Sunday, 24th November 2024

IPL 2025 Auction: ಆರ್‌ಸಿಬಿ ಅಭಿಮಾನಿಗಳಿಗೆ ನಿರಾಸೆ; ಡೆಲ್ಲಿ ಪಾಲಾದ ರಾಹುಲ್‌

ಜೆಡ್ಡಾ: ಬಾರೀ ನಿರೀಕ್ಷೆಯೊಂದಿಗೆ ಕಾದು ಕುಳಿತಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ನಿರೀಕ್ಷೆಯೆಲ್ಲ ಹುಸಿಯಾಗಿದೆ. ಹರಾಜಿನಲ್ಲಿ ಡೆಲ್ಲಿ ತಂಡ ರಾಹುಲ್‌ ಅವರನ್ನು 14 ಕೋಟಿ ರೂ. ನೀಡಿ ಖರೀದಿ ಮಾಡಿದೆ. ಆರ್‌ಸಿಬಿ ಕೇವಲ 10 ಕೋಟಿ ರೂ. ತನಕ ಬಿಡ್ಡಿಂಗ್‌ ಮಾಡಿ ಹಿಂದೆ ಸರಿಯಿತು. ರಾಹುಲ್‌(KL Rahul) ಅವರನ್ನು ಕೈ ಬಿಟ್ಟ ಕಾರಣಕ್ಕೆ ಅಭಿಮಾನಿಗಳು ಇದೀಗ ಆರ್‌ಸಿಬಿ ಫ್ರಾಂಚೈಸಿ ವಿರುದ್ಧ ಭಾರೀ ಆಕ್ರೋಶ ಮತ್ತು ಟ್ರೋಲ್‌ ಮಾಡಲಾರಂಭಿಸಿದ್ದಾರೆ. ಆರ್‌ಸಿಬಿ ಹರಾಜಿನಲ್ಲಿ ಖರೀದಿ ಮಾಡಿರುವುದು ಕೇವಲ ಒಂದು ಆಟಗಾರರನ್ನು(IPL 2025 Auction) ಮಾತ್ರ. ಇಂಗ್ಲೆಂಡ್‌ನ ಲಿಯಾಮ್‌ ಲಿವಿಂಗ್‌ ಸ್ಟೋನ್‌ ಮಾತ್ರ. ಅವರನ್ನು 8.75 ಕೋಟಿ ರೂ. ನೀಡಿ ಖರೀದಿ ಮಾಡಿದೆ.

 ಭಾರತ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಅವರು ಐಪಿಎಲ್‌ ಹರಾಜಿನ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಲಖನೌ ಸೂಪರ್‌ ಜಯಂಟ್ಸ್‌ ತಂಡ ದಾಖಲೆಯ 27 ಕೋಟಿ ರೂ. ಗಳಿಗೆ ರಿಷಭ್‌ ಪಂತ್‌ ಅವರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಆ ಮೂಲಕ ಕೆಲ ನಿಮಿಷಗಳ ಹಿಂದೆ 26.75 ಕೋಟಿ ರೂ. ಪಡೆದು ಪಂಜಾಬ್‌ ಕಿಂಗ್ಸ್‌ ಸೇರಿದ್ದ ಶ್ರೇಯಸ್‌ ಅಯ್ಯರ್‌ ದಾಖಲೆಯನ್ನು ರಿಷಭ್‌ ಪಂತ್‌ ಮುರಿದಿದ್ದಾರೆ.

ಮೊದಲ ಸೆಟ್‌ನಲ್ಲಿ ಶ್ರೇಯಸ್‌ ಅಯ್ಯರ್‌ ಹಾಗೂ ರಿಷಭ್‌ ಪಂತ್‌ ಅವರಿಗಾಗಿ ಮೆಗಾ ಹರಾಜಿನಲ್ಲಿ ಬಿಡ್‌ ವಾರ್‌ ನಡೆಯಬಹುದೆಂದು ಮೊದಲೇ ಮೊದಲನೇ ನಿರ್ಧರಿಸಲಾಗಿತ್ತು. ಏಕೆಂದರೆ ನಾಯಕರ ಹುಡುಕಾಟದಲ್ಲಿರುವ ಫ್ರಾಂಚೈಸಿಗಳು ಈ ಇಬ್ಬರಿಗೂ ಬಲೆ ಬೀಸಲು ಎದುರು ನೋಡುತ್ತಿದ್ದರು. ಅದರಂತೆ ಈ ಇಬ್ಬರೂ ಆಟಗಾರರು ಮೊದಲನೇ ಸೆಟ್‌ ಹರಾಜು ಮುಗಿದ ಬಳಿಕ ದಾಖಲೆಯ ಮೊತ್ತವನ್ನು ಈ ಇಬ್ಬರೂ ಆಟಗಾರರು ಜೇಬಿಗಿಳಿಸಿಕೊಂಡಿದ್ದಾರೆ.

ಮೊದಲಿಗೆ ಶ್ರೇಯಸ್‌ ಅಯ್ಯರ್‌ ಅವರನ್ನು ಪಂಜಾಬ್‌ ಕಿಂಗ್ಸ್‌ ತಂಡ 26.75 ಕೋಟಿ ರೂ ಗಳಿಗೆ ಖರೀದಿಸಿತ್ತು. ಈ ವೇಳೆ ಶ್ರೇಯಸ್‌ ಅಯ್ಯರ್‌ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಆದರೆ, ಇದಾದ ಬಳಿಕ ಕೆಲವೇ ನಿಮಿಷಗಳಲ್ಲಿ ರಿಷಭ್‌ ಪಂತ್‌ ದಾಖಲೆಯ ಮೊತ್ತವನ್ನು ಜೇಬಿಗಿಳಿಸಿಕೊಳ್ಳುವ ಮೂಲಕ ಶ್ರೇಯಸ್‌ ಅಯ್ಯರ್‌ ಅವರನ್ನು ಹಿಂದಿಕ್ಕಿ ಹರಾಜು ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ.