Saturday, 23rd November 2024

IPL 2025: ಮುಂಬೈ ಇಂಡಿಯನ್ಸ್‌ಗೆ ಪಾರಸ್‌ ಮಾಂಬ್ರೆ ಬೌಲಿಂಗ್‌ ಕೋಚ್‌

ಮುಂಬಯಿ: ಮುಂಬರುವ ಐಪಿಎಲ್ 2025ರ ಆವೃತ್ತಿ(IPL 2025) ಆರಂಭಕ್ಕೂ ಮುನ್ನವೇ ಐದು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌(Mumbai Indians) ಫ್ರಾಂಚೈಸಿ ಭಾರತದ ಮಾಜಿ ಕೋಚ್ ಪಾರಸ್‌ ಮಾಂಬ್ರೆ ಅವರನ್ನು ಬೌಲಿಂಗ್‌ ಕೋಚ್‌(Mumbai Indians bowling coach) ಆಗಿ ನೇಮಕ ಮಾಡಿಕೊಂಡಿದೆ ಎಂದು ವರದಿಯಾಗಿದೆ. ಇದೇ ಜೂನ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಬೌಲಿಂಗ್‌ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದ ಅವರು ಭಾರತ ತಂಡ ಚಾಂಪಿಯನ್‌ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ರಾಹುಲ್ ದ್ರಾವಿಡ್ ಅವರ ಸಹಾಯಕ ಸಿಬ್ಬಂದಿಯ ಭಾಗವಾಗಿದ್ದ ಪರಾಸ್ ಮಾಂಬ್ರೆ ಅವರು 2008 ರಿಂದ ಮುಂಬೈ ಇಂಡಿಯನ್ಸ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು ಕೋಚಿಂಗ್‌ನಲ್ಲಿ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬೌಲಿಂಗ್‌ ಕೋಚ್‌ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇದೀಗ ಮತ್ತೆ ಮುಂಬೈ ಫ್ರಾಂಚೈಸಿಗೆ ಮರಳಲಿದ್ದಾರೆ. ಪ್ರಸ್ತುತ ಮುಂಬೈ ತಂಡದ ಬೌಲಿಂಗ್‌ ಕೋಚ್‌ ಆಗಿರುವ ಶ್ರೀಲಂಕಾದ ಮಾಜಿ ವೇಗಿ ಲಸೀತ್‌ ಮಾಲಿಂಗ ಬೌಲಿಂಗ್‌ ತರಬೇತುದಾರರಾಗಿ ತಂಡದಲ್ಲಿ ಮುಂದುವರಿಯಲಿದ್ದಾರೆ.

ರಾಜಸ್ಥಾನ್‌ ರಾಯಲ್ಸ್‌(Rajasthan Royals) ತಂಡ ಭಾರತ ಕ್ರಿಕೆಟ್‌ ತಂಡದ ಮಾಜಿ ಆರಂಭಿಕ ಆಟಗಾರ ಹಾಗೂ ಬ್ಯಾಟಿಂಗ್‌ ಕೋಚ್‌ ಆಗಿದ್ದ ವಿಕ್ರಮ್ ರಾಥೋರ್(Vikram Rathour) ಅವರನ್ನು ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ರಾಹುಲ್‌ ದ್ರಾವಿಡ್‌ ತಂಡದ ಮುಖ್ಯ ಕೋಚ್‌ ಆಗಿದ್ದಾರೆ. ವಿಕ್ರಮ್‌ ರಾಥೋರ್‌ ಅವರು ರಾಹುಲ್‌ ದ್ರಾವಿಡ್‌ ಅವರಡಿಯಲ್ಲಿ ಟೀಮ್‌ ಇಂಡಿಯಾದ ಬ್ಯಾಟಿಂಗ್‌ ಕೋಚ್‌ ಆಗಿದ್ದರು. ಕಳೆದ ಟಿ20 ವಿಶ್ವಕಪ್‌ ಬಳಿಕ ಅವರ ಅಧಿಕಾರಾವಧಿ ಅಂತ್ಯವಾಗಿತ್ತು. ಇದೀಗ ಮತ್ತೆ ಈ ಜೋಡಿ ಜತೆಯಾಗಿ ಕಾರ್ಯನಿರ್ವಹಿಸಲಿದೆ.

ಇದನ್ನೂ ಓದಿ IPL 2025: ಆರ್​ಟಿಎಂ ನಿಯಮ ಬದಲಾವಣೆಗೆ ಬಿಸಿಸಿಐಗೆ ಪತ್ರ ಬರೆದ ಫ್ರಾಂಚೈಸಿ ಮಾಲಕರು

ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದ ರಾಜಸ್ಥಾನ್‌ ರಾಯಲ್ಸ್‌ ಇದಾದ ಬಳಿಕ ಒಂದೆಡರು ಬಾರಿ ಫೈನಲ್‌ ತಲುಪಿದ್ದರೂ ಕಪ್‌ ಗೆಲ್ಲಲು ಸಾಧ್ಯವಾಗಿರಲಿಲ್ಲ. ಈ ಬಾರಿಯ ಆವೃತ್ತಿಯಲ್ಲಿ ಕ್ವಾಲಿಫೈಯರ್‌ ಪಂದ್ಯದಲ್ಲಿ ಹೈದರಾಬಾದ್‌ ವಿರುದ್ಧ ಸೋಲು ಕಂಡು ಅಭಿಯಾನ ಮುಗಿಸಿತ್ತು. ಇದೀಗ ದ್ರಾವಿಡ್‌ ಮತ್ತು ರಾಥೋರ್ ಮಾರ್ಗದರ್ಶನದಲ್ಲಿ ಮತ್ತೊಂದು ಕಪ್‌ ಎತ್ತಿ ಹಿಡಿಯಲಿದೆಯಾ ಎಂದು ಕಾದು ನೋಡಬೇಕಿದೆ.

ಐಪಿಎಲ್​ 18ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ನವೆಂಬರ್​ 3 ಅಥವಾ 4ನೇ ವಾರದಲ್ಲಿ ನಡೆಯಲಿದೆ. ಈ ಬಾರಿ ಮೆಗಾ ಹರಾಜು ಪ್ರಕ್ರಿಯೆಯನ್ನು ವಿದೇಶಿ ನೆಲದಲ್ಲಿ ಆಯೋಜಿಸುವ ಯೋಜನೆಯನ್ನೂ ಬಿಸಿಸಿಐ ಹಾಕಿಕೊಂಡಿದೆ ಎಂದು ವರದಿಯಾಗಿದೆ.