Saturday, 23rd November 2024

IPL 2025: ಬಿಸಿಸಿಐನಿಂದ ಐಪಿಎಲ್​ ರಿಟೇನ್ ನಿಯಮ ಬಹುತೇಕ ಅಂತಿಮ; ಯಾವ ತಂಡಕ್ಕೆ ಲಾಭ?

IPL 2025

ಮುಂಬಯಿ: ಐಪಿಎಲ್(IPL 2025)​ ಆಟಗಾರ ಮೆಗಾ ಹರಾಜು(ipl 2025 mega auction) ಪ್ರಕ್ರಿಯೆ ನವೆಂಬರ್‌ನಲ್ಲಿ ನಡೆಯಲಿದೆ ಎಂದು ವರದಿಯಾದ ಬೆನ್ನಲ್ಲೇ ಕೆಲ ಫ್ರಾಂಚೈಸಿಗಳು ಸ್ಟಾರ್​ ಆಟಗಾರರನ್ನು ತಮ್ಮ ತಂಡದತ್ತ ಸೆಳೆಯಲು ತೆರೆ ಮರೆಯಲ್ಲಿ ಭಾರೀ ಕಸರತ್ತು ಆರಂಭಿಸಿದೆ. ಇದೀಗ ಪ್ರತಿ ತಂಡಗಳು ರಿಟೇನ್(Retain) ಮಾಡಿಕೊಳ್ಳಬಹುದಾದ ಆಟಗಾರರ ಸಂಖ್ಯೆಯನ್ನು ಬಿಸಿಸಿಐ ಬಹುತೇಕ ಅಂತಿಮಗೊಳಿಸಿದೆ ಎಂದು ತಿಳಿದುಬಂದಿದೆ. ಸಿದ್ಧಪಡಿಸಲಾದ ನಿಯಮಾವಳಿ ಪ್ರಕಾರ, ಪ್ರತಿ ತಂಡ ಗರಿಷ್ಠ ಐವರು ಆಟಗಾರರನ್ನು ರಿಟೇನ್​ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ನೀಡಲಿದೆ ಎನ್ನಲಾಗಿದೆ.

ಬಿಸಿಸಿಐ ಈ ಮುನ್ನ ಗರಿಷ್ಠ 4 ಆಟಗಾರರ ರಿಟೇನ್​ಗೆ ಮಾತ್ರ ಅವಕಾಶ ನೀಡುವುದಾಗಿ ತಿಳಿಸಿತ್ತು. ಅಲ್ಲದೆ 2022ರಲ್ಲಿಯೂ 4 ಆಟಗಾರರ ರಿಟೇನ್​ ಅವಕಾಶ ನೀಡಿತ್ತು. ಈ ಪೈಕಿ ಗರಿಷ್ಠ 3 ಭಾರತೀಯರು ಮತ್ತು ಗರಿಷ್ಠ ಇಬ್ಬರು ವಿದೇಶಿಯರು ಆಗಿರಬೇಕೆಂದು ಸೂಚಿಸಿತ್ತು. ಆದರೆ ಈ ಬಾರಿ ಕೆಲ ಪ್ರಾಂಚೈಸಿಗಳು ಕನಿಷ್ಠ 6 ಆಟಗಾರರ ರಿಟೈನ್ಗೆ ಅವಕಾಶ ನೀಡಬೇಕು ಎಂದು ಆಗಸ್ಟ್‌ನಲ್ಲಿ ಮುಂಬೈಯಲ್ಲಿ ನಡೆದಿದ್ದ ಸಭೆಯಲ್ಲಿ ಬೇಡಿಕೆ ಇರಿಸಿತ್ತು. ಇದೀಗ ಬಿಸಿಸಿಐ 5 ಆಟಗಾರರ ರಿಟೈನ್‌ಗೆ ಅವಕಾಶ ನೀಡಲಿದೆ ಎನ್ನಲಾಗಿದೆ. ಆದರೆ, ಪ್ರತಿ ತಂಡ ಗರಿಷ್ಠ ಎಷ್ಟು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಬಹುದು ಎಂಬ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ.

ಆರ್​ಟಿಎಂ ಇಲ್ಲ?

