ಜೆಡ್ಡಾ (ಸೌದಿ ಅರೇಬಿಯಾ): ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025 Auction) ಟೂರ್ನಿಯ ಮೆಗಾ ಹರಾಜಿನಲ್ಲಿ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಜಾಕ್‌ಪಾಟ್ ಹೊಡೆದಿದ್ದಾರೆ. ಹಾಲಿ ಚಾಂಪಿಯನ್ಸ್ ಕೋಲ್ಕತಾ ನೈಟ್ ರೈಡರ್ಸ್ ತಂಡ, ತಮ್ಮದೇ ಆಟಗಾರ ವೆಂಕಟೇಶ್ ಅಯ್ಯರ್ ಅವರಿಗೆ 23.75 ಕೋಟಿ ರೂ. ದುಬಾರಿ ಮೊತ್ತವನ್ನು ನೀಡುವ ಮೂಲಕ ಖರೀದಿಸಿದೆ. 2021ರಿಂದಲೂ ವೆಂಕಟೇಶ್ ಅಯ್ಯರ್ ಅವರು ಅಂದಿನಿಂದ ಇಲ್ಲಿಯವರೆಗೂ ಕೆಕೆಆರ್ ಭಾಗವಾಗಿದ್ದಾರೆ.
ಇಲ್ಲಿನ ಜೆಡ್ಡಾದಲ್ಲಿ ಶನಿವಾರ ಆರಂಭವಾದ ಮೆಗಾ ಹರಾಜಿನಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವೆ ಬಿಡ್‌ವಾರ್ ನಡೆದಿತ್ತು. ಆದರೆ, ಅಂತಿಮವಾಗಿ ಶಾರೂಖ್ ಖಾನ್ ಮಾಲೀಕತ್ವದ ಕೋಲ್ಕತಾ ಫ್ರಾಂಚೈಸಿ ವೆಂಕಟೇಶ್ ಅಯ್ಯರ್ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು.
2021ರಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ಮೂಲ ಬೆಲೆ 20 ಲಕ್ಷ ರೂ. ಗಳಿಗೆ ಕೆಕೆಆರ್‌ಗೆ ಸೇರ್ಪಡೆಯಾಗಿದ್ದರು. ತಮ್ಮ ಪದಾರ್ಪಣೆ ಆವೃತ್ತಿಯಲ್ಲಿಯೇ ಅವರು ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ನಂತರ 2022ರ ಮೆಗಾ ಹರಾಜಿನಲ್ಲಿ ಅವರನ್ನು 8 ಕೋಟಿ ರೂ. ಗಳಿಗೆ ಕೋಲ್ಕತಾ ಉಳಿಸಿಕೊಂಡಿತ್ತು. ಕೆಕೆಆರ್ 50 ಪಂದ್ಯಗಳನ್ನು ಆಡಿದ್ದ ವೆಂಕಟೇಶ್ ಅಯ್ಯರ್ ಒಂದು ಶತಕ ಹಾಗೂ 11 ಅರ್ಧಶತಕಗಳ ಮೂಲಕ 1326 ರನ್‌ಗಳನ್ನು ಕಲೆ ಹಾಕಿದ್ದಾರೆ.
IPL 2025 Mega Auction: ಆರ್‌ಸಿಬಿಗೆ ಎಂಟ್ರಿ ಕೊಟ್ಟ ಸ್ಪೋಟಕ ಓಪನರ್ ಫಿಲ್ ಸಾಲ್ಟ್!
2024ರಲ್ಲಿ 370 ರನ್ ಗಳಿಸಿದ್ದ ಅಯ್ಯರ್
ಕಳೆದ 2024ರ ಐಪಿಎಲ್ ಟೂರ್ನಿಯಲ್ಲಿ ವೆಂಕಟೇಶ್ ಅಯ್ಯರ್ 46.25 ಸರಾಸರಿಯಲ್ಲಿ 370 ರನ್‌ಗಳನ್ನು ಸಿಡಿಸಿದ್ದರು. ಅಂದ ಹಾಗೆ ಮೆಗಾ ಹರಾಜಿಗೂ ಮುನ್ನ ಕೋಲ್ಕತಾ ಫ್ರಾಂಚೈಸಿ ತಂಡ ರಿಂಕು ಸಿಂಗ್, ಹರ್ಷಿತ್ ರಾಣಾ, ಆಂಡ್ರೆ ರಸೆಲ್, ಸುನೀಲ್ ನರೇನ್, ರಮಣ್‌ದೀಪ್ ಸಿಂಗ್ ಹಾಗೂ ವರುಣ್ ಚಕ್ರವರ್ತಿ ಅವರನ್ನು ಉಳಿಸಿಕೊಂಡಿತ್ತು.
