Friday, 22nd November 2024

IPL 2025 – ಚೆನ್ನೈನಲ್ಲಿ ರಚಿನ್‌ ರವೀಂದ್ರ ಅಭ್ಯಾಸ: ಚೆನ್ನೈ ಫ್ರಾಂಚೈಸಿ ವಿರುದ್ದ ಉತ್ತಪ್ಪ ಗುಡುಗು!

IPL 2025: Ex Batter Robin Uthappa unhappy with CSK for allowing Rachin Ravindra to practice in Chennai

ಚೆನ್ನೈ: ನ್ಯೂಜಿಲೆಂಡ್‌ ತಂಡದ ಬ್ಯಾಟ್ಸ್‌ಮನ್‌ ರಚಿನ್‌ ರವೀಂದ್ರಗೆ (Rachin Ravindra) ಚೆನ್ನೈನಲ್ಲಿ ಅಭ್ಯಾಸ ನಡೆಸಲು ಅವಕಾಶ ನೀಡಿದ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡದ ವಿರುದ್ಧ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಹಾಗೂ ಕನ್ನಡಿಗ ರಾಬಿನ್‌ ಉತ್ತಪ್ಪ (Robin Uthappa) ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಫಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದ ನಿಮಿತ್ತ ಈ ಹಿಂದೆ ರೆಚಿನ್‌ ರವೀಂದ್ರ ಅವರು ಚೆನ್ನೈ ಫ್ರಾಂಚೈಸಿ ಅಕಾಡೆಮಿಯಲ್ಲಿ ಅಭ್ಯಾಸವನ್ನು ನಡೆಸಿದ್ದರು. ಇದು ಕಂಡೀಷನ್ಸ್‌ ಅನ್ನು ಅರ್ಥಮಾಡಿಕೊಳ್ಳಲು ನೆರವಾಗಿತ್ತು. ಇದು ಭಾರತ ತಂಡದ ವಿರುದ್ದದ ಟೆಸ್ಟ್‌ ಸರಣಿಗೂ ನೆರವಾಗಿತ್ತು.

ಇದರ ನೆರವಿನಿಂದ ಬೆಂಗಳೂರಿನಲ್ಲಿ ನಡೆದಿದ್ದ ಮೊದಲನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ರಚಿನ್‌ ರವೀಂದ್ರ ೧೫೭ ಎಸೆತಗಳಲ್ಲಿ ೧೩೪ ರನ್‌ಗಳನ್ನು ಕಲೆ ಹಾಕಿದ್ದರು. ನಂತರ ದ್ವಿತೀಯ ಇನಿಂಗ್ಸ್‌ನಲ್ಲಿ ಅಜೇಯ ೩೯ ರನ್‌ಗಳನ್ನು ಗಳಿಸಿದ್ದರು. ಅದರಂತೆ ಈ ಪಂದ್ಯದಲ್ಲಿ ಕಿವೀಸ್‌ ೧೦೭ ರನ್‌ಗಳ ಗೆಲುವು ದಾಖಲಿಸಿತ್ತು. ಈ ಪಂದ್ಯದಲ್ಲಿ ರಚಿನ್‌ ರವೀಂದ್ರ ಅವರು ಮ್ಯಾನ್‌ ಆಫ್‌ ದಿ ಮ್ಯಾಚ್‌ ಸ್ವೀಕರಿಸಿದ್ದರು. ಅಂದಹಾಗೆ ೩೬ ವರ್ಷಗಳ ಬಳಿಕ ಭಾರತದಲ್ಲಿ ನ್ಯೂಜಿಲೆಂಡ್‌ ತಂಡ ಮೊದಲ ಟೆಸ್ಟ್‌ ಪಂದ್ಯವನ್ನು ಗೆದ್ದಿತ್ತು.

ಈ ಪಂದ್ಯದ ಬಳಿಕ ಮಾತನಾಡಿದ ರಚಿನ್‌ ರವೀಂದ್ರ, ಚೆನ್ನೈನಲ್ಲಿ ಅಭ್ಯಾಸ ನಡೆಸಿದ್ದು ನನಗೆ ತುಂಬಾ ನೆರವು ನೀಡಿದೆ ಎಂಬ ಅಂಶವನ್ನು ರಿವೀಲ್‌ ಮಾಡಿದ್ದರು. ಈ ಬಗ್ಗೆ ಇದೀಗ ಪ್ರತಿಕ್ರಿಯಿಸಿದ ರಾಬಿನ್‌ ಉತ್ತಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಚೆನ್ನೈ ಫ್ರಾಂಚೈಸಿ ಇದಕ್ಕೆ ಅವಕಾಶ ನೀಡಬಾರದಿತ್ತು ಎಂದು ಹೇಳಿದ್ದಾರೆ.

ರಚಿನ್‌ ರವೀಂದ್ರ ಭಾರತಕ್ಕೆ ಬಂದು ಸಿಎಸ್‌ಕೆ ಅಕಾಡೆಮಿಯಲ್ಲಿ ಅಭ್ಯಾಸ ನಡೆಸಿದ್ದಾರೆ. ಸಿಎಸ್‌ಕೆ ಅತ್ಯಂತ ಅದ್ಭುತ ಫ್ರಾಂಚೈಸಿಯಾಗಿದೆ. ಆದರೆ, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಮೊದಲು ರಾಷ್ಟ್ರೀಯ ತಂಡದ ಆಸಕ್ತಿ ಕಡೆಗೆ ಹೆಚ್ಚಿನ ಗಮನ ಕೊಡಬೇಕಾಗಿದೆ. ಆಟಗಾರರು ಅದರಲ್ಲಿಯೂ ವಿದೇಶ ಆಟಗಾರರ ವಿಷಯ ಬಂದಾಗ ಮೊದಲಿಗೆ ರಾಷ್ಟ್ರೀಯ ತಂಡದ ಹಿತಾಸಕ್ತಿಯನ್ನು ಪರಿಗಣಿಸಬೇಕಾಗಿದೆ. ಆದರೆ, ರಚಿನ್‌ ರವೀಂದ್ರ ವಿಷಯದಲ್ಲಿ ಇದು ವಿರುದ್ಧವಾಗಿದೆ,” ಎಂದು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ರಾಬಿನ್‌ ಉತ್ತಮ ಬೇಸರ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ತಂಡ ಬಂದಾಗ ಎಲ್ಲೆ ಮೀರಬಾರದು: ಉತ್ತಪ್ಪ

“ತಮ್ಮ ತಂಡದ ಆಟಗಾರರ ಬಗ್ಗೆ ಚೆನ್ನೈ ಹೆಚ್ಚಿನ ಕಾಳಜಿ ವಹಿಸುತ್ತದೆ. ಇದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ. ಆದರೆ, ಇದಕ್ಕೆ ಮಿತಿ ಎಂಬುದು ಇರಬೇಕು. ಇಲ್ಲಿ ತಪ್ಪು ಎಂದು ನಾನು ಹೇಳುತ್ತಿಲ್ಲ ಹಾಗೂ ಸಿಎಸ್‌ಕೆ ಮೇಲೆ ನನಗೆ ಅಪಾರ ಪ್ರೀತಿ ಇದೆ. ಆದರೆ, ರಾಷ್ಟ್ರೀಯ ತಂಡ ಬಂದಾಗ ನೀವು ಎಲ್ಲೋ ಒಂದು ಕಡೆ ಎಲ್ಲೆಯನ್ನು ಹಾಕಿಕೊಳ್ಳಬೇಕಾಗುತ್ತದೆ ಹಾಗೂ ಆ ಗೆರೆಯನ್ನು ದಾಟಬಾರದು,” ಎಂದು ರಾಬಿನ್‌ ಉತ್ತಪ್ಪ ಹೇಳಿದ್ದಾರೆ.

ಈ ಸುದ್ದಿಯನ್ನು ಓದಿ: IPL 2025 : ಕೆ. ಎಲ್ ರಾಹುಲ್‌ ಸೇರಿದಂತೆ ಐಪಿಎಲ್‌ ಹರಾಜಿಗೂ ಮುನ್ನ 10 ಫ್ರಾಂಚೈಸಿಗಳು ಬಿಡುಗಡೆ ಮಾಡಿದ ಆಟಗಾರರ ಪಟ್ಟಿಇಲ್ಲಿದೆ