ಮುಂಬಯಿ: ಮೆಗಾ ಹರಾಜಿಗೂ(IPL 2025 Auction) ಮುನ್ನ ತಂಡಗಳಿಂದ ರಿಲೀಸ್ ಆಗಿರುವ ಭಾರತೀಯ ಸ್ಟಾರ್ ಆಟಗಾರರಾಗಿರುವ ಕೆ.ಎಲ್ ರಾಹುಲ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಶಮಿ, ಆರ್.ಅಶ್ವಿನ್, ಯಜುವೇಂದ್ರ ಚಹಲ್, ಮೊಹಮ್ಮದ್ ಸಿರಾಜ್ ಸೇರಿ ಒಟ್ಟು 23 ಆಟಗಾರರು 2 ಕೋಟಿ ರೂ. ಮೂಲಬೆಲೆಯೊಂದಿಗೆ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಎರಡು ದಿನಗಳ ಹರಾಜಿನಲ್ಲಿ ದೊಡ್ಡ ಕ್ರಿಕೆಟ್ ತಾರೆಗಳಿಗಾಗಿ ಫ್ರಾಂಚೈಸಿಗಳು ಬಿಡ್ಡಿಂಗ್ ನಡೆಸಲಿದೆ.
ಇದೇ ತಿಂಗಳ ನ. 24 ಮತ್ತು 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ(Jeddah) ಹರಾಜು ಪ್ರಕ್ರಿಯೆ ನಡೆಯಲಿದೆ.ಮೆಗಾ ಹರಾಜಿಗೆ ಒಟ್ಟು 1,574 ಕ್ರಿಕೆಟಿಗರು ಸಾಕ್ಷಿಯಾಗಲಿದ್ದಾರೆ. 320 ಕ್ಯಾಪ್ಡ್ ಪ್ಲೇಯರ್, 1,224 ಅನ್ಕ್ಯಾಪ್ಡ್ ಆಟಗಾರರು, ಅಸೋಸಿಯೇಟ್ ದೇಶಗಳ 30 ಕ್ರಿಕೆಟಿಗರು ಇದರಲ್ಲಿ ಸೇರಿದ್ದಾರೆ. ಭಾರತದ 1,165 ಆಟಗಾರರು ಕಾಣಿಸಿಕೊಂಡಿದ್ದಾರೆ.
ಭಾರತ ಹೊರತಾಗಿ ದಕ್ಷಿಣ ಆಫ್ರಿಕಾದಿಂದ ಗರಿಷ್ಠ 91 ಆಟಗಾರರು ಹರಾಜಿಗೆ ಹೆಸರು ನೋಂದಾಯಿಸಿದ್ದಾರೆ. ನಂತರ ಕ್ರಮವಾಗಿ ಆಸ್ಟ್ರೇಲಿಯಾ (76), ಇಂಗ್ಲೆಂಡ್ (52), ನ್ಯೂಜಿಲೆಂಡ್ (39), ವೆಸ್ಟ್ ಇಂಡೀಸ್ (33), ಶ್ರೀಲಂಕಾ (29),ಅಫಘಾನಿಸ್ತಾನ (29), ಬಾಂಗ್ಲಾದೇಶ (13), ಅಮೆರಿಕ (10), ಐರ್ಲೆಂಡ್ (9), ಜಿಂಬಾಬ್ವೆ (8), ಕೆನಡಾ (4), ಸ್ಕಾಟ್ಲೆಂಡ್ (2) ಹಾಗೂ ಇಟಲಿ, ಯುಎಇಯ ತಲಾ ಒಬ್ಬರು ಹರಾಜಿಗೆ ಹೆಸರು ನೀಡಿದ್ದಾರೆ.
ಇದನ್ನೂ ಓದಿ IPL 2025 Auction: ಜೆಡ್ಡಾದಲ್ಲಿ ನಡೆಯಲಿದೆ ಮೆಗಾ ಹರಾಜು; 1,574 ಕ್ರಿಕೆಟಿಗರು ನೋಂದಣಿ
2 ಕೋಟಿ ಮೂಲಬೆಲೆಯ ಭಾರತೀಯ ಆಟಗಾರರು
ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಕೆಎಲ್ ರಾಹುಲ್, ಮೊಹಮ್ಮದ್ ಶಮಿ, ಖಲೀಲ್ ಅಹ್ಮದ್, ರವಿಚಂದ್ರನ್ ಅಶ್ವಿನ್, ಯಜುವೇಂದ್ರ ಚಹಾಲ್, ದೀಪಕ್ ಚಹಾರ್, ವೆಂಕಟೇಶ್ ಅಯ್ಯರ್, ಅವೇಶ್ ಖಾನ್, ಇಶಾನ್ ಕಿಶನ್, ಮುಖೇಶ್ ಕುಮಾರ್, ಭುವನೇಶ್ವರ್ ಕುಮಾರ್, ಪ್ರಸಿದ್ಧ್ ಕೃಷ್ಣ, ಟಿ ನಟರಾಜನ್, ಕೃನಾಲ್ ಪಾಂಡ್ಯ, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ವಾಷಿಂಗ್ಟನ್ ಸುಂದರ್ , ಉಮೇಶ್ ಯಾದವ್ ಮತ್ತು ದೇವದತ್ ಪಡಿಕ್ಕಲ್.
ಪಂತ್, ರಾಹುಲ್ ಬೇಡಿಕೆ
ಸ್ಟಾರ್ ವಿಕೆಟ್ ಕೀಪರ್ ಕಮ್ ಬ್ಯಾಟರ್ಗಳಾಗಿರುವ ಕಾರಣ ಈ ಬಾರಿಯ ಹರಾಜಿನಲ್ಲಿ ರಿಷಭ್ ಪಂತ್ ಮತ್ತು ಕೆ.ಎಲ್ ರಾಹುಲ್ ಅವರನ್ನು ಖರೀದಿಸಲು ಅಪಾರ ಪೈಪೋಟಿ ಏರ್ಪಡುವ ನಿರೀಕ್ಷೆ ಗರಿಗೆದರಿದೆ. ಇಬ್ಬರೂ ಆಟಗಾರರು ನಾಯಕತ್ವ, ವಿಕೆಟ್ಕೀಪಿಂಗ್ ಮತ್ತು ಬ್ಯಾಟಿಂಗ್ಗಳಲ್ಲಿ ನುರಿತವರಾಗಿರುವುದರಿಂದ ತಂಡಗಳು ಖರೀದಿಸಲು ಮುಗಿಬೀಳುವ ಸಾಧ್ಯತೆ ಇದೆ. ಇವರ ಜತೆ ಮುಂಬೈ ತಂಡದಿಂದ ಕೈಬಿಟ್ಟಿರುವ ಇಶಾನ್ ಕಿಶನ್ ಕೂಡ ದೊಡ್ಡ ಮೊತ್ತ ಜೇಬಿಗಿಳಿಸುವ ಅವಕಾಶವಿದೆ. 2022 ರಲ್ಲಿ ನಡೆದಿದ್ದ ಹರಾಜಿನಲ್ಲಿ ಇಶಾನ್ ಕಿಶನ್ 15.25 ಕೋಟಿ ಮೊತ್ತ ಪಡೆದಿದ್ದರು.