Thursday, 19th September 2024

IPL 2025: ರೋಹಿತ್‌ ಲಕ್ನೋ ತಂಡ ಸೇರುವ ಬಗ್ಗೆ ಮಾಲಿಕ ಗೋಯೆಂಕಾ ಹೇಳಿದ್ದೇನು?

IPL 2025

ಲಕ್ನೋ: ಮುಂಬರುವ ಐಪಿಎಲ್‌ ಆವೃತ್ತಿಯ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಡಿಸೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಇದಕ್ಕೂ ಮುನ್ನವೇ ಎಲ್ಲ ಫ್ರಾಂಚೈಸಿಗಳು ಆಟಗಾರರ ಖರೀದಿ ಮತ್ತು ಉಳಿಸಿಕೊಳ್ಳುವ ಬಗ್ಗೆ ಈಗಾಗಲೇ ಪೂರ್ವ ತಯಾರಿ ಆರಂಭಿಸಿವೆ. ಮುಂಬೈ ತಂಡದ ಮಾಜಿ ಆಟಗಾರ ರೋಹಿತ್‌ ಶರ್ಮ ಕೂಡ ಈ ಬಾರಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದು ಅವರನ್ನು ಖರೀದಿ ಮಾಡಲು ಡೆಲ್ಲಿ, ಪಂಜಾಬ್‌ ಸೇರಿ ಹಲವು ತಂಡಗಳು ತೀವ್ರ ಪೈಪೋಟಿ ನಡೆಸುತ್ತಿದೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ರೋಹಿತ್‌ ಖರೀದಿಗೆ ಲಕ್ನೋ ತಂಡ 50 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ವ್ಯಯಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಸ್ವತಃ ಫ್ರಾಂಚೈಸಿ ಮಾಲಿಕ ಸಂಜೀವ್ ಗೋಯೆಂಕಾ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.

ಒಬ್ಬ ಆಟಗಾರನಿಗೆ 50 ಕೋಟಿ ರೂ. ನೀಡಿದರೆ ಉಳಿದ 22 ಆಟಗಾರರನ್ನು ಖರೀದಿಸುವುದು ಹೇಗೆ?, ಫ್ರಾಂಚೈಸಿಗಳಿಗೆ ಲಭ್ಯವಿರುವ ಮೊತ್ತವೇ 100 ಕೋಟಿ. ಇದರಲ್ಲಿ ಅರ್ಧದಷ್ಟು ಮೊತ್ತವನ್ನು ಒಬ್ಬ ಆಟಗಾರನಿಗೆ ವ್ಯಯಿಸಿದರೆ ತಂಡವನ್ನು ಕಟ್ಟುವುದು ಹೇಗೆ? ಎಂದು ಪ್ರಶ್ನೆ ಮಾಡುವ ಮೂಲಕ ಗೋಯೆಂಕಾ ಅವರು ರೋಹಿತ್‌ಗೆ ದುಬಾರಿ ಮೊತ್ತ ನೀಡಲು ಸಾಧ್ಯವಿಲ್ಲ ಎನ್ನುವ ವಿಚಾರವನ್ನು ತಿಳಿಸಿದ್ದಾರೆ.

ಕಳೆದ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಅವರನ್ನು 24.75 ಕೋಟಿ ರೂ.ಗೆ ಖರೀದಿಸಿತ್ತು. ಇದು ಈ ವರೆಗಿನ ಐಪಿಎಲ್‌ನ ಅತಿ ದೊಡ್ಡ ಬಿಡ್ ಆಗಿದೆ. ಒಂದೊಮ್ಮೆ ರೋಹಿತ್‌ ಈ ಬಾರಿ ಬಿಡ್ಡಿಂಗ್‌ನಲ್ಲಿ ಕಾಣಿಸಿಕೊಂಡರೆ ಸ್ಟಾರ್ಕ್‌ ಅವರ ಮೊತ್ತವನ್ನು ಮೀರಿಸುವ ಸಾಧ್ಯತೆ ಇದೆ. ಕಳೆದ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ರೋಹಿತ್‌ರನ್ನು ದಿಢೀರ್‌ ಬೆಳವಣಿಗೆ ಎಂಬಂತೆ ​ ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್​ ಪಾಂಡ್ಯಾಗೆ ನಾಯಕತ್ವದ ಜವಾಬ್ದಾರಿ ವಹಿಸಿತ್ತು. ಆದರೇ ಅವರ ನಾಯಕತ್ವದಲ್ಲಿ ಹಿಂದೆದೂ ಕಾಣದ ವೈಫಲ್ಯ ಕಂಡಿತ್ತು.

