Saturday, 28th September 2024

IPL 2025: ಐವರು ಆಟಗಾರರ ರಿಟೈನ್‌, ಒಂದು ಆರ್​ಟಿಎಂ ಬಳಕೆಗೆ ಫ್ರಾಂಚೈಸಿಗಳಿಗೆ ಅವಕಾಶ?

IPL 2025

ಮುಂಬಯಿ: ಈ ಬಾರಿ ಐಪಿಎಲ್‌(IPL 2025) ಹರಾಜಿನ (IPL Auction) ವೇಳೆ ಫ್ರಾಂಚೈಸಿಗಳಿಗೆ ಐವರು ಆಟಗಾರರನ್ನು ಉಳಿಸಿಕೊಳ್ಳಲು ಮತ್ತು ಒಂದು ಆರ್‌ಟಿಎಮ್‌ (Right To Match Card) ಆಯ್ಕೆಗೆ ಬಿಸಿಸಿಐ (BCCI) ಅವಕಾಶ ನೀಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ನಾಳೆ (ಸೆಪ್ಟೆಂಬರ್​ 29) ಬೆಂಗಳೂರಿನಲ್ಲಿ ನಡೆಯಲಿರುವ ಬಿಸಿಸಿಐ(BCCI) ವಾರ್ಷಿಕ ಮಹಾಸಭೆಯ ಸಮಯದಲ್ಲೇ ರಿಟೇನ್​ ನಿಯಮಾವಳಿ(IPL 2025 Retention Rules) ಪ್ರಕಟವಾಗುವ ಸಾಧ್ಯತೆ ಇದೆ ತಿಳಿಸಿದೆ.

ಒಂದು ವೇಳೆ 5 ಆಟಗಾರರ ರೀಟೈನ್‌ ಮತ್ತು ಒಂದು ಆರ್‌ಟಿಎಮ್‌ ನೀಡಿದರೆ ಮುಂಬೈ, ಚೆನ್ನೈ ಮತ್ತು ಕೆಕೆಆರ್ ಸೇರಿದಂತೆ ಪ್ರಮುಖ ಫ್ರಾಂಚೈಸಿಗಳಿಗೆ ತಮ್ಮ ತಾರೆಯರನ್ನು‌ ತಂಡದಲ್ಲೇ ಉಳಿಸಿಕೊಳ್ಳಲು ಭಾರೀ ಅನುಕೂಲವಾಗಲಿದೆ. ಇತ್ತೀಚೆಗೆ ನಡೆದ ಐಪಿಎಲ್‌ ಫ್ರಾಂಚೈಸಿಗಳೊಂದಿಗಿನ ಬಿಸಿಸಿಐ ಸಭೆಯಲ್ಲಿ, ಹಲವು ಫ್ರಾಂಚೈಸಿಗಳು ಕನಿಷ್ಠ 5ರಿಂದ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿ ಎಂದು ವಿನಂತಿಸಿದ್ದವು. ಅದಕ್ಕೆ ಬಿಸಿಸಿಐ ಸಮ್ಮತಿಸಿದೆ ಎನ್ನಲಾಗಿದೆ. ಈ ವರ್ಷ ನವೆಂಬರ್‌ನಲ್ಲಿ ಐಪಿಎಲ್‌ ಹರಾಜು ನಡೆಯಲಿದೆ.

