Saturday, 14th December 2024

IPL 2025: ʻನೀವು ತಂಡದ ಬೆನ್ನೆಲುಬುʼ-ಆರ್‌ಸಿಬಿ ಫ್ಯಾನ್ಸ್‌ಗೆ ಕೃಣಾಲ್‌ ಪಾಂಡ್ಯ ವಿಶೇಷ ಸಂದೇಶ!

IPL 2025: 'you guys have been the backbone of this team'-Krunal Pandya on RCB fans

ಬೆಂಗಳೂರು: ಮುಂಬರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಸ್ಟಾರ್‌ ಆಲ್‌ರೌಂಡರ್‌ ಕೃಣಾಲ್‌ ಪಾಂಡ್ಯ ಅವರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಆಡಲಿದ್ದಾರೆ. ಕಳೆದ ತಿಂಗಳು ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆದಿದ್ದ ಮೆಗಾ ಹರಾಜಿನಲ್ಲಿ ಅವರನ್ನು ಬೆಂಗಳೂರು ಫ್ರಾಂಚೈಸಿ 5.75 ಕೋಟಿ ರೂ. ಗಳಿಗೆ ಖರೀದಿಸಿತ್ತು. ಇದೀಗ ಆರ್‌ಸಿಬಿ ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿ ಕೃಣಾಲ್‌ ಪಾಂಡ್ಯ, ಬೆಂಗಳೂರು ಅಭಿಮಾನಿಗಳಿಗೆ ವಿಶೇಷ ಸಂದೇಶ ರವಾನಿಸಿದ್ದಾರೆ.

ಆರ್‌ಸಿಬಿ ಅಭಿಮಾನಿಗಳ ಬಗ್ಗೆ ನಾನು ಒಂದು ಸಂಗತಿಯನ್ನು ಹೇಳಲು ಇಷ್ಟಪಡುತ್ತೇನೆ, ಅವರು ತಂಡದ ಬೆನ್ನೆಲುಬು. ಇದು ತುಂಬಾ ವಿಶೇಷವಾದ ಮತ್ತು ಮಾಂತ್ರಿಕವಾದದ್ದನ್ನು ಸೃಷ್ಟಿಸುತ್ತದೆ ಎಂದು ನಾನು ಗ್ರಹಿಸಬಲ್ಲೆ. ಹಾಗಾಗಿ ನೀವು ನಮ್ಮನ್ನು ಬೆಂಬಲಿಸುತ್ತಿರಿ ಹಾಗೂ ನಾವು ಈ ವರ್ಷ ನಿಮ್ಮನ್ನು ರಂಜಿಸಲಿದ್ದೇವೆ,” ಎಂದು ಕೃಣಾಲ್‌ ಪಾಂಡ್ಯ ತಿಳಿಸಿದ್ದಾರೆ.

ವಿರಾಟ್‌ ಕೊಹ್ಲಿಯ ಬಗ್ಗೆ ಕೃಣಾಲ್‌ ಗುಣಗಾನ

ಆಧುನಿಕ ಬ್ಯಾಟಿಂಗ್‌ ದಿಗ್ಗಜ ವಿರಾಟ್‌ ಕೊಹ್ಲಿ ಜೊತೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಆಡಲು ಕೃಣಾಲ್‌ ಪಾಂಡ್ಯ ಉತ್ಸುಕತೆಯನ್ನು ಹೊರ ಹಾಕಿದ್ದಾರೆ.

“ವಿರಾಟ್ ಕೊಹ್ಲಿ ಯಾರು ಮತ್ತು ಅವರು ಏನು ಮಾಡಿದ್ದಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅವರಿಂದ ನಾವೂ ಸಾಕಷ್ಟು ಕಲಿಯುತ್ತೇವೆ. ಅವರು ತಂಡಕ್ಕೆ ಏನು ತರುತಾರೆ, ಅವರ ಉತ್ಸಾಹ ಮತ್ತು ಆಕ್ರಮಣಶೀಲತೆಯನ್ನು ನಾನು ಇಷ್ಟಪಡುತ್ತೇನೆ. ಆ ಶಕ್ತಿಯು ಇತರರ ಮೇಲೆ ಉಜ್ಜುತ್ತದೆ. ಅವರ ಶಕ್ತಿ ಇತರೆ ಆಟಗಾರರ ಮೇಲೆ ಪ್ರಾಬಲ್ಯ ಬೀರುತ್ತದೆ. ನಾನು ವೈಯಕ್ತಿಕವಾಗಿ ಇದನ್ನು ಇಷ್ಟಪಡುತ್ತೇನೆ,” ಎಂದು ಕೃಣಾಲ್‌ ಪಾಂಡ್ಯ ತಿಳಿಸಿದ್ದಾರೆ.