ಈ ಬಾರಿಯ ಹರಾಜಿನಲ್ಲಿ ರೈಟ್​ ಟು ಮ್ಯಾಚ್​ (ಆರ್​ಟಿಎಂ) ಕಾರ್ಡ್​ ಬಳಸುವ ಅವಕಾಶ ನೀಡಲಾಗುವುದು ಎಂದು ಆರಂಭದಲ್ಲಿ ಹೇಳಲಾಗಿತ್ತು. ಹೀಗಾಗಿ ಎಲ್ಲ 10 ಫ್ರಾಂಚೈಸಿಗಳು ಭಾರೀ ನಿರೀಕ್ಷೆಯಲ್ಲಿದ್ದವು. ಆದರೆ ಬಿಸಿಸಿಐ ಈ ಸಲವೂ ಆರ್​ಟಿಎಂ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎನ್ನಲಾಗಿದೆ. 2018ರಿಂದ ಬಿಸಿಸಿಐ ಹರಾಜಿನಲ್ಲಿ ಈ ನಿಯಮದ ಬಳಕೆಗೆ ಅವಕಾಶ ಕಲ್ಪಿಸಿಲ್ಲ. ಈ ನಿಯಮ ಚಾಲ್ತಿಯಾಗುತ್ತಿದ್ದರೆ ಹರಾಜಿನಲ್ಲಿ ತಂಡಗಳು ತನ್ನ ಮೂಲ ಆಟಗಾರರನ್ನು ಮಾರಾಟವಾಗುವ ಗರಿಷ್ಠ ಮೊತ್ತಕ್ಕೆ ತನ್ನಲ್ಲೇ ಉಳಿಸಿಕೊಳ್ಳಲು ಅವಕಾಶ ಸಿಗುತ್ತಿತ್ತು.

ಇದನ್ನೂ ಓದಿ IPL 2025 : ಆರ್‌ಸಿಬಿಯಿಂದ ಗ್ಲೆನ್‌ ಮ್ಯಾಕ್ಸ್‌ವೆಲ್‌, ಡುಪ್ಲೆಸಿಸ್‌ ಹೊರಕ್ಕೆ

ಯಾವ ತಂಡಕ್ಕೆ ಹೆಚ್ಚಿನ ಲಾಭ

ಪ್ರತಿ ತಂಡ ಗರಿಷ್ಠ 5 ಆಟಗಾರರನ್ನು ಉಳಿಸಿಕೊಳ್ಳಲು ಬಿಸಿಸಿಐ ಅವಕಾಶ ನೀಡುವುದರಿಂದ ಹಾಲಿ ಚಾಂಪಿಯನ್‌ ಕೆಕೆಆರ್‌, ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌​ ತಂಡಕ್ಕೆ ಹೆಚ್ಚಿನ ಲಾಭ ಸಿಗಲಿದೆ. ಕೆಕೆಆರ್‌ ಪರ ಸುನೀಲ್‌ ನರೈನ್‌, ರಸೆಲ್‌, ವೆಂಕಟೇಶ್‌ ಅಯ್ಯರ್‌ ಮತ್ತು ರಿಂಕು ಸಿಂಗ್‌ ಅವರನ್ನು ರಿಟೇನ್​ ಮಾಡಲು ನೆರವಾಗಲಿದೆ. ಅತ್ತ ಮುಂಬೈ ಪರ ರೋಹಿತ್​ ಶರ್ಮ, ಜಸ್​ಪ್ರೀತ್​ ಬುಮ್ರಾ, ಸೂರ್ಯಕುಮಾರ್​ ಯಾದವ್​ ಮತ್ತು ನಾಯಕ ಹಾರ್ದಿಕ್​ ಪಾಂಡ್ಯರನ್ನು ರಿಟೇನ್​ ಮಾಡಬಹುದು. ನೆರವಾಗಲಿದೆ ಎನ್ನಲಾಗಿದೆ. ಮೂವರು ಭಾರತೀಯ ಆಟಗಾರರನ್ನಷ್ಟೇ ಉಳಿಸಿಕೊಳ್ಳಲು ಬಿಸಿಸಿಐ ಅವಕಾಶ ನೀಡಿದರೆ ಆಗ ಈ ತಂಡಗಳು ಇಕ್ಕಟ್ಟಿಗೆ ಸಿಲುಕಬಹುದು.