Monday, 25th November 2024

INDW vs AUSW: ಇಂದು ಭಾರತ-ಆಸೀಸ್‌ ಹೈವೋಲ್ಟೇಜ್ ಪಂದ್ಯ; ಗೆದ್ದರೆ ಕೌರ್‌ ಪಡೆಯ ಸೆಮಿ ಆಸೆ ಜೀವಂತ

ದುಬೈ: ಮಹಿಳಾ ಟಿ20 ವಿಶ್ವಕಪ್‌ನಲ್ಲಿ(ICC Womens T20 World Cup) ಇಂದು ಭಾರತ ನಿರ್ಣಾಯಕ ಪಂದ್ಯ ಆಡಲು ಸಜ್ಜಾಗಿದೆ. ಎದುರಾಳಿ 5 ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯಾ(INDW vs AUSW). ಎ ವಿಭಾಗದ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಭಾರತ ಈ ಪಂದ್ಯವನ್ನು ಉತ್ತಮ ರನ್‌ರೇಟ್‌ನಿಂದ ಗೆದ್ದರೆ ಮಾತ್ರ ಸೆಮಿಫೈನಲ್‌ ಸ್ಥಾನಕ್ಕೆ ಸನಿಹವಾಗಲಿದೆ. ಆಸೀಸ್‌ ನಾಯಕಿ ನಾಯಕಿ ಅಲಿಸ್ಸಾ ಹೀಲಿ ಬಲಪಾದ ಗಾಯಕ್ಕೆ ತುತ್ತಾಗಿದ್ದರೆ, ವೇಗಿ ವ್ಲಾಮಿಂಕ್‌ ಭುಜದ ಮೂಳೆಯ ಗಾಯಕ್ಕೀಡಾಗಿದ್ದಾರೆ. ಹೀಗಾಗಿ ಇಬ್ಬರೂ ಇಂದಿನ ಪಂದ್ಯ ಆಡುವುದು ಅನುಮಾನ. ಕೌರ್‌ ಪಡೆ ಇದರ ಸಂಪೂರ್ಣ ಲಾಭವೆತ್ತಬೇಕು.

ಸೆಮಿಫೈನಲ್‌ ಲೆಕ್ಕಾಚಾರ

ನ್ಯೂಜಿಲ್ಯಾಂಡ್‌ ವಿರುದ್ಧ ಮೊದಲ ಪಂದ್ಯವನ್ನು ಸೋತ ಭಾರತ, ನಂತರ ಪಾಕಿಸ್ತಾನ ಮತ್ತು ಶ್ರೀಲಂಕಾವನ್ನು ಭರ್ಜರಿಯಾಗಿ ಸೋಲಿಸಿತ್ತು. ಆಡಿದ 3 ಪಂದ್ಯಗಳಲ್ಲಿ 2 ಗೆಲುವು, 1 ಸೋಲಿನೊಂದಿಗೆ 0.576 ರನ್‌ರೇಟ್‌ ಹೊಂದಿದೆ. ಭಾರತದ ಸೆಮಿಫೈನಲ್‌ ಲೆಕ್ಕಾಚಾರದಲ್ಲಿ ದೊಡ್ಡ ಸವಾಲಾಗಿರುವುದು ಕಿವೀಸ್‌.

ಶನಿವಾರ ಶ್ರೀಲಂಕಾವನ್ನು ದೊಡ್ಡ ಅಂತರದಿಂದ ಸೋಲಿಸಿರುವ ಕಿವೀಸ್‌ 3 ಪಂದ್ಯಗಳಲ್ಲಿ 2 ಜಯ, 1 ಸೋಲಿನೊಂದಿಗೆ 0.282 ರನ್‌ರೇಟ್‌ ಸಾಧಿಸಿ 3ನೇ ಸ್ಥಾನದಲ್ಲಿದೆ. ಎರಡೂ ತಂಡಗಳ ಅಂಕ ಸಮನಾಗಿದೆ. ಭಾರತ ಭಾನುವಾರ ಆಸೀಸ್‌ ವಿರುದ್ಧ ಗೆದ್ದು, ರನ್‌ರೇಟನ್ನು ಇನ್ನಷ್ಟು ಹೆಚ್ಚಿಸಿಕೊಂಡರೆ, ನ್ಯೂಜಿಲ್ಯಾಂಡ್‌ಗೂ ಪಾಕ್‌ ವಿರುದ್ಧ ದೊಡ್ಡ ಸವಾಲು ಎದುರಿಸಬೇಕು. ಕಿವೀಸ್‌ ಸೋಮವಾರ ಪಾಕಿಸ್ತಾನದ ವಿರುದ್ಧ ಬರೀ ಗೆಲ್ಲುವುದು ಮಾತ್ರವಲ್ಲ, ದೊಡ್ಡ ಅಂತರದಿಂದ ಗೆದ್ದು ಭಾರತದ ರನ್‌ರೇಟ್‌ ಮೀರಿಸಬೇಕಾಗುತ್ತದೆ. ಭಾನುವಾರ ಭಾರತ ಗೆದ್ದು, ಸೋಮವಾರ ಕಿವೀಸ್‌ ಸೋತರೆ ಭಾರತ ಯಾವುದೇ ಚಿಂತೆಯಿಲ್ಲದೆ ಉಪಾಂತ್ಯಕ್ಕೇರಲಿದೆ.

