Tuesday, 17th December 2024

INDW vs WIW: ಭಾರತ ವನಿತೆಯರ ವಿರುದ್ಧ ವೆಸ್ಟ್‌ ಇಂಡೀಸ್‌ಗೆ 9 ವಿಕೆಟ್‌ ಭರ್ಜರಿ ಜಯ!

INDW vs WIW: Hayley Matthews fifty helps west Indies to beat India women by 9 Wickets in 2nd T20I

ಮುಂಬೈ: ಹೇಲಿ ಮ್ಯಾಥ್ಯೂಸ್‌ (85*) ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ವೆಸ್ಟ್‌ ಇಂಡೀಸ್‌ ತಂಡ ಎರಡನೇ ಟಿ20ಐ ಪಂದ್ಯದಲ್ಲಿ(NDW vs WIW) ಭಾರತ ವನಿತೆಯರ ವಿರುದ್ದ 9 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಎರಡು ಪಂದ್ಯಗಳ ಅಂತ್ಯಕ್ಕೆ ಉಭಯ ತಂಡಗಳು ಟಿ20ಐ ಸರಣಿಯಲ್ಲಿ 1-1 ಸಮಬಲ ಸಾಧಿಸಿವೆ. ವಿಂಡೀಸ್‌ ಪರ ಅತ್ಯುತ್ತಮ ಬ್ಯಾಟ್‌ ಮಾಡಿದ ಹೇಲಿ ಮ್ಯಾಥ್ಯೂಸ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇಲ್ಲಿನ ಡಿ ವೈ ಪಾಟೀಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡ ನೀಡಿದ್ದ 160 ರನ್‌ಗಳ ಗುರಿಯನ್ನು ಹಿಂಬಾಲಿಸಿದ ವೆಸ್ಟ್‌ ಇಂಡೀಸ್‌ ತಂಡ 15.4 ಓವರ್‌ಗಳಿಗೆ ಒಂದು ವಿಕೆಟ್‌ ನಷ್ಟಕ್ಕೆ 160 ರನ್‌ಗಳಿಗೆ 9 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಹೇಲಿ ಮ್ಯಾಥ್ಯೂಸ್‌ ಜತೆಗೆ ಕ್ವಿಯಾನ ಜೋಸೆಫ್‌ 30 ರನ್‌ಗಳಿಸಿದರೆ, ಶೇಮೈನಿ ಕ್ಯಾಂಪ್‌ಬೆಲ್‌ 29 ರನ್‌ಗಳನ್ನು ಕಲೆ ಹಾಕಿದರು.

ಹೇಲಿ ಮ್ಯಾಥ್ಯೂಸ್‌ ಬೊಂಬಾಟ್‌ ಬ್ಯಾಟಿಂಗ್‌

160 ರನ್‌ಗಳ ಗುರಿಯನ್ನು ಹಿಂಬಾಲಿಸಿದ ವೆಸ್ಟ್‌ ಇಂಡೀಸ್‌ ತಂಡದ ಪರ ಹೇಲಿ ಮ್ಯಾಥ್ಯೂಸ್‌ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಭಾರತದ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅವರು, 47 ಎಸೆತಗಳಲ್ಲಿ 17 ಬೌಂಡರಿಗಳೊಂದಿಗೆ ಅಜೇಯ 85 ರನ್‌ಗಳನ್ನು ಸಿಡಿಸಿದರು. ಆ ಮೂಲಕ ವೆಸ್ಟ್‌ ಇಂಡೀಸ್‌ ಗೆಲುವಿನಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದರು. ಹೇಲಿ ಮ್ಯಾಥ್ಯೂಸ್‌ ಅವರ ಸ್ಪೋಟಕ ಬ್ಯಾಟಿಂಗ್‌ ಎದುರು ಭಾರತೀಯ ಬೌಲರ್‌ಗಳು ವಿಫಲರಾದರು.

