ದುಬೈ: ಮಹಿಳಾ ಟಿ20 ವಿಶ್ವ ಕಪ್ ಟೂರ್ನಿಯ(Women’s T20 World Cup) ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಹೀನಾಯವಾಗಿ ಸೋಲು ಕಂಡಿರುವ ಭಾರತ(INDW vs PAKW) ತಂಡ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದೆ. ಇತ್ತಂಡಗಳ ನಡುವಣ ಈ ಪಂದ್ಯ ನಾಳೆ(ಅ.6, ಭಾನುವಾರ) ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಪುರುಷರ ಕ್ರಿಕೆಟ್ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಎದುರಾದಾಗ ಇರುವ ಕ್ರೇಜ್ ಮಹಿಳಾ ಕ್ರಿಕೆಟ್ನಲ್ಲಿ ಕಂಡುಬರುವುದಿಲ್ಲ. ಕಾರಣ ಇಲ್ಲಿ ಇತ್ತಂಡಗಳದ್ದೂ ಕೂಲ್ ಗೇಮ್.
ಭಾರತಕ್ಕೆ ಮಸ್ಟ್ ವಿನ್ ಗೇಮ್
ಮೊದಲ ಪಂದ್ಯ ಸೋತಿರುವ ಭಾರತಕ್ಕೆ ಇದು ಮಸ್ಟ್ ವಿನ್ ಗೇಮ್. ಸೋತರೆ ಸೆಮಿಫೈನಲ್ ಪ್ರವೇಶದ ಹಾದಿ ದುರ್ಗಮಗೊಳ್ಳಲಿದೆ. ಪಾಕಿಸ್ತಾನ ಮೊದಲ ಪಂದ್ಯದಲ್ಲಿ ಏಷ್ಯಾ ಕಪ್ ಚಾಂಪಿಯನ್ ಶ್ರೀಲಂಕಾಗೆ ಸೋಲುಣಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಹೀಗಾಗಿ ಒತ್ತಡ ರಹಿತವಾಗಿ ಆಡುವುದು ಪಾಕ್ ಯೋಜನೆ. ಪುರುಷರ ಕ್ರಿಕೆಟ್ನಂತೆಯೇ ಮಹಿಳಾ ಕ್ರಿಕೆಟ್ನಲ್ಲಿಯೂ ಭಾರತ ತಂಡ ಪಾಕಿಸ್ತಾನ(India Women vs Pakistan Women) ವಿರುದ್ಧ ಉತ್ತಮ ದಾಖಲೆ ಹೊಂದಿದೆ. ಇದುವರೆಗೆ 15 ಟಿ20 ಪಂದ್ಯಗಳಲ್ಲಿ 12ರಲ್ಲಿ ಗೆಲುವು ಸಾಧಿಸಿದೆ. ಪಾಕ್ ಕೇವಲ ಮೂರು ಪಂದ್ಯಗಳನ್ನು ಮಾತ್ರ ಗೆದ್ದಿದೆ.
ಬ್ಯಾಟಿಂಗ್ ಚೇತರಿಕೆ ಅಗತ್ಯ
ಖ್ಯಾತ ಬ್ಯಾಟರ್‌ಗಳಾದ ಸ್ಮೃತಿ ಮಂಧಾನ, ಶಫಾಲಿ ವರ್ಮಾ, ನಾಯಕಿ ಹರ್ಮನ್‌ಪ್ರೀತ್ ಕೌರ್, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ ಕಿವೀಸ್ ವಿರುದ್ಧ ಬ್ಯಾಟಿಂಗ್ ಮರೆತವರಂತೆ ಆಡಿ ಕಳಪೆ ಪ್ರದರ್ಶನ ತೋರಿದ್ದರು. ಪಾಕ್ ವಿರುದ್ಧ ಬ್ಯಾಟಿಂಗ್ ಲಯಕ್ಕೆ ಮರಳುವ ಅನಿವಾರ್ಯತೆ ಇದೆ. ಇಲ್ಲಿಯೂ ಎಡವಿದರೆ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಯಿಲ್ಲ. ಜತೆಗೆ ಬೌಲಿಂಗ್ ಕೂಡ ಸುಧಾರಣೆ ಕಾಣಬೇಕು. ಅನುಭವಿ ರೇಣುಕಾ ಸಿಂಗ್ ವಿಕೆಟ್ ಕೀಳುತ್ತಿದ್ದರೂ ಕೂಡ ದುಬಾರಿಯಾಗುತ್ತಿದ್ದಾರೆ. ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ ತಮ್ಮ ಎಸೆತಗಳಿಗೆ ಸಾಣೆ ಹಿಡಿಯಬೇಕಿದೆ. ಕಿವೀಸ್ ವಿರುದ್ಧ ದೀಪ್ತಿ 45 ರನ್ ಬಿಟ್ಟುಕೊಟ್ಟಿದ್ದರು.
ಇದನ್ನೂ ಓದಿ Women’s T20 World Cup : ಭಾರತದ ಮಹಿಳೆಯರಿಗೆ ಮೊದಲ ಪಂದ್ಯದಲ್ಲೇ ಸೋಲು
ಪಾಕಿಸ್ತಾನ ತಂಡದ ನೂತನ ನಾಯಕಿ ಫಾತಿಮಾ ಸನಾ ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್‌ನಲ್ಲಿಯೂ ಅಮೋಫ ಪ್ರದರ್ಶನ ತೋರುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಲಂಕಾ ವಿರುದ್ಧ 2 ವಿಕೆಟ್ ಜತೆಗೆ 30 ರನ್ ಚಚ್ಚಿದ್ದರು. ಅನುಭವಿ ನಿದಾ ದಾರ್, ಮುನೀಬಾ ಅಲಿ, ಗುಲ್ ಫಿರೋಜಾ ಬ್ಯಾಟಿಂಗ್ ಬಲವಾದರೆ, ಸಾದಿಯಾ ಇಕ್ಬಾಲ್,ಒಮೈಮಾ ಸೊಹೈಲ್ ಮತ್ತು ನಶ್ರಾ ಸಂಧು ಘಾತಕ ಬೌಲಿಂಗ್ ಮೂಲಕ ಎದುರಾಳಿಯನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ.
ಸಂಭಾವ್ಯ ಆಡುವ ಬಳಗ
ಭಾರತ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿ.ಕೀ), ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಶ್ರೇಯಾಂಕಾ ಪಾಟೀಲ್, ಆಶಾ ಸೋಭಾನಾ, ರೇಣುಕಾ ಠಾಕೂರ್ ಸಿಂಗ್.
ಪಾಕಿಸ್ತಾನ: ಮುನೀಬಾ ಅಲಿ (ವಿ.ಕೀ), ಗುಲ್ ಫಿರೋಜಾ, ಸಿದ್ರಾ ಅಮೀನ್, ನಿದಾ ದಾರ್, ಅಲಿಯಾ ರಿಯಾಜ್, ಒಮೈಮಾ ಸೊಹೈಲ್, ಫಾತಿಮಾ ಸನಾ (ನಾಯಕಿ), ತುಬಾ ಹಸನ್, ನಶ್ರಾ ಸಂಧು, ಡಯಾನಾ ಬೇಗ್, ಸಾದಿಯಾ ಇಕ್ಬಾಲ್.