ಬೆಂಗಳೂರು: ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಸಹಾಯಕ ಬೌಲಿಂಗ್ ಕೋಚ್ ಆಗಿದ್ದ ಮುಂಬೈಯ ಓಂಕಾರ್ ಸಾಲ್ವಿ(Omkar Salvi) ಅವರನ್ನು ಮುಂಬರುವ ಐಪಿಎಲ್(IPL 2025) ಋತುವಿಗಾಗಿ ಆರ್‌ಸಿಬಿ(Royal Challengers Bangalore) ತಂಡ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.
46 ವರ್ಷದ ಸಾಲ್ವಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (MCA) ಮತ್ತು ಹಲವು ದೇಶೀಯ ಟೂರ್ನಿಯಲ್ಲಿ ಬೌಲಿಂಗ್ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕಳೆದ ವರ್ಷ ಮುಂಬೈ ತಂಡದ ಕೋಚ್ ಆಗಿದ್ದ ಸಾಲ್ವಿ ಮುಂಬೈ ತಂಡವನ್ನು ಇರಾನಿ ಕಪ್ ಮತ್ತು ರಣಜಿ ಟ್ರೋಫಿ ಗೆಲ್ಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 2025 ಮಾರ್ಚ್‌ನಲ್ಲಿ ಮುಂಬೈ ತಂಡದ ಕೋಚ್ ಆಗಿ ಅವರ ಒಪ್ಪಂದ ಕೊನೆಗೊಳ್ಳಲಿದೆ. ಇದಾದ ಬಳಿಕ ಅವರು ಆರ್‌ಸಿಬಿ ಜತೆ ಬೌಲಿಂಗ್ ಕೋಚ್ ಕಾರ್ಯನಿರ್ವಹಿಸಲಿದ್ದಾರೆ.
ಓಂಕಾರ್ ಸಾಲ್ವಿ ಆರ್‌ಸಿಬಿ ಸೇರುವಲ್ಲಿ ದಿನೇಶ್ ಕಾರ್ತಿಕ್ ಪಾತ್ರ ಮುಖ್ಯವಾಗಿತ್ತು. ಜುಲೈನಲ್ಲಿ ದಿನೇಶ್ ಕಾರ್ತಿಕ್ ಆರ್‌ಸಿಬಿ ಕೋಚ್ ಆಗಿ ನೇಮಕಗೊಂಡಿದ್ದರು. ಅವರ ನಿರ್ದೇಶನದ ಪ್ರಕಕಾರವೇ ಸಾಲ್ವಿ ಆರ್‌ಸಿಬಿ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಆರ್‌ಸಿಬಿ ಮೂರು ಮಂದಿಯನ್ನಷ್ಟೇ ತಂಡದಲ್ಲಿ ಉಳಿಸಿಕೊಂಡಿದೆ. ನ.24 ಮತ್ತು 25 ರಂದು ನಡೆಯುವ ಹರಾಜಿನಲ್ಲಿ ಯಾರನೆಲ್ಲ ಖರೀದಿಸಲಿದೆ ಎಂದು ಕಾದು ನೋಡಬೇಕಿದೆ. ಮೂಲಗಳ ಪ್ರಕಾರ ಕನ್ನಡಿಗ ಕೆ.ಎಲ್ ರಾಹುಲ್ ಅವರನ್ನು ಆರ್‌ಸಿಬಿ ದೊಡ್ಡ ಮೊತ್ತವನ್ನಾದರೂ ನೀಡಿ ಖರೀದಿ ಮಾಡಲಿದೆ ಎಂದು ತಿಳಿದುಬಂದಿದೆ. ರಾಹುಲ್ ಜತೆಗೆ ಯಜುವೇಂದ್ರ ಚಹಲ್ ಅವರನ್ನು ಕೂಡ ಮತ್ತೆ ತಂಡ ಸೇರಿಸಲು ಫ್ರಾಂಚೈಸಿ ಆಲೋಚಿಸಿದೆ ಎನ್ನಲಾಗಿದೆ. ಆರ್‌ಸಿಬಿ ಬಳಿ 83 ಕೋಟಿ ರೂ. ಉಳಿಕೆ ಹಣವಿದೆ. ಗರಿಷ್ಠ ಹಣ ಹೊಂದಿರುವ 2ನೇ ತಂಡವಾಗಿದೆ.
ಇದನ್ನೂ ಓದಿ Mithali Raj: ಆಂಧ್ರ ಕ್ರಿಕೆಟ್ ಸಂಸ್ಥೆಯ ಸಲಹೆಗಾರ್ತಿಯಾಗಿ ಮಿಥಾಲಿ ಆಯ್ಕೆ
ವಿರಾಟ್ ಕೊಹ್ಲಿ(21 ಕೋಟಿ ರೂ.), ರಜತ್ ಪಟೇದರ್(11 ಕೋಟಿ ರೂ.), ಯಶ್ ದಯಾಳ್ (5ಕೋಟಿ ರೂ) ಅವರನ್ನು ತಂಡ ರಿಟೈನ್ ಮಾಡಿಕೊಂಡ ಆಟಗಾರರು. ಮುಖ್ಯವಾಗಿ ಕಪ್ತಾನನಾಗಿದ್ದ ಫಾಫ್ ಡು ಪ್ಲೆಸ್ಸಿಸ್ ಮತ್ತು ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ರಿಲೀಸ್ ಮಾಡಲಾಗಿದೆ. ಮತ್ತೆ ಹರಾಜಿನಲ್ಲಿ ಖರೀದಿ ಮಾಡಲಿದೆಯಾ ಎಂದು ಕಾದು ನೋಡಬೇಕಿದೆ.
ಆರ್‌ಸಿಬಿ ಕೈ ಬಿಟ್ಟ ಆಟಗಾರರು
ಫಾಫ್ ಡು ಪ್ಲೆಸ್ಸಿಸ್, ಮೊಹಮ್ಮದ್ ಸಿರಾಜ್, ಕ್ಯಾಮರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ವಿಲ್ ಜ್ಯಾಕ್ಸ್, ಅಲ್ಜಾರಿ ಜೋಸೆಫ್, ಟಾಮ್ ಕರನ್, ಲಾಕಿ ಫರ್ಗುಸನ್, ರೀಸ್ ಟೋಪ್ಲಿ, ಅನುಜ್ ರಾವತ್, ಸೌರವ್ ಚೌಹಾಣ್, ಮನೋಜ್ ಭಾಂಡಗೆ, ಮಹಿಪಾಲ್ ಲೊಮ್ರೋರ್, ಸುಯಶ್ ಪ್ರಭುದೇಸಾಯಿ, ಆಕಾಶ್ ದೀಪ್, ಮಯಾಂಕ್ ದಾಗರ್, ರಾಜನ್ ಕುಮಾರ್, ಹಿಮಾಂಶು ಶರ್ಮಾ, ಕರ್ಣ್ ಶರ್ಮಾ, ಸ್ವಪ್ನಿಲ್ ಸಿಂಗ್, ವಿಜಯ್ ಕುಮಾರ್ ವೈಶಾಕ್ ಅವರನ್ನು ಪ್ರಮುಖವಾಗಿ ಕೈಬಿಡಲಾಗಿದೆ.