#𝙆𝙆𝙍 𝙜𝙤 𝙗𝙞𝙜 & 𝙝𝙤𝙬! 💪 💪
— IndianPremierLeague (@IPL) November 24, 2024
Venkatesh Iyer is back with Kolkata Knight Riders 🙌 🙌
Base Price: INR 2 Crore
SOLD For: INR 23.75 Crore#TATAIPLAuction | #TATAIPL | @venkateshiyer | @KKRiders pic.twitter.com/4eDZPt5Pdx
ಕೆಕೆಆರ್‌ಗೆ ಮರಳಿದ ಬಗ್ಗೆ ವೆಂಕಟೇಶ್ ಅಯ್ಯರ್ ಪ್ರತಿಕ್ರಿಯೆ
“ಕೆಕೆಆರ್ ನನ್ನ ಕುಟುಂಬ. ಇಲ್ಲಿ ಸಾಕಷ್ಟು ಭಾವನೆಗಳಿವೆ. ಕೆಕೆಆರ್ ತಂಡದ ರಿಟೇನ್ಷನ್ ಲಿಸ್ಟ್‌ನಲ್ಲಿ ನನ್ನ ಹೆಸರು ಇಲ್ಲದೆ ಇರುವುದು ತಿಳಿದಾಗ ನನ್ನ ಕಣ್ಣುಗಳಲ್ಲಿ ನೀರು ತುಂಬಿತ್ತು ಆದರೆ, ನಾನು ಪ್ರಾಯೋಗಿಕ ಹುಡುಗ. ಇದು ಹೇಗೆ ಕೆಲಸ ಮಾಡುತ್ತದೆ ಎಂದು ನನಗೆ ಅರ್ಥವಾಗಿದೆ. 2022ರ ಮೆಗಾ ಹರಾಜಿನಲ್ಲಿ ನನ್ನನ್ನು ಉಳಿಸಿಕೊಳ್ಳಲಾಗಿತ್ತು. ಹಾಗಾಗಿ ಉಳಿಸಿಕೊಂಡಾಗ ಮತ್ತು ಕೈ ಬಿಟ್ಟಾಗ ಯಾವ ರೀತಿಯ ಭಾವನೆಗಳು ಉಂಟಾಗುತ್ತವೆಂದು ನನಗೆ ಗೊತ್ತಿದೆ. ನನ್ನನ್ನು ಮೆಗಾ ಹರಾಜಿನಲ್ಲಿ ಕೆಕೆಆರ್ ಮರಳಿ ಉಳಿಸಿಕೊಂಡಿದೆ ಹಾಗೂ ಇದರಿಂದ ತುಂಬಾ ಖುಷಿಯಾಗುತ್ತಿದೆ. ಕೆಕೆಆರ್ ತಂಡದಲ್ಲಿ ಇರುವುದನ್ನು ನಾನು ಇಷ್ಟಪಡುತ್ತೇನೆ ಮತ್ತು ನನಗೆ ಬಾಗಿಲು ತೆರೆದಿದೆ. ಆಕ್ಷನ್‌ನಲ್ಲಿದ್ದರೂ ಕೂಡ ಕೊನೆಗೂ ಇದೇ ತಂಡದ ಪರ ಆಡಲು ತುಂಬಾ ಇಷ್ಟಪಡುತ್ತೇನೆ,” ಎಂದು ವೆಂಕಟೇಶ್ ಅಯ್ಯರ್ ಸಂತಸ ವ್ಯಕ್ತಪಡಿಸಿದ್ದಾರೆ.