ನವದೆಹಲಿ: ಭಾರತದ ಮಾಜಿ ಎಡಗೈ ಬ್ಯಾಟರ್ ಹೇಮಂಗ್ ಬದಾನಿ(Hemang Badani) ಅವರನ್ನು ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡ ಮುಂದಿನ ಆವೃತ್ತಿಯ ಐಪಿಎಲ್‌ಗೆ(IPL 2025) ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ. ಕೆಲ ದಿನಗಳ ಹಿಂದೆಯೇ ಬದಾನಿ ಕೋಚ್ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಅಧಿಕೃತಗೊಂಡಿದೆ. ಗುರುವಾರ ಫ್ರಾಂಚೈಸಿ ಬದಾನಿ ಅವರನ್ನು ಕೋಚ್ ಮಾಡಿದ ಸಂಗತಿಯನ್ನು ಅಧಿಕೃತಗೊಳಿಸಿದೆ. ಭಾರತದ ಮಾಜಿ ಬ್ಯಾಟರ್ ವೇಣುಗೋಪಾಲ್ ರಾವ್(Venugopal Rao) ಅವರನ್ನು ತಂಡದ ಹೊಸ ಕ್ರಿಕೆಟ್ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
ಬದಾನಿ ಈ ಹಿಂದೆ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಬ್ರಿಯಾನ್ ಲಾರಾರೊಂದಿಗೆ ಕೆಲಸ ಮಾಡಿದ್ದರು. ತಮಿಳುನಾಡಿನ ಮಾಜಿ ಬ್ಯಾಟರ್ ಬದಾನಿ 2001-2004ರ ನಡುವೆ 4 ಟೆಸ್ಟ್ ಹಾಗೂ 40 ಏಕದಿನ ಪಂದ್ಯವನ್ನಾಡಿದ್ದಾರೆ. ಕಳೆದ ಆವೃತ್ತಿ ತನಕ ಆಸೀಸ್ ತಂಡದ ಮಾಜಿ ದಿಗ್ಗಜ ರಿಕಿ ಪಾಂಟಿಂಗ್ ಡೆಲ್ಲಿ ತಂಡದ ಕೋಚ್ ಆಗಿದ್ದರು. ಇವರ ಮಾರ್ಗದರ್ಶನದಲ್ಲಿ ತಂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿತ್ತು. ಇದೇ ಕಾರಣಕ್ಕೆ ಅವರನ್ನು ಕೋಚ್ ಹುದ್ದೆಯಿಂದ ಕೆಳಗಿಳಿಸಲಾಗಿತ್ತು.
ಇದನ್ನೂ ಓದಿ IPL 2025: ಡೆಲ್ಲಿ, ಹೈದರಾಬಾದ್ ಫ್ರಾಂಚೈಸಿಯ ರಿಟೇನ್ ಪಟ್ಟಿ ಅಂತಿಮ
ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅವರನ್ನು ರೀಟೈನ್ ಮಾಡಲಿದೆ ಎನ್ನಲಾಗಿದೆ. ಪಂತ್‌ಗೆ 18, ಅಕ್ಷರ್‌ಗೆ 14, ಕುಲದೀಪ್‌ಗೆ 11 ಕೋಟಿ ನೀಡಿ ತಂಡದಲ್ಲಿ ಉಳಿಸಿಕೊಳ್ಳಲು ಫ್ರಾಂಚೈಸಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಬೌಲಿಂಗ್ ಕೋಚ್ ಬೌಲಿಂಗ್ ಕೋಚ್
ಭಾರತ ಕ್ರಿಕೆಟ್ ತಂಡದ ಮಾಜಿ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಐಪಿಎಲ್‌ನ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ. ಕಳೆದ ವರ್ಷದ ಟಿ20 ವಿಶ್ವಕಪ್ ಮುಕ್ತಾಯಗೊಂಡ ಭಾರತ ಕ್ರಿಕೆಟ್ ತಂಡದ ಜತೆಗಿನ ಒಪ್ಪಂದ ಕೊನೆಗೊಂಡಿತ್ತು. ಪರಾಸ್ ಮಾಂಬ್ರೆ ಈ ಮೊದಲು ಮುಂಬೈ ತಂಡದೊಂದಿಗೆ 2010, 2011 ಹಾಗೂ 2013ರಲ್ಲಿ ಕೆಲಸ ಮಾಡಿದ್ದರು.
ಐಪಿಎಲ್ ರೀಟೆನ್ಷನ್ ನಿಯಮದ ಪ್ರಕಾರ ಗರಿಷ್ಠ 6 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದ್ದು, ಮೊದಲ ಆಟಗಾರನಿಗೆ 18 ಕೋಟಿ, 2ನೇ ಆಟಗಾರನಿಗೆ 14 ಕೋಟಿ, 3ನೇ ಆಟಗಾರನಿಗೆ 11 ಕೋಟಿ ವೇತನ ನಿಗದಿಪಡಿಸಲಾಗಿದೆ. 4 ಹಾಗೂ 5ನೇ ಆಟಗಾರನಿಗೆ ಕ್ರಮವಾಗಿ 18 ಕೋಟಿ ಹಾಗೂ 14 ಕೋಟಿ ನೀಡಬಹುದಾಗಿದೆ. ಅಂ.ರಾ. ಕ್ರಿಕೆಟ್ ಆಡದ ಆಟಗಾರನನ್ನು 4 ಕೋಟಿಗೆ ಉಳಿಸಿಕೊಳ್ಳಬಹುದು. ಒಟ್ಟಾರೆ ಆಟಗಾರರ ಖರೀದಿಗೆ ತಂಡಗಳು ₹120 ಕೋಟಿ ವೆಚ್ಚ ಮಾಡಬಹುದಾಗಿದ್ದು, ಹರಾಜಿಗೂ ಮೊದಲೇ 79 ಕೋಟಿಯನ್ನು ಆಟಗಾರರನ್ನು ಉಳಿಸಿಕೊಳ್ಳಲು ಬಳಸಿಕೊಳ್ಳಬಹುದು.