Saturday, 28th September 2024

IPL 2025 : ಐಪಿಎಲ್ ಆಟಗಾರರಿಗೆ ಭರ್ಜರಿ ಸ್ಯಾಲರಿ ಹೆಚ್ಚಳ; ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂಪಾಯಿ ವೇತನ

IPL 2025

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL 2025) ಆಡುವ ಆಟಗಾರರಿಗೆ ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂ.ಗಳ ಪಂದ್ಯದ ವೇತನ ನೀಡಲಾಗುವುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ಜಯ್ ಶಾ ಸೋಶಿಯಲ್ ಮೀಡಿಯಾಗ ಹ್ಯಾಂಡಲ್‌ಗಳ ಮೂಲಕ ಪ್ರಕಟಿಸಿದ್ದಾರೆ. ಇದರೊಂದಿಗೆ ಅವರು ಆಟಗಾರರಿಗೆ ಭರ್ಜರಿ ಹಣವನ್ನು ಘೋಷಿಸಿದ್ದಾರೆ. ಫ್ರಾಂಚೈಸಿಗಳು ಇಷ್ಟು ಹಣವನ್ನು ಕೊಡಲೇಬೇಕು ಎಂಬುದಾಗಿ ಅವರು ಸೂಚನೆ ಕೊಟ್ಟಿದ್ದಾರೆ.

ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧ್ಯಕ್ಷರೂ ಆಗಿರುವ ಜಯ್ ಶಾ, ಪ್ರತಿ ಫ್ರಾಂಚೈಸಿಯು ಈ ಋತುವಿನ ಎಲ್ಲ ಪಂದ್ಯಗಳಿಗೆ ಪಂದ್ಯದ ಶುಲ್ಕವಾಗಿ 12.60 ಕೋಟಿ ರೂ.ಗಳನ್ನು ನಿಗದಿಪಡಿಸಬೇಕು ಎಂದು ಹೇಳಿದ್ದಾರೆ.

ಐಪಿಎಲ್‌ನಲ್ಲಿ ಸ್ಥಿರತೆ ಮತ್ತು ಚಾಂಪಿಯನ್ ಅತ್ಯುತ್ತಮ ಪ್ರದರ್ಶನವನ್ನು ಆಚರಿಸುವ ಉದ್ದೇಶದೊಂದಿಗೆ ನಮ್ಮ ಕ್ರಿಕೆಟಿಗರಿಗೆ ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂ.ಗಳ ಪಂದ್ಯ ಶುಲ್ಕ ನೀಡುವುದಕ್ಕೆ ನಮಗೆ ಹೆಮ್ಮೆಯಾಗುತ್ತಿದೆ. ಒಂದು ಋತುವಿನ ಎಲ್ಲಾ ಲೀಗ್ ಪಂದ್ಯಗಳನ್ನು ಆಡುವ ಕ್ರಿಕೆಟಿಗನಿಗೆ ಅವರ ಒಪ್ಪಂದದ ಮೊತ್ತಕ್ಕೆ ಹೆಚ್ಚುವರಿಯಾಗಿ 1.05 ಕೋಟಿ ರೂ. ಸಿಗಲಿದೆ ಎಂದು ಜಯ್‌ಶಾ ಹೇಳಿಕೊಂಡಿದ್ದಾರೆ.

ಪ್ರತಿ ಫ್ರಾಂಚೈಸಿ ಈ ಋತುವಿನಲ್ಲಿ ಪಂದ್ಯದ ಶುಲ್ಕವಾಗಿ 12.60 ಕೋಟಿ ರೂಪಾಯಿ ನಿಗದಿಪಡಿಸುತ್ತದೆ! ಇದು ಐಪಿಎಲ್‌ ಮತ್ತು ನಮ್ಮ ಆಟಗಾರರಿಗೆ ಹೊಸ ಯುಗ, “ಎಂದು ಶಾ ಹೇಳಿದ್ದಾರೆ.

ಬಿಸಿಸಿಐನ ಎಜಿಎಂನ ಕಾರ್ಯಸೂಚಿಗಳು

ಐಪಿಎಲ್ ಆಡಳಿತ ಮಂಡಳಿಗೆ ಭಾರತೀಯ ಕ್ರಿಕೆಟಿಗರ ಸಂಘದ (ಐಸಿಎ) ಪ್ರತಿನಿಧಿಯನ್ನು ಸೇರಿಸುವುದಾಗಿ ಎಜಿಎಂ ನಲ್ಲಿ ಹೇಳಲಾಗಿದೆ. ಸಾಮಾನ್ಯ ಸಭೆಯಿಂದ ಇಬ್ಬರು ಸದಸ್ಯರನ್ನು ಆಯ್ಕೆ ಮಾಡುವುದು ಮತ್ತು ಕ್ರಿಕೆಟ್ ಸಮಿತಿಯಂತಹ ವಿವಿಧ ಉಪ ಸಮಿತಿಗಳ ನೇಮಕ ಮಾಡುವುದು ಪರಿಹರಿಸಬೇಕಾದ ಇತರ ವಿಷಯಗಳು ಕಾರ್ಯಸೂಚಿಯಲ್ಲಿದೆ.