ಬೆಂಗಳೂರು: ಮುಂಬರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಇನಿಂಗ್ಸ್ ಆರಂಭಿಸಬೇಕೆಂದು ಭಾರತ ಟೆಸ್ಟ್ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆದಿದ್ದ ಹದಿನೆಂಟನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೆಗಾ ಹರಾಜಿನಲ್ಲಿ ಬೆಂಗಳೂರು ಫ್ರಾಂಚೈಸಿ ಇಂಗ್ಲೆಂಡ್ ತಂಡದ ಸ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್ ಫಿಲ್ ಸಾಲ್ಟ್ ಅವರನ್ನು 11.50 ಕೋಟಿ ರೂ. ಗಳಿಗೆ ಖರೀದಿಸಿತ್ತು. ಆ ಮೂಲಕ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಸ್ಥಾನವನ್ನು ತುಂಬಲಾಗಿತ್ತು. ಕಳೆದ 2024ರ ಐಪಿಎಲ್ ಟೂರ್ನಿಯಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಫಿಲ್ ಸಾಲ್ಟ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಆಗಲು ನೆರವು ನೀಡಿದ್ದರು.
ಅಂದ ಹಾಗೆ ಬೆಂಗಳೂರು ಫ್ರಾಂಚೈಸಿ ವಿರಾಟ್ ಕೊಹ್ಲಿ (21 ಕೋಟಿ ರೂ.), ರಜತ ಪಾಟಿದಾರ್ (11 ಕೋಟಿ ರೂ.) ಹಾಗೂ ವೇಗಿ ಯಶ್ ದಯಾಳ್ (5 ಕೋಟಿ ರೂ.) ಅವರನ್ನು ಉಳಿಸಿಕೊಂಡಿತ್ತು. ಆರ್‌ಸಿಬಿ, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಕಂಡೀಷನ್ಸ್‌ಗೆ ಸೂಕ್ತವಾಗುವ ಆಟಗಾರರನ್ನು ಮಾತ್ರ ಖರೀದಿಸಿದೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಆಕಾಶ ಚೋಪ್ರಾ, “ಆರ್‌ಸಿಬಿಗೆ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಅತ್ಯುತ್ತಮ ಆರಂಭಿಕ ಜೋಡಿಯಾಗಿದೆ. ವಿರಾಟ್ ಕೊಹ್ಲಿ ಜತೆಗೆ ಜೋಸ್ ಬಟ್ಲರ್, ಕೆಎಲ್ ರಾಹುಲ್, ಇಶಾನ್ ಕಿಶನ್ ಹಾಗೂ ರಿಷಭ್ ಪಂತ್ ಅವರನ್ನು ಖರೀದಿಸಬಹುದಿತ್ತು. ಆದರೆ, ಟೀಮ್ ಮ್ಯಾನೇಜ್‌ಮೆಂಟ್‌ಗೆ ಫಿಲ್ ಸಾಲ್ಟ್ ಅಗತ್ಯವಿತ್ತು ಹಾಗೂ ಖರೀದಿಸಿದೆ,” ಎಂದು ತಿಳಿಸಿದ್ದಾರೆ.
ಫಿಲ್ ಸಾಲ್ಟ್ ಗರಿಷ್ಠ ಸ್ಕೋರರ್ ಆಗಲಿದ್ದಾರೆ: ಚೋಪ್ರಾ ಭವಿಷ್ಯ
“ಕಳೆದ ಆವೃತ್ತಿಯಲ್ಲಿ ಫಿಲ್ ಸಾಲ್ಟ್ ಅವರು ಉತ್ತಮ ಪ್ರದರ್ಶನ ತೋರಿದ್ದರು. ಕೋಲ್ಕತಾದಂತೆ ಬೆಂಗಳೂರು ಪಿಚ್ ಕೂಡ ಫ್ಲ್ಯಾಟ್ ಇದೆ. ಇಲ್ಲಿನ ಕಂಡೀಷನ್ಸ್ ಫಿಲ್ ಸಾಲ್ಟ್‌ಗೆ ಸೂಕ್ತವಾಗಲಿದೆ ಹಾಗೂ ಅವರು ಸ್ಪೋಟಕ ಬ್ಯಾಟ್ ಮಾಡಬಹುದು. ಅವರನ್ನು ಇಲ್ಲಿ ಆಕ್ರಮಣಕಾರಿಯಾಗಿ ನಾವು ನೋಡಬಹುದು. ಕಬ್ಬನ್ ಪಾರ್ಕ್‌ಗೆ ಹಲವು ಬಾರಿ ಚೆಂಡು ಹೋಗುವುದನ್ನು ವೀಕ್ಷಿಸಬಹುದು. ಒಮ್ಮೆ ಅವರು ಲಯವನ್ನು ಕಂಡುಕೊಂಡರೆ ಚೆಂಡನ್ನು ನಿಯಮಿತವಾಗಿ ಹೊಡೆಯುವ ಮೂಲಕ ಬೌಲರ್‌ಗಳ ಮೇಲೆ ಒತ್ತಡ ಹೇರಲಿದ್ದಾರೆ,” ಎಂದು ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ.
ಆರ್‌ಸಿಬಿ ಬ್ಯಾಟಿಂಗ್ ವಿಭಾಗ ಅತ್ಯಂತ ಬಲಿಷ್ಠವಾಗಿದೆ
ಈ ಬಾರಿ ಐಪಿಎಲ್ ಟೂರ್ನಿಗೆ ಆರ್‌ಸಿಬಿ ತಂಡದ ಬ್ಯಾಟಿಂಗ್ ವಿಭಾಗ ಅತ್ಯಂತ ಬಲಿಷ್ಠವಾಗಿದೆ ಎಂದು ಆಕಾಶ್ ಚೋಪ್ರಾ ಇದೇ ವೇಳೆ ಭವಿಷ್ಯ ನುಡಿದಿದ್ದಾರೆ. ಚೋಪ್ರಾ ಹೇಳಿದಂತೆ ಬೆಂಗಳೂರು ತಂಡದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಜಿತೇಶ್ ಹಾಗೂ ಕೃಣಾಲ್ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲಿದ್ದಾರೆ.
ಇನ್ನು ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗದ ಬಗ್ಗೆ ಮಾತನಾಡಿದ ಆಕಾಶ್ ಚೋಪ್ರಾ, “ಇದೀಗ ಆರ್‌ಸಿಬಿಗೆ ಪವರ್‌ಫುಲ್ ಬೌಲರ್‌ಗಳು ಸೇರ್ಪಡೆಯಾಗಿದ್ದಾರೆ. ಆರ್‌ಸಿಬಿಯಲ್ಲಿ ಈಗಾಗಲೇ ಯಶ್ ದಯಾಳ್ ಇದ್ದಾರೆ. ಇವರ ಜತೆಗೆ ಈಗ ಜಾಶ್ ಹೇಝಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ಇದ್ದಾರೆ,” ಎಂದು ತಿಳಿಸಿದ್ದಾರೆ.