Thursday, 7th November 2024

IPL 2025 Auction: ಆರ್‌ಸಿಬಿ ಟಾರ್ಗೆಟ್‌ ಮಾಡಬಲ್ಲ ನಾಲ್ವರು ಆಟಗಾರರನ್ನು ಹೆಸರಿಸಿದ ಎಬಿಡಿ!

AB de Villiers lists 4 targets for RCB, calls for Yuzuvendra Chahal return

ಬೆಂಗಳೂರು: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಕಂಡೀಷನ್ಸ್‌ಗೆ ಸೂಕ್ತವಾಗುವ ಆಟಗಾರರನ್ನು 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025 Mega Auction) ಟೂರ್ನಿಯ ಮೆಗಾ ಹರಾಜಿನಲ್ಲಿ ಖರೀದಿಸಬೇಕೆಂದು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಹಾಗೂ ಆರ್‌ಸಿಬಿ ದಿಗ್ಗಜ ಎಬಿ ಡಿ ವಿಲಿಯರ್ಸ್‌ ಸಲಹೆ ನೀಡಿದ್ದಾರೆ. ಹಿರಿಯ ಲೆಗ್‌ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ ಅವರನ್ನು ಪುನಃ ಆರ್‌ಸಿಬಿಗೆ ವಾಪಸ್‌ ಕರೆಸಿಕೊಳ್ಳಬೇಕೆಂದು ಎಬಿಡಿ ಆಗ್ರಹಿಸಿದ್ದಾರೆ.

2025ರ ಐಪಿಎಲ್‌ ಮೆಗಾ ಹರಾಜಿನ ನಿಮಿತ್ತ ಬೆಂಗಳೂರು ಫ್ರಾಂಚೈಸಿಯು ವಿರಾಟ್‌ ಕೊಹ್ಲಿ (21 ಕೋಟಿ ರೂ.), ರಜತ್‌ ಪಾಟಿದಾರ್‌ (11 ಕೋಟಿ ರೂ.) ಹಾಗೂ ಯಶ್‌ ದಯಾಳ್‌ (5 ಕೋಟಿ ರೂ) ಅವರನ್ನು ಉಳಿಸಿಕೊಂಡಿದ್ದು, ಇನ್ನುಳಿದ ಎಲ್ಲಾ ಆಟಗಾರರನ್ನು ಬಿಡುಗಡೆ ಮಾಡಿದೆ. ಈ ತಿಂಗಳಾಂತ್ಯದಲ್ಲಿ ಮೆಗಾ ಹರಾಜು ನಡೆಯಲಿದ್ದು, ಆರ್‌ಸಿಬಿ ಖರೀದಿಸಬಲ್ಲ ನಾಲ್ವರು ಆಟಗಾರರನ್ನು ಎಬಿಡಿ ಆರಿಸಿದ್ದಾರೆ.

ತಮ್ಮ ಯೂಟ್ಯೂಬ್‌ ಶೋದಲ್ಲಿ ಮಾತನಾಡಿದ ಎಬಿ ಡಿ ವಿಲಿಯರ್ಸ್‌, “ವಿರಾಟ್‌ ಕೊಹ್ಲಿ ಇನ್ನೂ ಆರ್‌ಸಿಬಿ ತಂಡದಲ್ಲಿರುವ ಸಿಹಿ ಸುದ್ದಿಯಾಗಿದೆ. ಆಟಗಾರರನ್ನು ಉಳಿಸಿಕೊಳ್ಳಲು ನಾವು ಹೆಚ್ಚಿನ ಮೊತ್ತವನ್ನು ಖರ್ಚು ಮಾಡಿಲ್ಲ. ಇನ್ನೂ ನಮ್ಮ ಖಾತೆಯಲ್ಲಿ ಸಾಕಷ್ಟು ಹಣವಿದೆ. ಇದರ ಬಗ್ಗೆ ನನಗೆ ಖುಷಿ ಇದೆ. ಮೆಗಾ ಹರಾಜಿನಲ್ಲಿ ಆಟಗಾರರನ್ನು ಖರೀದಿಸಲು ನಮ್ಮ ಬಳಿ ಇನ್ನೂ83 ಕೋಟಿ ರೂ. ಗಳಿವೆ,” ಎಂದು ಹೇಳಿದ್ದಾರೆ.

