Thursday, 12th December 2024

INDW vs AUSW: ಸ್ಮೃತಿ ಮಂಧಾನಾ ಶತಕ ವ್ಯರ್ಥ, ಆಸ್ಟ್ರೇಲಿಯಾ ಎದುರು ಭಾರತಕ್ಕೆ ಕ್ಲೀನ್‌ ಸ್ವೀಪ್‌ ಆಘಾತ!

INDW vs AUSW: Australia women beat India by 83 runs in 3rd ODI at Perth

ಪರ್ತ್‌: ಆಸ್ಟ್ರೇಲಿಯಾ ವಿರುದ್ದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿಯೂ (INDW vs AUSW) ಭಾರತದ ವನಿತೆಯರು ಹೀನಾಯ ಸೋಲು ಅನುಭವಿಸಿದ್ದಾರೆ. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತ ತಂಡ 0-3 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಆಘಾತ ಅನುಭವಿಸಿತು.

ಇಲ್ಲಿನ ಡಬ್ಲ್ಯುಎಸಿಎ ಕ್ರೀಡಾಂಗಣದಲ್ಲಿ ಬುಧವಾರ ನಡೆದಿದ್ದ ಮೂರನೇ ಏಕದಿನ ಪಂದ್ಯದಲ್ಲಿ ಸ್ಮೃತಿ ಮಂಧಾನಾ ಶತಕದ ಹೊರತಾಗಿಯೂ ಭಾರತ ಮಹಿಳಾ ತಂಡ, ಮೂರನೇ ಏಕದಿನ ಪಂದ್ಯದಲ್ಲಿ 83 ರನ್‌ಗಳಿಂದ ಆಸ್ಟ್ರೇಲಿಯಾ ಎದುರು ಸೋಲು ಅನುಭವಿಸಿತು. ಇದರೊಂದಿಗೆ ಆಸ್ಟ್ರೇಲಿಯಾ ನೆಲದಲ್ಲಿ ಏಕೈಕ ಪಂದ್ಯವನ್ನು ಗೆಲ್ಲದೆ ಭಾರತ ತಂಡ ಆಘಾತ ಅನುಭವಿಸಿದೆ.

ಆಸ್ಟ್ರೇಲಿಯಾ ನೀಡಿದ್ದ 299 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ಮಹಿಳಾ ತಂಡ, ಸ್ಮೃತಿ ಮಂಧಾನಾ (105 ರನ್‌) ಅವರ ಶತಕದ ಹೊರತಾಗಿಯೂ ಇತರೆ ಬ್ಯಾಟರ್‌ಗಳ ವೈಫಲ್ಯದಿಂದ 45.1 ಓವರ್‌ಗಳಿಗೆ 215 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆಸೀಸ್‌ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಆಶ್ಲೆ ಗಾರ್ನರ್‌ ಅವರು ಐದು ವಿಕೆಟ್‌ ಸಾಧನೆ ಮಾಡಿದರು.‌

India: ಕ್ರಿಕೆಟ್‌ ಇತಿಹಾಸದಲ್ಲಿಯೇ ಅನಗತ್ಯ ಹ್ಯಾಟ್ರಿಕ್‌ ಹೆಗಲೇರಿಸಿಕೊಂಡ ಭಾರತ!

