಳಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ಅವರು ಗಳಿಸಿದ ವಿಕೆಟ್ ಸಂಖ್ಯೆಯು 14ಕ್ಕೇರಿತು. ಅವರು ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ದಾಖಲೆ ಸರಿಗಟ್ಟಿದರು. ಒಟ್ಟು 45 ವಿಕೆಟ್‌ಗಳನ್ನು ಗಳಿಸಿದ ಅವರು, ಜಾವಗಲ್ ಶ್ರೀನಾಥ್ ಹಾಗೂ ಜಹೀರ್ ಖಾನ್ ದಾಖಲೆಯನ್ನೂ ಮುರಿದರು.

ಬೂಮ್ರಾ ಮತ್ತು ಸಿರಾಜ್ ದಾಳಿಗೆ ಮೊದಲ ಎರಡು ಓವರ್‌ಗಳಲ್ಲಿ ಕೇವಲ ಎರಡು ರನ್‌ಗಳಿಗೆ ಮೂರು ವಿಕೆಟ್ ಕಳೆದು ಕೊಂಡಿತು. ಇನಿಂಗ್ಸ್‌ನ ಮೊದಲ ಎಸೆತದಲ್ಲಿ ಬೂಮ್ರಾ ಬೀಸಿದೆ ಎಲ್‌ಬಿಡಬ್ಲ್ಯು ಬಲೆಗೆ ಪಥುಮ್ ನಿಸಾಂಕ ಬಿದ್ದರು. ಸಿರಾಜ್ ಹಾಕಿದ ಎರಡನೇ ಓವರ್‌ ಮೊದಲ ಎಸೆತ ಮತ್ತು ಕೊನೆಯ ಎಸೆತದಲ್ಲಿ ಕ್ರಮವಾಗಿ ದಿಮುತ ಕರುಣರತ್ನೆ ಹಾಗೂ ಸದೀರ ಸಮರವಿಕ್ರಂ ಔಟಾದರು. ನಾಲ್ಕನೇ ಓವರ್‌ನಲ್ಲಿ ಕುಸಾಲ ಮೆಂಡಿಸ್ ವಿಕೆಟ್ ಎಗರಿಸಿದ ಸಿರಾಜ್ ಕುಣಿದಾಡಿದರು.

ಐವರು ಸೊನ್ನೆ: ಶ್ರೀಲಂಕಾದ ಐವರು ಬ್ಯಾಟರ್‌ಗಳು ಈ ಪಂದ್ಯದಲ್ಲಿ ಸೊನ್ನೆ ಸುತ್ತಿದರು. ಅದರಲ್ಲಿ ಆರಂಭಿಕ ಬ್ಯಾಟರ್‌ ಗಳಿಬ್ಬರು ಸೇರಿದ್ದರು. ಏಂಜೆಲೊ ಮ್ಯಾಥ್ಯೂಸ್ (12), ಮಹೀಷ ತೀಕ್ಷಣ (ಔಟಾಗದೆ 12) ಮತ್ತು ಕಸುನ್ ರಜಿತಾ (14) ಅವರನ್ನು ಬಿಟ್ಟರೆ ಉಳಿದವರು ಎರಡಂಕಿ ಮುಟ್ಟಲಿಲ್ಲ. ಬೌಲರ್ ದಿಲ್ಶಾನ್ ಮಧುಶಂಕ ಅವರು ಐದು ವಿಕೆಟ್ ಗೊಂಚಲು ಗಳಿಸಿದ್ದಷ್ಟೇ ಲಂಕಾ ತಂಡಕ್ಕೆ ಸಮಾಧಾನ ನೀಡಿದ ಸಾಧನೆ.

ವಿರಾಟ್ ಕೊಹ್ಲಿ 94ಎಸೆತಗಳಲ್ಲಿ 88 ರನ್ ಗಳಿಸಿ ಔಟಾದರು. ಯುವ ಬ್ಯಾಟರ್ ಶುಭಮನ್ ಗಿಲ್ (92; 92ಎ) ಕೂಡ ಎಂಟು ರನ್‌ಗಳಿಂದ ಶತಕ ತಪ್ಪಿಸಿಕೊಂಡರು.

ಲಯ ಕಂಡುಕೊಳ್ಳುವಲ್ಲಿ ವಿಫರಾಗಿದ್ದ ಶ್ರೇಯಸ್ ಅಯ್ಯರ್ (82; 56ಎ) ತಮ್ಮ ತವರಿನಂಗಳದಲ್ಲಿ ಅಬ್ಬರಿಸಿದರು. ಅರ್ಧ ಡಜನ್ ಸಿಕ್ಸರ್ ಸಿಡಿಸಿದ ಅವರು ಅಭಿಮಾನಿಗಳ ಗ್ಯಾಲರಿಯಲ್ಲಿ ಮಿಂಚಿನ ಸಂಚಲನ ಮೂಡಿಸಿದರು.