ಇದನ್ನೂ ಓದಿ IND vs BAN : ಬಾಂಗ್ಲಾ ವಿರುದ್ಧ ಟಿ20 ಸರಣಿಯಲ್ಲಿ ಭಾರತದ 3-0 ಕ್ಲೀನ್‌ ಸ್ವೀಪ್‌ ಸಾಧನೆ

ಒಂದೊಮ್ಮೆ ಇಂದು ಭಾರತ ಸೋತು, ಸೋಮವಾರ ಕಿವೀಸ್‌ ಕೂಡ ಸೋತರೆ ಇತ್ತಂಡಗಳ ಅಂಕ ಸಮವಾಗುವುದರಿಂದ, ರನ್‌ರೇಟ್‌ ಜಾಸ್ತಿಯಿರುವ ತಂಡ ಉಪಾಂತ್ಯಕ್ಕೇರಲಿದೆ. ಪ್ರಸ್ತುತ ರನ್‌ರೇಟ್‌ ನಿರ್ಣಾಯಕ ಪಾತ್ರ ವಹಿಸಲಿದೆ. ಪಾಕಿಸ್ತಾನ ಆಡಿದ ಮೂರು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದು ನಾಲ್ಕನೇ ಸ್ಥಾನದಲ್ಲಿದೆ. ಸೆಮಿ ಪ್ರವೇಶ ಕ್ಷೀಣವಾಗಿದೆ. ಪಾಕ್‌ ಸೆಮಿಫೈನಲ್‌ ಪ್ರವೇಶಿಸಬೇಕಿದ್ದರೆ, ಇಂದು ಭಾರತ ಸೋತು ಆ ಬಳಿಕ ಪವಾಡವೊಂದು ನಡೆದರೆ ಮಾತ್ರ ಅವಕಾಶ ಸಿಗಬಹುದು.

ಸಂಭಾವ್ಯ ತಂಡಗಳು

ಭಾರತ: ಶಫಾಲಿ ವರ್ಮಾ, ಸ್ಮತಿ ಮಂಧಾನ, ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಜೆಮಿಮಾ ರಾಡ್ರಿಗಸ್‌, ರಿಚಾ ಘೋಷ್‌, ದೀಪ್ತಿ ಶರ್ಮಾ, ಸಜನಾ, ಅರುಂಧತಿ ರೆಡ್ಡಿ , ಶ್ರೇಯಾಂಕಾ ಪಾಟೀಲ್‌, ಆಶಾ, ರೇಣುಕಾ ಸಿಂಗ್‌.

ಆಸ್ಟ್ರೇಲಿಯಾ: ಬೆಥ್‌ ಮೂನಿ, ಅಲಿಸ್ಸಾ ಹೀಲಿ, ಎಲ್ಲಿಸ್‌ ಪೆರ್ರಿ, ಆಶ್ಲಿ ಗಾಡ್ನರ್‌, ಲಿಚ್‌ಫೀಲ್ಡ್‌, ಟಹ್ಲಿಯಾ, ವೇರ್‌ಹ್ಯಾಮ್‌, ಸದರ್ಲೆಂಡ್‌, ಮೊಲಿನೆಕ್ಸ್‌, ಶಟ್‌, ವ್ಲಾಮಿಂಕ್‌.