ಈ ಬಾರಿ ಮುಂಬೈ ಇಂಡಿಯನ್ಸ್‌ ಮತ್ತೆ ತಂಡದ ನಾಯಕತ್ವ ಬದಲಾಯಿಸಲು ಮುಂದಾದಂತಿದೆ. ಕೆಲ ದಿನಗಳ ಹಿಂದಷ್ಟೇ ಮುಂಬೈ ಫ್ರಾಂಚೈಸಿ ಜಸ್​ಪ್ರೀತ್​ ಬುಮ್ರಾ(Jasprit Bumrah) ಅವರನ್ನು ನೂತನ ನಾಯಕನನ್ನಾಗಿ ಮಾಡುವ ಸುಳಿವನ್ನು ಬಿಟ್ಟುಕೊಟ್ಟಿತ್ತು. ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಬುಮ್ರಾ ಅವರು ಜನಗಳ ಮಧ್ಯೆ ಕೈಬೀಸುತ್ತಾ ರ‍್ಯಾಂಪ್ ವಾಕ್ ಮಾಡುತ್ತಿರುವ ಫೋಟೊವನ್ನು ಹಂಚಿಕೊಂಡಿತ್ತು. ಹೀಗಾಗಿ ಬುಮ್ರಾ ಮುಂಬೈಗೆ ನಾಯಕನಾಗುವುದು ಖಚಿತ ಎನ್ನಲಾಗಿತ್ತು. ಬುಮ್ರಾ ಅವರು ರೋಹಿತ್​ಗೆ ಬಹಳ ಆತ್ಮಿಯರಾಗಿರುವ ಕಾರಣ ಅವರು ನಾಯಕನಾದರೆ ರೋಹಿತ್​ ಕೂಡ ಮುಂಬೈ ತೊರೆಯಲು ಹಿಂದೇಟು ಹಾಕಬಹುದು ಎನ್ನುವುದು ಫ್ರಾಂಚೈಸಿಯ ಯೋಜನೆ.

ರೋಹಿತ್​ ಅವರು ಡೆಕ್ಕನ್​ ಚಾರ್ಜಸ್​ ಪರ ಆಡುವ ಮೂಲಕ ಐಪಿಎಲ್​ ಪದಾರ್ಪಣೆ ಮಾಡಿದ್ದರು. ಈ ತಂಡ ತೊರೆದ ಬಳಿಕ ಇದುವರೆಗೂ ಮುಂಬೈ ಇಂಡಿಯನ್ಸ್​ ಪರವೇ ಆಡುತ್ತಿದ್ದಾರೆ. ಇವರ ನಾಯಕತ್ವದಲ್ಲಿ ಮುಂಬೈ ಒಟ್ಟು 5 ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಒಟ್ಟು 6 ಐಪಿಎಲ್ ಟ್ರೋಫಿ​ ಗೆದ್ದ ಆಟಗಾರನಾಗಿದ್ದಾರೆ. ಡೆಕ್ಕನ್​ ಪರವೂ ಆಟಗಾರನಾಗಿ ಒಂದು ಕಪ್​ ಗೆದ್ದಿದ್ದಾರೆ. ಇದುವರೆಗೆ 257 ಐಪಿಎಲ್​ ಪಂದ್ಯಗಳಲ್ಲಿ 6628 ರನ್​, ಬೌಲಿಂಗ್‌ನಲ್ಲಿ 15 ವಿಕೆಟ್​ ಕಡೆವಿದ್ದಾರೆ. ಒಂದು ಬಾರಿ ಹ್ಯಾಟ್ರಿಕ್​ ವಿಕೆಟ್​ ಕೂಡ ಪಡೆದಿದ್ದಾರೆ. 2 ಶತಕ ಹಾಗೂ 43 ಅರ್ಧಶತಕ ಬಾರಿಸಿದ್ದಾರೆ.