Friday, 22nd November 2024

IPL 2025 Auction: ಜೆಡ್ಡಾದಲ್ಲಿ ನಡೆಯಲಿದೆ ಮೆಗಾ ಹರಾಜು; 1,574 ಕ್ರಿಕೆಟಿಗರು ನೋಂದಣಿ

ಮುಂಬಯಿ: ಬಹುನಿರೀಕ್ಷೆಯ ಐಪಿಎಲ್‌ ಮೆಗಾ ಹರಾಜು(IPL 2025 Auction) ಪ್ರಕ್ರಿಯೆಯ ತಾಣ ಬದಲಾಗಿದೆ. ಈ ಹಿಂದೆ ರಿಯಾದ್‌ನಲ್ಲಿ(Riyadh) ನಡೆಯಲಿದೆ ಎನ್ನಲಾಗಿದ್ದ ಹರಾಜು ಈಗ ನ. 24 ಮತ್ತು 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ(Jeddah ) ನಡೆಯಲಿದೆ. ಮೆಗಾ ಹರಾಜಿಗೆ ಒಟ್ಟು 1,574 ಕ್ರಿಕೆಟಿಗರು (ಭಾರತದ 1,165 ಮತ್ತು ವಿದೇಶದ 409 ಆಟಗಾರರು) ಮೆಗಾ ಆಕ್ಷನ್‌ಗೆ ಸಾಕ್ಷಿಯಾಗಲಿದ್ದಾರೆ. 320 ಕ್ಯಾಪ್ಡ್ ಪ್ಲೇಯರ್, 1,224 ಅನ್‌ಕ್ಯಾಪ್ಡ್ ಆಟಗಾರರು, ಅಸೋಸಿಯೇಟ್‌ ದೇಶಗಳ 30 ಕ್ರಿಕೆಟಿಗರು ಇದರಲ್ಲಿ ಸೇರಿದ್ದಾರೆ.

ಇದನ್ನೂ ಓದಿ IPL 2025: ಆರ್‌ಸಿಬಿಯಿಂದ ಸಿರಾಜ್‌ ಕೈಬಿಟ್ಟ ಕಾರಣ ತಿಳಿಸಿದ ನಿರ್ದೇಶಕ ಬೋಬಟ್

ಜೆಡ್ಡಾದ ‘ಅಬಾದಿ ಅಲ್‌ ಜೋಹರ್‌ ಅರೆನಾ’ದಲ್ಲಿ ಹರಾಜು ನಡೆಯಲಿದೆ. ಎಲ್ಲ 10 ಫ್ರಾಂಚೈಸಿಗಳು ಗರಿಷ್ಠ 25 ಆಟಗಾರರನ್ನು ಹೊಂದಬಹುದಾಗಿದ್ದು, ಹರಾಜಿನಲ್ಲಿ 70 ವಿದೇಶೀಯರ ಸಹಿತ ಗರಿಷ್ಠ 204 ಆಟಗಾರರು ಬಿಕರಿಯಾಗಲಿದ್ದಾರೆ. ಭಾರತ ಹೊರತಾಗಿ ದಕ್ಷಿಣ ಆಫ್ರಿಕಾದಿಂದ ಗರಿಷ್ಠ 91 ಆಟಗಾರರು ಹರಾಜಿಗೆ ಹೆಸರು ನೋಂದಾಯಿಸಿದ್ದಾರೆ. ನಂತರ ಕ್ರಮವಾಗಿ ಆಸ್ಟ್ರೇಲಿಯಾ (76), ಇಂಗ್ಲೆಂಡ್ (52), ನ್ಯೂಜಿಲೆಂಡ್ (39), ವೆಸ್ಟ್ ಇಂಡೀಸ್ (33), ಶ್ರೀಲಂಕಾ (29),ಅಫಘಾನಿಸ್ತಾನ (29), ಬಾಂಗ್ಲಾದೇಶ (13), ಅಮೆರಿಕ (10), ಐರ್ಲೆಂಡ್ (9), ಜಿಂಬಾಬ್ವೆ (8), ಕೆನಡಾ (4), ಸ್ಕಾಟ್ಲೆಂಡ್ (2) ಹಾಗೂ ಇಟಲಿ, ಯುಎಇಯ ತಲಾ ಒಬ್ಬರು ಹರಾಜಿಗೆ ಹೆಸರು ನೀಡಿದ್ದಾರೆ.

ಸದ್ಯ 10 ತಂಡಗಳು ಒಟ್ಟಾರೆ 46 ಆಟಗಾರರನ್ನು ರಿಟೇನ್ ಮಾಡಿಕೊಂಡಿದ್ದು, ಇದಕ್ಕಾಗಿ 558.5 ಕೋಟಿ ವಿನಿಯೋಗಿಸಿವೆ. ಹರಾಜಿನಲ್ಲಿ ಎಲ್ಲ ಫ್ರಾಂಚೈಸಿಗಳು ಆಟಗಾರರ ಖರೀದಿಗೆ ಒಟ್ಟು 641.5 ಕೋಟಿ ಬಜೆಟ್ ಉಳಿಸಿಕೊಂಡಿವೆ. ಪ್ರತಿ ತಂಡದ ಬಜೆಟ್ ಮಿತಿ 120 ಕೋಟಿ ರೂ. ಆಗಿದೆ. ಎರಡು ದಿನಗಳ ಹರಾಜಿನಲ್ಲಿ ದೊಡ್ಡ ಕ್ರಿಕೆಟ್ ತಾರೆಗಳಿಗಾಗಿ ಫ್ರಾಂಚೈಸಿಗಳು ಬಿಡ್ಡಿಂಗ್‌ ನಡೆಸಲಿದೆ.

ಯಾವುದೇ ಆಟಗಾರ ಐಪಿಎಲ್‌ ಹರಾಜಿಗೆ ನೋಂದಣಿ ಮಾಡಿಕೊಂಡು, ಆಯ್ಕೆಯೂ ಆಗಿ, ಕೂಟಕ್ಕೂ ಮುನ್ನ ಆಡಲ್ಲ ಎಂದರೆ, ಮುಂದಿನ 2 ಕೂಟಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಐಪಿಎಲ್‌ನಲ್ಲಿ ಆಡಬಯಸುವ ವಿದೇಶೀಯರು ಇನ್ನು ಬೃಹತ್‌ (ಮೆಗಾ) ಹರಾಜಿನಲ್ಲಿ ತಮ್ಮ ಹೆಸರನ್ನು ಸೇರಿಸಬೇಕು. ಇಲ್ಲವಾದರೆ ಪ್ರಸಕ್ತ ಐಪಿಎಲ್‌ ಮುಗಿದ ಬಳಿಕ ನಡೆಯುವ ಕಿರು ಹರಾಜಿನಲ್ಲಿ ಅವರು ಪಾಲ್ಗೊಳ್ಳಲು ಅವಕಾಶವಿಲ್ಲ.