ಚಹಲ್‌ ಮರಳಬೇಕೆಂದ ಎಬಿಡಿ

“ವಿಶ್ವ ದರ್ಜೆಯ ಸ್ಪಿನ್ನರ್‌ಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಬೇಕು. ಅದರಂತೆ ಯುಜ್ವೇಂದ್ರ ಚಹಲ್‌ ಅವರು ತಂಡಕ್ಕೆ ಮರಳಬೇಕಾಗಿದೆ. ಅವ್ಯವಸ್ಥೆಯನ್ನು ಮಾಡುವುದು ನಿಲ್ಲಿಸೋಣ. ಆರ್‌ಸಿಬಿಯಲ್ಲಿನ ತಮ್ಮ ಹಳೆಯ ಜಾಗಕ್ಕೆ ಚಹಲ್‌ ಮರಳಬೇಕು. ಅವರನ್ನು ಎಂದಿಗೂ ಕೈ ಬಿಡಬಾರದು. ಇವರ ಜೊತೆಗೆ ಆರ್‌ ಅಶ್ವಿನ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ಅವರನ್ನು ಕೂಡ ಖರೀದಿಸಬೇಕು. ಅಶ್ವಿನ್‌ ಬಗ್ಗೆ ಎಲ್ಲರಿಗೂ ಚೆನ್ನಾಗಿ ತಿಳಿದಿದೆ. ಅವರು ಬೌಲಿಂಗ್‌ ಅಲ್ಲದೆ ಬ್ಯಾಟಿಂಗ್‌ ಮೂಲಕವೂ ತಂಡವನ್ನು ಗೆಲ್ಲಿಸುವ ಸಾಮರ್ಥ್ಯ ಅವರಿಗಿದೆ. ರಾಜಸ್ಥಾನ್‌ ರಾಯಲ್ಸ್‌ ತಂಡದಿಂದ ಈ ಇಬ್ಬರು ಸ್ಪಿನ್ನರ್‌ಗಳನ್ನು ಆರ್‌ಸಿಬಿಗೆ ಕರೆಸಿಕೊಂಡರೆ, ಏನಾಗಬಹುದೆಂದು ನೀವು ಊಹಿಸಿಕೊಳ್ಳಬಹುದು. ಇದರ ಬಗ್ಗೆ ನನಗೆ ತುಂಬಾ ಸಂತೋಷವಿದೆ. ಏನೇ ಆಗಲಿ, ಯುಜ್ವೇಂದ್ರ ಚಹಲ್‌ಗೆ ಮೊದಲ ಪ್ರಾಶಸ್ತ್ಯ ನೀಡುತ್ತೇನೆ,” ಎಂದು ಎಬಿ ಡಿ ವಿಲಿಯರ್ಸ್‌ ತಿಳಿಸಿದ್ದಾರೆ.

ಶಮಿ-ರಬಾಡ ಮೇಲೆ ಎಬಿಡಿ ಒಲವು

“ಆರ್‌ಸಿಬಿ ಕಗಿಸೊ ರಬಾಡ ಅವರನ್ನು ಖರೀದಿಸಬೇಕು. ಚಹಲ್‌, ರಬಾಡ ಹಾಗೂ ಅಶ್ವಿನ್‌ ಅವರ ಬಗ್ಗೆ ಆರ್‌ಸಿಬಿ ಚಿಂತಿಸಬೇಕು. ಈ ಮೂವರನ್ನು ಖರೀದಿಸಲು ಆರ್‌ಸಿಬಿ ಕೊನೆಯವರೆಗೂ ಪ್ರಯತ್ನ ನಡಸಬೇಕು. ಏಕೆಂದರೆ ಟೂರ್ನಿಯಲ್ಲಿ ಪಂದ್ಯವನ್ನು ಗೆಲ್ಲಿಸುವ ಬೌಲಿಂಗ್‌ ಅಟ್ಯಾಕ್‌ ಬೇಕು. ಆರ್‌ಸಿಬಿ ಈ ನಾಲ್ವರು ಬೌಲರ್‌ಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಬೇಕು. ಯುಜ್ವೇಂದ್ರ ಚಹಲ್‌, ಕಗಿಸೊ ರಬಾಡ, ಭುವನೇಶ್ವರ್‌ ಕುಮಾರ್‌ ಮತ್ತು ಆರ್‌ ಅಶ್ವಿನ್‌. ಇವರ ಮೇಲೆ ನಾನು ಬಹುತೇಕ ಹಣವನ್ನು ಖರ್ಚು ಮಾಡುತ್ತೇನೆ. ಬಾಕಿ ಉಳಿದ ಹಣದಿಂದ ಇನ್ನುಳಿದ ಸ್ಥಾನಗಳಿಗೆ ಬಳಸಿಕೊಳ್ಳುತ್ತೇನೆ,” ಎಂದು ಆರ್‌ಸಿಬಿ ಮಾಜಿ ಬ್ಯಾಟ್ಸ್‌ಮನ್‌ ಹೇಳಿದ್ದಾರೆ.

“ಒಂದು ವೇಳೆ ರಬಾಡ ಸಿಗಲಿಲ್ಲವಾದರೆ, ಮೊಹಮ್ಮದ್‌ ಶಮಿಯನ್ನು ಖರೀದಿಸುತ್ತೇನೆ. ಇವರೂ ಸಿಗಲಿಲ್ಲವಾದರೆ ಅರ್ಷದೀಪ್‌ ಸಿಂಗ್‌ ಅವರನ್ನು ಖರೀದಿಸುತ್ತೇನೆ. ನಮಗೆ ತುಂಬಾ ಆಯ್ಕೆಗಳು ಹಾಗೂ ಪ್ರತಿಭೆಗಳು ಇವೆ. ದಯವಿಟ್ಟು ಇದನ್ನು ಗಮನದಲ್ಲಿಟ್ಟುಕೊಂಡು ಆಂಡಿ ಫ್ಲವರ್‌ ಮತ್ತು ಅವರ ತಂಡ, ಆಟಗಾರರನ್ನು ಖರೀದಿಸಬೇಕು. ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸೂಕ್ತವಾಗುವ ಯೋಜನೆಯೊಂದಿಗೆ ಆಟಗಾರರನ್ನು ಖರೀದಿಸಬೇಕು,” ಎಂದು ದಕ್ಷಿಣ ಆಫ್ರಿಕಾ ದಿಗ್ಗಜ ಸಲಹೆ ನೀಡಿದ್ದಾರೆ.

ಈ ಸುದ್ದಿಯನ್ನು ಓದಿ: IPL 2025 – ಚೆನ್ನೈನಲ್ಲಿ ರಚಿನ್‌ ರವೀಂದ್ರ ಅಭ್ಯಾಸ: ಚೆನ್ನೈ ಫ್ರಾಂಚೈಸಿ ವಿರುದ್ದ ಉತ್ತಪ್ಪ ಗುಡುಗು!