ಕೋಲ್ಕತ್ತಾ: ಗುರುವಾರವಷ್ಟೇ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದ ವೆಸ್ಟ್ ಇಂಡೀಸ್ ತಂಡದ ಮಾಜಿ ಆಲ್‌ರೌಂಡರ್ ಡ್ವೇನ್ ಬ್ರಾವೋ (Dwayne Bravo) ಅವರು ಮುಂಬರುವ ಐಪಿಎಲ್ 18ನೇ(IPL 2025) ಆವೃತ್ತಿಗೆ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೇಡರ್ಸ್(kolkata knight riders) ತಂಡದ ಮೆಂಟರ್ ಆಗಿ ನೇಮಕವಾಗಿದ್ದಾರೆ. ಕಳೆದ ಆವೃತ್ತಿ ತನಕ ಬ್ರಾವೋ, ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಬೌಲಿಂಗ್ ಕೋಚ್ ಆಗಿದ್ದರು. ಇದೀಗ ಕೆಕೆಆರ್ ಫ್ರಾಂಚೈಸಿ ಸೇರುವ ಮೂಲಕ ಮಾಜಿ ತಂಡವಾದ ಸಿಎಸ್‌ಕೆ ಜತೆಗಿನ ಸುದೀರ್ಘ ಪಯಣವನ್ನು ಮುಗಿಸಿದ್ದಾರೆ. ಆಟಗಾರನಾಗಿಯೂ ಬ್ರಾವೋ ಚೆನ್ನೈ ಪರ ಹಲವು ವರ್ಷ ಆಡಿದ್ದರು. 2022ರಲ್ಲಿ ಬ್ರಾವೋ ಐಪಿಎಲ್‌ಗೆ ವಿದಾಯ ಹೇಳಿದ್ದರು.
ಕಳೆದ ಆವೃತ್ತಿಯಲ್ಲಿ ಕೆಕೆಆರ್ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ (Gautam Gambhir) ಅವರು ಇದೀಗ ಭಾರತ ತಂಡದ ಕೋಚ್ ಆಗಿದ್ದಾರೆ. ಹೀಗಾಗಿ ಇವರ ಸ್ಥಾನಕ್ಕೆ ಫ್ರಾಂಚೈಸಿ ಸೂಕ್ತ ವ್ಯಕ್ತಿಯನ್ನು ಹುಡುಕಾಟ ನಡೆಸುತ್ತಿತ್ತು. ಅಂತಿಮವಾಗಿ ಬ್ರಾವೋ ಆಯ್ಕೆಯಾಗಿದ್ದಾರೆ. ಬ್ರಾವೋ ತಂಡದ ಮೆಂಟರ್ ಆದ ವಿಚಾರವನ್ನು ಫ್ರಾಂಚೈಸಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ. ಬ್ರಾವೋ ಮಾರ್ಗದರ್ಶನಲ್ಲಿ ತಂಡ ಮುಂದಿನ ಬಾರಿಯೂ ಶ್ರೇಷ್ಠ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದು ಫ್ರಾಂಚೈಸಿ ವಿಶ್ವಾಸ ವ್ಯಕ್ತಪಡಿಸಿದೆ.
ಬ್ರಾವೋ ಕೆಕೆಆರ್ ತಂಡದ ಪರ ಐಪಿಎಲ್ ಆಡದಿದ್ದರೂ ಕೂಡ ಫ್ರಾಂಚೈಸಿ ಜತೆ ಸುದೀರ್ಘ ಒಡನಾಟವನ್ನು ಹೊಂದಿದ್ದಾರೆ. ಅವರ ಸಿಪಿಎಲ್ ವೃತ್ತಿಜೀವನದ ಬಹುಪಾಲು ಸಮಯ ಅವರು ಕೆಕೆಆರ್ ಫ್ರಾಂಚೈಸಿಯ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ಪರ ಆಡಿದ್ದರು. 2017 ಮತ್ತು 2018 ರಲ್ಲಿ ಬ್ರಾವೋ ನಾಯಕತ್ವದಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡವು ಸಿಪಿಎಲ್ನಲ್ಲಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿತ್ತು. ಕಳೆದ ಟಿ20 ವಿಶ್ವ ಕಪ್ ಟೂರ್ನಿಯಲ್ಲಿ ಬ್ರಾವೋ ಅಫಘಾನಿಸ್ತಾನ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಆಫ್ಘಾನ್ ಸೆಮಿ ಫೈನಲ್ ಪ್ರವೇಶಿಸಿತ್ತು.
ಇದನ್ನೂ ಓದಿ IPL 2025 : ಪಂಜಾಬ್ ಕಿಂಗ್ಸ್ ಕೋಚಿಂಗ್ ತಂಡ ಸಂಪೂರ್ಣ ಬದಲಾವಣೆ
ಐಪಿಎಲ್‌ನಲ್ಲಿ 161 ಪಂದ್ಯಗಳನ್ನು ಆಡಿರುವ ಬ್ರಾವೋ 183 ವಿಕೆಟ್ ಕಿತ್ತು ಅತಿ ಹೆಚ್ಚು ವಿಕೆಟ್ ಕಿತ್ತ ಸಾಧಕರ ಯಾದಿಯಲ್ಲಿ 3ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಯಾಟಿಂಗ್‌ನಲ್ಲಿ 1560 ರನ್ ಕಲೆಹಾಕಿದ್ದಾರೆ. ಕೆಕೆಆರ್ ಫ್ರಾಂಚಿಸಿ ಸೇರಿದ ಕುರಿತು ಸಂತಸ ವ್ಯಕ್ತಪಡಿಸಿರುವ ಬ್ರಾವೋ, ವಿಶ್ವದಾದ್ಯಂತ ಕೆಕೆಆರ್‌ಗೆ ಮತ್ತು ಡಿಜಡ ಬ್ರಾವೋಗೆ ಇರುವ ಅಭಿಮಾನಿಗಳಿಗೆ ಧನ್ಯವಾದ. ಕೆಕೆಆರ್ ಕುಟುಂಬ ಸೇರುತ್ತಿರುವುದು ನಿಜಕ್ಕೂ ಸಂತಸದ ವಿಚಾರ. ಎಲ್ಲ ಅನುಭವದೊಂದಿಗೆ ತಂಡದ ಪ್ರಗತಿಗೆ ಪ್ರಾಮಾಣಿಕವಾಗಿ ನೆರವಾಗಲಿದ್ದೇನೆ ಎಂದು ವಿಡಿಯೊ ಮೂಲಕ ಹೇಳಿದ್ದಾರೆ.