ಕನಿಷ್ಠ ಐವರನ್ನು ಉಳಿಸಿಕೊಳ್ಳುವುದರಿಂದ ಫ್ರಾಂಚೈಸಿಗಳು ತಮ್ಮ ಸ್ಟಾರ್‌ ಆಟಗಾರರನ್ನು ತಮ್ಮಲ್ಲೇ ಉಳಿಸಿಕೊಳ್ಳಬಹುದು. ಹಾಗೆಯೇ ತಮ್ಮ ಬ್ರಾಂಡ್‌ ಮೌಲ್ಯವನ್ನೂ ಕಾಪಾಡಿಕೊಳ್ಳಬಹುದು ಎಂದು ಬಿಸಿಸಿಐ ಚಿಂತಿಸಿದೆ ಎನ್ನಲಾಗಿದೆ. 2022 ಐಪಿಎಲ್‌ ಋತುವಿನಿಂದ ಫ್ರಾಂಚೈಸಿಗಳು ನಾಲ್ವರು ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶವಿತ್ತು. ಈ ಪೈಕಿ ಗರಿಷ್ಠ ಮೂವರು ಭಾರತೀಯರನ್ನು ಉಳಿಸಿಕೊಳ್ಳಬಹುದಿತ್ತು. ಗರಿಷ್ಠವೆಂದರೆ ಇಬ್ಬರು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಲು ಸಾಧ್ಯವಿತ್ತು. ಆ ಹೊತ್ತಿಗೆ ಆರ್‌ಟಿಎಂ ಅವಕಾಶವನ್ನು ರದ್ದು ಮಾಡಲಾಗಿತ್ತು. ಇದೀಗ ವರದಿಯಾದ ಪ್ರಕಾರ ಐದು ಆಟಗಾರರ ರಿಟೈನ್‌ ಮತ್ತು ಒಂದು ಆರ್‌ಟಿಎಮ್‌ ಬಳಕೆಗೆ ಅವಕಾಶ ಸಿಗಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಇದನ್ನೂ ಓದಿ IPL 2025: ಕೆಕೆಆರ್‌ಗೆ ಡ್ವೇನ್‌ ಬ್ರಾವೋ ನೂತನ ಮೆಂಟರ್‌

ಆರ್​ಟಿಎಂ ಅನ್ವಯ ಫ್ರಾಂಚೈಸಿಯೊಂದು ತನ್ನ ತಂಡದ ಆಟಗಾರನೊಬ್ಬ ಬೇರೆ ತಂಡಕ್ಕೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾದಾಗ ಅದೇ ಮೊತ್ತಕ್ಕೆ ಆತನನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಇದನ್ನು ಆರ್​ಟಿಎಂ ಎನ್ನಲಾಗುತ್ತದೆ.

ಬಿಸಿಸಿಐ(BCCI) ಕನಿಷ್ಠ ಐದು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಆಟಗಾರರನ್ನು ಅನ್‌ಕ್ಯಾಪ್ಡ್ ವಿಭಾಗದಲ್ಲಿ ಇರಿಸುವ ನಿಯಮವನ್ನು ಮರಳಿ ತರಲು ಮುಂದಾಗಿದೆ ಎನ್ನಲಾಗಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿ 5 ವರ್ಷ ಕಳೆದಿರುವ ಆಟಗಾರರನ್ನು ‘ಅನ್​ಕ್ಯಾಪ್ಡ್​’ ಎಂದು ಪರಿಗಣಿಸಿ, ಕಡಿಮೆ ಮೊತ್ತಕ್ಕೆ ರಿಟೇನ್​ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಮೊದಲ ಸೀಸನ್‌ನಿಂದ ಜಾರಿಯಲ್ಲಿದ್ದ ಈ ನಿಯಮವನ್ನು 2021ರಲ್ಲಿ ರದ್ದುಗೊಳಿಸಲಾಗಿತ್ತು. ಇದೀಗ ಮತ್ತೆ ಈ ನಿಯಮ ಜಾರಿಗೆ ತರಲು ಚಿಂತನೆ ನಡೆಸಿದೆ ಎನ್ನಲಾಗಿದೆ.

ಈ ಬಾರಿ ಮೆಗಾ ಹರಾಜು ಪ್ರಕ್ರಿಯೆಯನ್ನು ವಿದೇಶಿ ನೆಲದಲ್ಲಿ ಆಯೋಜಿಸುವ ಯೋಜನೆಯನ್ನೂ ಬಿಸಿಸಿಐ ಹಾಕಿಕೊಂಡಿದೆ ಎಂದು ವರದಿಯಾಗಿದೆ. ಕಳೆದ ವರ್ಷ ಮೊದಲ ಬಾರಿಗೆ ಹರಾಜು ಪ್ರಕ್ರಿಯೆ ವಿದೇಶಿ ನೆಲದಲ್ಲಿ ಅಂದರೆ ದುಬೈನಲ್ಲಿ ನಡೆದಿತ್ತು.