ಸ್ಮೃತಿ ಮಂಧಾನಾ ಶತಕ ವ್ಯರ್ಥ

ಗುರಿ ಹಿಂಬಾಲಿಸಿದ ಭಾರತ ತಂಡದ ಪರ ಸ್ಮೃತಿ ಮಂಧಾನಾ ಏಕಾಂಗಿ ಹೋರಾಟ ನಡೆಸಿದರು. ಆಸೀಸ್‌ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅವರು 109 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 14 ಬೌಂಡರಿಗಳೊಂದಿಗೆ 105 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಶತಕವನ್ನು ಪೂರ್ಣಗೊಳಿಸಿದರು. ಇವರ ಜೊತೆ ಕೆಲ ಸಮಯ ಜತೆಯಾಟವನ್ನು ಆಡಿದ್ದ ಹರ್ಲೀನ್‌ ಡಿಯೋಲ್‌ ಅವರು 39 ರನ್‌ಗಳನ್ನು ಕಲೆ ಹಾಕಿ ಉತ್ತಮ ಆರಂಭವನ್ನು ಪಡೆದಿದ್ದರು. ಆದರೆ, ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಇನಿಂಗ್ಸ್‌ ಆಡುವಲ್ಲಿ ವಿಫಲರಾದರು. ರಿಚಾ ಘೋಷ್‌, ಹರ್ಮನ್‌ಪ್ರೀತ್‌ ಕೌರ್‌, ಜೆಮಿಮಾ ರೊಡ್ರಿಗಸ್‌, ದೀಪ್ತಿ ಶರ್ಮಾ ಅವರು ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ಈ ಹಿನ್ನೆಲೆಯಲ್ಲಿ ಸ್ಮೃತಿ ಮಂಧಾನಾ ಏಕೈಕ ಇನಿಂಗ್ಸ್‌ನಿಂದ ಭಾರತ ತಂಡ ಗೆಲ್ಲಲು ಸಾಧ್ಯವಾಗಲಿಲ್ಲ.

298 ರನ್‌ ಕಲೆ ಹಾಕಿದ್ದ ಆಸ್ಟ್ರೇಲಿಯಾ

ಇದಕ್ಕೂ ಮುನ್ನ ಮೊದಲು ಬ್ಯಾಟ್‌ ಮಾಡಿದ್ದ ಆಸ್ಟ್ರೇಲಿಯಾ ತಂಡ, ಅನ್ನಾಬೆಲ್‌ ಸುಥರ್‌ಲೆಂಡ್‌ (110 ರನ್‌) ಶತಕ ಹಾಗೂ ಆಶ್ಲೆ ಗಾರ್ನರ್‌ (50) ಮತ್ತು ತಹ್ಲಿಯಾ ಮೆಗ್ರಾಥ್‌ (56) ಅವರ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 298 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಭಾರತಕ್ಕೆ 299 ರನ್‌ಗಳ ಗುರಿಯನ್ನು ನೀಡಿತ್ತು. ಭಾರತದ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ್ದ ಅರುಂಧತಿ ರೆಡ್ಡಿ ನಾಲ್ಕು ವಿಕೆಟ್‌ ಸಾಧನೆ ಮಾಡಿದ್ದರು.

ಸ್ಕೋರ್‌ ವಿವರ

ಆಸ್ಟ್ರೇಲಿಯಾ: 50 ಓವರ್‌ಗಳಿಗೆ 298-6 (ಅನ್ನಾಬೆಲ್‌ ಸುಥರ್‌ಲೆಂಡ್‌ 110 ರನ್‌, ಆಶ್ಲೆ ಗಾರ್ನರ್‌ 50, ತಹ್ಲಿಯಾ ಮೆಗ್ರಾಥ್‌ 56; ಅರುಂಧತಿ ರೆಡ್ಡಿ26ಕ್ಕೆ 4)

ಭಾರತ: 45.1 ಓವರ್‌ಗಳಿಗೆ ಸ್ಮೃತಿ ಮಂಧಾನಾ 105*, ಹರ್ಲೀನ್‌ ಡಿಯೋಲ್‌ 39; ಆಶ್ಲೆ ಗಾರ್ನರ್‌ 35ಕ್ಕೆ 5)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಅನ್ನಾಬೆಲ್‌ ಸುಥರ್‌ಲೆಂಡ್‌

ಸರಣಿ ಶ್ರೇಷ್ಠ ಪ್ರಶಸ್ತಿ: ಅನ್ನಾಬೆಲ್‌ ಸುಥರ್‌ಲೆಂಡ್‌

ಈ ಸುದ್ದಿಯನ್ನು ಓದಿ: IND vs AUS: ಬಾರ್ಡರ್‌ ಗವಾಸ್ಕರ್‌ ಟ್ರೋಫಿಯಲ್ಲಿ ಮೂಡಿಬಂದ ಟಾಪ್‌ 3 ವಿವಾದಗಳು!