ಮುಂಬಯಿ: 2 ವರ್ಷಗಳ ಹಿಂದೆ ಐಪಿಎಲ್ ಟೂರ್ನಿಯಲ್ಲಿ ಜಾರಿಗೆ ಬಂದಿದ್ದ ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ(Impact player) ಕಳೆದ ಬಾರಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್ ಸೇರಿ ಹಲವರು ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ನಿಯಮದಿಂದ ನೈಜ ಕ್ರಿಕೆಟ್‌ಗೆ ಹಾನಿಯಾಗಿದೆ. ಇದು ಮನರಂಜನೆ ಒದಗಿಸಬಹುದೇ ಹೊರತು ಕ್ರಿಕೆಟ್ ಬೆಳವಣಿಗೆಗೆ ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದ್ದರು. ಹೀಗಾಗಿ ಅಂದು ಬಿಸಿಸಿಐ(BCCI) ಮತ್ತು ಐಪಿಎಲ್(IPL) ಮಂಡಳಿ ಈ ನಿಯಮದ ಬಗ್ಗೆ ಚರ್ಚಿಸುವ ಅಗತ್ಯವಿದೆ ಎಂದು ಹೇಳಿತ್ತು. ಆದರೆ, ಮುಂದಿನ 18ನೇ ಆವೃತ್ತಿಯಲ್ಲಿಯೂ ಈ ನಿಯಮನ್ನು ಮತ್ತೆ ಮುಂದುವರಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
ಏನಿದು ಇಂಪ್ಯಾಕ್ಟ್ ಪ್ಲೇಯರ್ ನಿಯಮ?
ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಆಟದ ಸಮಯದಲ್ಲಿ ಕೆಲ ತಂತ್ರಗಳನ್ನು ಬದಲಾವಣೆಯನ್ನು ಮಾಡಲು ತಂಡಕ್ಕೆ ಅವಕಾಶವನ್ನು ನೀಡುತ್ತದೆ. ಟಾಸ್ ಸಮಯದಲ್ಲಿ, ನಾಯಕನು ಆರಂಭಿಕ 11 ಆಟಗಾರರ ಜೊತೆಗೆ ನಾಲ್ಕು ಬದಲಿ ಆಟಗಾರರನ್ನು ಉಲ್ಲೇಖಿಸಬೆಕು. ಈ ಬದಲಿ ಆಟಗಾರನು (ಇಂಪ್ಯಾಕ್ಟ್ ಪ್ಲೇಯರ್) ಇನ್ನಿಂಗ್ಸ್ ನ 14 ನೇ ಓವರ್ ನ ಮುಕ್ತಾಯದ ಮೊದಲು ಯಾವುದೇ ನಿರ್ದಿಷ್ಟ ಹಂತದಲ್ಲಿ ಆರಂಭಿಕ 11 ನ ಸದಸ್ಯರನ್ನು ಬದಲಾಯಿಸಬಹುದು. ಆಟಗಾರನು ಬ್ಯಾಟಿಂಗ್ ಮಾಡಲು ಹಾಗೂ ತನ್ನ ಸಂಪೂರ್ಣ ಕೋಟಾದ (ನಾಲ್ಕು) ಓವರ್‌ಗಳನ್ನು ಪೂರ್ಣಗೊಳಿಸಲು ಅವಕಾಶವಿದೆ.
ಮತ್ತೊಂದು ವಿಶೇಷವೆಂದರೆ ಇಂಪ್ಯಾಕ್ಟ್ ಪ್ಲೇಯರ್ ಈಗಾಗಲೇ ಔಟ್ ಆಗಿರುವ ಆಟಗಾರನ ಬದಲಿಯಾಗಿ ಬಂದು ಮತ್ತೊಮ್ಮೆ ಬ್ಯಾಟಿಂಗ್ ಮಾಡಬಹುದು. ಆದರೆ ತಂಡದಲ್ಲಿ ಕೇವಲ 11 ಬ್ಯಾಟರ್‌ಗಳಿಗೆ ಬ್ಯಾಟಿಂಗ್‌ಗೆ ಅವಕಾಶವಿದೆ. ಮತ್ತೊಂದೆಡೆ, ಈಗಾಗಲೇ ಕೆಲವು ಓವರ್‌ಗಳನ್ನು ಬೌಲ್ ಮಾಡಿದ ಬೌಲರ್ ಬದಲಿಗೆ ಬಂದು ನಾಲ್ಕು ಓವರ್‌ಗಳ ಪೂರ್ಣ ಕೋಟಾ ಬೌಲ್ ಮಾಡಬಹುದು.
ಇಂಪ್ಯಾಕ್ಟ್ ಪ್ಲೇಯರ್ ಸೇರ್ಪಡೆಯಿಂದ ಆಟಕ್ಕೆ ಹೊಸತನ ಬಂದಂತಾದರೂ ಈ ನಿಯಮವು ಕೆಲವು ಮಿತಿಗಳನ್ನು ಹೊಂದಿದೆ. 10 ಓವರ್ ಗಳಿಗಿಂತ ಕಡಿಮೆಯಿರುವ ಆಟದಲ್ಲಿ (ಮಳೆ ಸೇರಿದಂತೆ ಹಲವು ಕಾರಣದಿಂದ) ಈ ನಿಯಮ ಅನ್ವಯಿಸುವುದಿಲ್ಲ. ಅಲ್ಲದೆ, ಪ್ರತಿ ಪಂದ್ಯದಲ್ಲೂ ಇಂಪ್ಯಾಕ್ಟ್ ಪ್ಲೇಯರ್ ನನ್ನು ಬಳಸಲೇ ಬೇಕು ಎಂಬ ಒತ್ತಾಯವಿಲ್ಲ. ಆದರೆ ಇಂಪ್ಯಾಕ್ಟ್ ಪ್ಲೇಯರ್ ನನ್ನು ಬಳಸುವ ಮೊದಲು ನಾಯಕ ಅಥವಾ ಮುಖ್ಯ ಕೋಚ್ ಅಥವಾ ಮ್ಯಾನೇಜರ್ ಅದನ್ನು ಆನ್-ಫೀಲ್ಡ್ ಅಂಪೈರ್ ಗೆ ತಿಳಿಸಬೇಕು. ಇಂಪ್ಯಾಕ್ಟ್ ಪ್ಲೇಯರ್ ಓವರ್ ನಡುವಿನಲ್ಲಿ ಬರುವಂತಿಲ್ಲ. ಓವರ್ ಮುಗಿದ ಬಳಿಕವಷ್ಟೇ ಆಟಕ್ಕೆ ಬರಬಹುದು. ಆದಾಗ್ಯೂ, ಕೆಲವು ವಿನಾಯಿತಿಗಳಿದ್ದು, ಬ್ಯಾಟಿಂಗ್ ತಂಡವು ವಿಕೆಟ್ ಪತನದ ಸಮಯದಲ್ಲಿ ಅದರ ಇಂಪ್ಯಾಕ್ಟ್ ಪ್ಲೇಯರ್ ಕಾರ್ಡ್ ಅನ್ನು ಓವರ್ ನಡುವೆ ಬಳಸಬಹುದು, ಫೀಲ್ಡಿಂಗ್ ತಂಡದಲ್ಲಿ ಗಾಯಗೊಂಡ ಫೀಲ್ಡರ್ ಬದಲು ಓವರ್ ನ ನಡುವೆ ಇಂಪ್ಯಾಕ್ಟ್ ಪ್ಲೇಯರ್ ನನ್ನು ಆಟಕ್ಕೆ ಕರೆಯಬಹುದು.