Friday, 22nd November 2024

ಅಕ್ಟೋಬರ್ 14 ರಂದು ಹೈವೋಲ್ಟೇಜ್ ಪಂದ್ಯ: ಭಾರತಕ್ಕೆ ಪಾಕ್ ಸವಾಲು

ಅಹಮದಾಬಾದ್: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಅ.14 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ವಿಶೇಷವೆಂದರೆ 50 ಓವರ್‌ಗಳ ವಿಶ್ವಕಪ್‌ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಒಂದು ಪಂದ್ಯವೂ ಗೆದ್ದಿಲ್ಲ.

50 ಓವರ್‌ಗಳ ವಿಶ್ವಕಪ್‌ನಲ್ಲಿ ಭಾರತ ಇದುವರೆಗೆ ಪಾಕಿಸ್ತಾನದ ವಿರುದ್ಧ ಒಟ್ಟು ಏಳು ಪಂದ್ಯಗಳನ್ನು ಆಡಿದೆ. ಭಾರತ ಎಲ್ಲಾ ಏಳು ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಸೋಲಿಸಿರುವುದು ಗಮನಾರ್ಹ.

1992 ರಲ್ಲಿ ಸಿಡ್ನಿಯಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತವು ಮೊದಲ ಬಾರಿಗೆ ಪಾಕಿಸ್ತಾನವನ್ನು ಎದುರಿಸಿತು. ಆ ಪಂದ್ಯದಲ್ಲಿ ಭಾರತ 43 ರನ್‌ಗಳ ಜಯ ಸಾಧಿಸಿತು. ನಂತರ ಬೆಂಗಳೂರಿನಲ್ಲಿ ನಡೆದ 1996ರ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ 39 ರನ್‌ಗಳಿಂದ ಪಾಕಿಸ್ತಾನ ವನ್ನು ಸೋಲಿಸಿತು.

1999 ರ ವಿಶ್ವಕಪ್ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ಪಾಕಿಸ್ತಾನವನ್ನು 47 ರನ್‌ಗಳಿಂದ ಸೋಲಿಸಿತು. 2003ರಲ್ಲಿ ದಕ್ಷಿಣ ಆಫ್ರಿಕಾದ ಸೆಂಚೂರಿಯನ್‌ನಲ್ಲಿ ಭಾರತ ಆರು ವಿಕೆಟ್‌ಗಳಿಂದ ಪಾಕಿಸ್ತಾನ ವನ್ನು ಪರಾಭವಗೊಳಿಸಿತ್ತು.

2011ರ ವಿಶ್ವಕಪ್‌ನಲ್ಲಿ ಮೊಹಾಲಿಯಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಭಾರತ 29 ರನ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿತ್ತು. 2015ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ಭಾರತ 76 ರನ್‌ಗಳಿಂದ ಗೆದ್ದಿತ್ತು ಮತ್ತು 2019 ರ ಮ್ಯಾಂಚೆಸ್ಟರ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತವು ಪಾಕಿಸ್ತಾನವನ್ನು 89 ರನ್‌ಗಳಿಂದ ಸೋಲಿಸಿತ್ತು.