159 ರನ್‌ಗಳನ್ನು ಕಲೆ ಹಾಕಿದ್ದ ಭಾರತ

ಇದಕ್ಕೂ ಮುನ್ನ ಮೊದಲು ಬ್ಯಾಟ್‌ ಮಾಡಿದ್ದ ಭಾರತ ಮಹಿಳಾ ತಂಡ, ಸ್ಮೃತಿ ಮಂಧಾನಾ (62) ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 159 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ವೆಸ್ಟ್‌ ಇಂಡೀಸ್‌ಗೆ 160 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತ್ತು. ಭಾರತದ ಪರ ಸ್ಮೃತಿ ಮಂಧಾನಾ ಅವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟರ್‌ಗಳು ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ರಿಚಾ ಘೋಷ್‌ ಅವರು ನಿರ್ಣಾಯಕ 32 ರನ್‌ಗಳನ್ನು ಕಲೆ ಹಾಕಿದ್ದರು.

ಭಾರತದ ಬ್ಯಾಟಿಂಗ್‌ ವೈಫಲ್ಯ

ಭಾರತದ ಪರ ಓಪನರ್‌ ಉಮಾ ಚೆಟ್ರಿ (4),ಜೆಮಿಮಾ ರೊಡ್ರಿಗಸ್‌ (13), ರಾಗ್ವಿ ಬಿಸ್ಟ್‌ (5), ದೀಪ್ತಿ ಶರ್ಮಾ (17) ಹಾಗೂ ಸಂಜೀವನ್‌ ಸಂಜನಾ (2) ಅವರು ಬ್ಯಾಟಿಂಗ್‌ನಲ್ಲಿ ವಿಫಲರಾದರು. ಆದರೆಮ ವೆಸ್ಟ್‌ ಇಂಡೀಸ್‌ ಪರ ಶಿಸ್ತುಬದ್ದ ದಾಳಿ ನಡೆಸಿದ ಚಿನೆಲ್‌ ಹೆನ್ರಿ, ಡಿಯಾಂಡ್ರೆ ಡಾಟಿನ್‌, ಹೇಲಿ ಮ್ಯಾಥ್ಯೂಸ್‌ ಹಾಗೂ ಎಫಿ ಫ್ಲಚರ್‌ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.

ಸ್ಮೃತಿ ಮಂಧಾನಾ ಫಿಫ್ಟಿ

ಭಾರತ ತಂಡದ ಪರ ಏಕಾಂಗಿ ಹೋರಾಟ ನಡೆದಿದ್ದ ಸ್ಮೃತಿ ಮಂಧಾನಾ ಆಕರ್ಷಕ ಅರ್ಧಶತಕ ಸಿಡಿಸಿದರು. ಇವರು ಆಡಿದ 41 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 9 ಬೌಂಡರಿಗಳೊಂದಿಗೆ 62 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಭಾರತ ತಂಡದ ಮೊತ್ತವನ್ನು 100ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಇವರು ವಿಕೆಟ್‌ ಒಪ್ಪಿಸಿದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿ ಬ್ಯಾಟ್‌ ಮಾಡಿದ್ದ ರಿಚಾ ಘೋಷ್‌ ಅವರು 17 ಎಸೆತಗಳಲ್ಲಿ ಸ್ಪೋಟಕ 32 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಭಾರತ ತಂಡ, ಎದುರಾಳಿ ತಂಡಕ್ಕೆ 160 ರನ್‌ ಗುರಿ ನೀಡಲು ಸಾಧ್ಯವಾಗಿತ್ತು.

ಇನ್ನು ಭಾರತ ಹಾಗೂ ವೆಸ್ಟ್‌ ಇಂಡೀಸ್‌ ನಡುವಣ ಮೂರನೇ ಹಾಗೂ ಟಿ20ಐ ಸರಣಿ ನಿರ್ಣಾಯಕ ಪಂದ್ಯ ಡಿಸೆಂಬರ್‌ 19 ರಂದು ಇದೇ ಅಂಗಣದಲ್ಲಿ ನಡೆಯಲಿದೆ.

ಈ ಸುದ್ದಿಯನ್ನು ಓದಿ: INDW vs AUSW: ಸ್ಮೃತಿ ಮಂಧಾನಾ ಶತಕ ವ್ಯರ್ಥ, ಆಸ್ಟ್ರೇಲಿಯಾ ಎದುರು ಭಾರತಕ್ಕೆ ಕ್ಲೀನ್‌ ಸ್ವೀಪ್‌ ಆಘಾತ!