ಬೆಂಗಳೂರು: ಇಂದು ಮತ್ತು ನಾಳೆ ನಡೆಯುವ ಐಪಿಎಲ್ ಹರಾಜು(IPL 2025 Auction) ಪ್ರಕ್ರಿಯೆಗೂ ಮುನ್ನವೇ ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಯಜುವೇಂದ್ರ ಚಹಲ್(Yuzvendra Chahal) ಅವರು ಪ್ರಸಕ್ತ ಸಾಗುತ್ತಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ (Syed Mushtaq Ali Trophy)ಯಲ್ಲಿ ಕೇವಲ 9 ರನ್‌ಗೆ ನಾಲ್ಕು ವಿಕೆಟ್ ಕಿತ್ತು ಮಿಂಚಿದ್ದಾರೆ. ಈ ಮೂಲಕ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ.
ಯಜುವೇಂದ್ರ ಚಹಲ್ ಸೋಮವಾರ ನಡೆಯುವ ದ್ವಿತೀಯ ದಿನದ ಹರಾಜಿನ ಮಾರ್ಕ್ಯೂ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜತೆ ಕೆ.ಎಲ್ ರಾಹುಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್ ಸ್ಟೋನ್, ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಈ ಪಟ್ಟಿಯಲ್ಲಿದ್ದಾರೆ.
ಚಹಲ್ ಇದುವರೆಗೆ 160 ಐಪಿಎಲ್ ಪಂದ್ಯಗಳನ್ನಾಡಿ 205 ವಿಕೆಟ್ ಕಿತ್ತು ಟೂರ್ನಿಯಲ್ಲೇ ಅತ್ಯಧಿಕ ವಿಕೆಟ್ ಕಿತ್ತ ಬೌಲರ್ ಎನಿಸಿಕೊಂಡಿದ್ದಾರೆ. ಕಳೆದ ಆವೃತ್ತಿಯಲ್ಲಿ ರಾಜಸ್ಥಾನ್ ತಂಡದ ಪರ ಆಡಿದ್ದರು. ಈ ಬಾರಿ ಅವರನ್ನು ತಂಡ ರಿಟೇನ್ ಮಾಡಿಲ್ಲ. 2 ಕೋಟಿ ಮೂಲ ಬೆಲೆ ಹೊಂದಿರುವ ಚಹಲ್ ಹರಾಜಿನಲ್ಲಿ ದೊಡ್ಡ ಮೊತ್ತ ಪಡೆಯುವ ನಿರೀಕ್ಷೆ ಇದೆ. ಇದುವರೆಗೆ ಭಾರತ ಪರ ಚಹಲ್ 72 ಏಕದಿನ ಪಂದ್ಯಗಳಿಂದ 121 ವಿಕೆಟ್, 80 ಟಿ20 ಆಡಿ 96 ವಿಕೆಟ್ ಕಡೆವಿದ್ದಾರೆ.
ಇದನ್ನೂ ಓದಿ IPL 2025 Auction: ಮೆಗಾ ಹರಾಜಿಗೆ ಕ್ಷಣಗಣನೆ; ಇಂದಿನ ವಿಶೇಷತೆ ಏನು?
ಚಹಲ್ ಶನಿವಾರ ನಡೆದಿದ್ದ ಮುಷ್ತಾಕ್ ಅಲಿ ಟ್ರೋಫಿಯ ಮಣಿಪುರ ವಿರುದ್ಧದ ಲೀಗ್ ಪಂದ್ಯದಲ್ಲಿ ಹರಿಯಾಣ ಪರ ಕಣಕ್ಕಿಳಿದು ನಾಲ್ಕು ಓವರ್ ಬೌಲಿಂಗ್ ನಡೆಸಿ ಕೇವಲ 9 ರನ್ ಬಿಟ್ಟುಕೊಟ್ಟು 4 ವಿಕೆಟ್ ಕಿತ್ತಿದ್ದರು. ಇವರ ಈ ಬೌಲಿಂಗ್ ಸಾಹಸದಿಂದ ಹರಿಯಾಣ ತಂಡ 8 ವಿಕೆಟ್‌ಗಳ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಇಂದು(ಭಾನುವಾರ) ನಡೆಯಲಿಯುವ ಈ ಹರಾಜು ಪ್ರಕ್ರಿಯೆ ಭಾರತೀಯ ಕಾಲಮಾನ ಮಧ್ಯಾಹ್ನ 3.30ರಿಂದ ಆರಂಭವಾಗಿ ರಾತ್ರಿ 10.30ರ ತನಕ ನಡೆಯಲಿದೆ. 2 ದಿನಗಳ ಹರಾಜು ಪ್ರಕ್ರಿಯೆಯಲ್ಲಿ 367 ಭಾರತೀಯರು, 210 ವಿದೇಶಿಯರ ಸಹಿತ ಒಟ್ಟು 577 ಆಟಗಾರರು ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. 10 ತಂಡಗಳು 70 ವಿದೇಶಿಯರ ಸಹಿತ ಗರಿಷ್ಠ 204 ಆಟಗಾರರ ಖರೀದಿ ಮಾಡಬಹುದಾಗಿದೆ. ಪ್ರತಿ ತಂಡ ಕನಿಷ್ಠ 18ರಿಂದ ಗರಿಷ್ಠ 25 ಆಟಗಾರರನ್ನು ಹೊಂದಬಹುದಾಗಿದೆ. ರಿಟೇನ್ ವೆಚ್ಚ ಸೇರಿ ಪ್ರತಿ ತಂಡ ಆಟಗಾರರ ಖರೀದಿಗೆ ಗರಿಷ್ಠ 120 ಕೋಟಿ ರೂ. ವ್ಯಯಿಸಬಹುದಾಗಿದೆ. ತಲಾ 6ರ 2 ಸೆಟ್‌ನಲ್ಲಿ 12 ಮಾರ್ಕೀ ಆಟಗಾರರ ಹರಾಜು ಮೊದಲಿಗೆ ನಡೆಯಲಿದೆ. ನಂತರ ವಿವಿಧ ಸೆಟ್ಗಳಲ್ಲಿ ಆಟಗಾರರ ಹರಾಜು ನಡೆಯಲಿದೆ.