“ನಾನು ತುಂಬಾ ಭಾವನಾತ್ಮಕ ಮತ್ತು ಗೆಲ್ಲಲು ಇಷ್ಟಪಡುತ್ತೇನೆ. ನಾನು ಮೈದಾನಕ್ಕೆ ಹೋದಾಗ, ಏನೇ ಆಗಲಿ ಗೆಲ್ಲುವುದೇ ದೊಡ್ಡ ಗುರಿ. ಕೆಲವೊಮ್ಮೆ, ಇದು ಆಕ್ರಮಣಶೀಲತೆಯನ್ನು ಹೊರತರುತ್ತದೆ. ಏಕೆಂದರೆ ನೀವು ಆಟದ ಬಗ್ಗೆ ತುಂಬಾ ಭಾವೋದ್ರಿಕ್ತರಾಗಿರುತ್ತೀರಿ. ದಿನದ ಕೊನೆಯಲ್ಲಿ ಇದು ತಂಡದ ಆಟ ಎಂದು ನಾನು ನಂಬುತ್ತೇನೆ. ನನಗೆ ವೈಯಕ್ತಿಕ ಪ್ರದರ್ಶನಕ್ಕಿಂತ ಗೆಲುವು ಮುಖ್ಯವಾಗುತ್ತದೆ. ಏಕೆಂದರೆ ನಾನು ಟ್ರೋಫಿಗಳನ್ನು ಗೆಲ್ಲುವುದನ್ನು ಇಷ್ಟಪಡುತ್ತೇನೆ,” ಎಂದು ಬರೋಡಾ ಮೂಲದ ಆಲ್‌ರೌಂಡರ್‌ ಹೇಳಿದ್ದಾರೆ.

ಆರ್‌ಸಿಬಿ….ಆರ್‌ಸಿಬಿ….

ಬರೋಡಾ ತಂಡದ ಪರ ಇಂದೋರ್‌ನಲ್ಲಿ ಆಡುತ್ತಿರುವಾಗ ಅಭಿಮಾನಿಗಳು ಆರ್‌ಸಿಬಿ….ಆರ್‌ಸಿಬಿ… ಎಂದು ಕರೆದಿದ್ದ ಘಟನೆಯ ಬಗ್ಗೆ ಕೃಣಾಲ್‌ ಪಾಂಡ್ಯ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕೃಣಾಲ್‌ ಪಾಂಡ್ಯ ಆಡಿದ್ದರು. ಈ ಪಂದ್ಯ ಬೆಂಗಳೂರಿನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಬರೋಡಾ ತಂಡ, ಮುಂಬೈ ಎದುರು ಸೋಲು ಅನುಭವಿಸಿತ್ತು.

“ಐಪಿಎಲ್‌ ಮೆಗಾ ಹರಾಜಿನ ಬಳಿಕ ನಾನು ಇಂದೋರ್‌ನಲ್ಲಿ ನಾನು ಆಡುತ್ತಿದ್ದೆ ಹಾಗೈ ಕ್ರೀಡಾಂಗಣದ ಒಂದು ತುದಿಯಿಂದ ಬೌಲ್‌ ಮಾಡುತ್ತಿದ್ದೆ, ಈ ವೇಳೆ ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ಆರ್‌ಸಿಬಿ… ಆರ್‌ಸಿಬಿ… ಎಂದು ಕೂಗುತ್ತಿದ್ದೆರು. ಈ ವೇಳೆ ನನಗೆ ಒಂದು ರೀತಿಯ ಭಾವನೆ ಉಂಟಾಗಿತ್ತು,” ಎಂದು ಆರ್‌ಸಿಬಿ ತನ್ನ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಕೃಣಾಲ್‌ ಪಾಂಡ್ಯ ಹೇಳಿಕೊಂಡಿದ್ದಾರೆ.

ಈ ಸುದ್ದಿಯನು ಓದಿ: IPL 2025: ʻಅವಕಾಶ ಸಿಕ್ಕರೆ ಮುನ್ನಡೆಸುತ್ತೇನೆʼ-ಆರ್‌ಸಿಬಿ ನಾಯಕತ್ವದ ಬಗ್ಗೆ ರಜತ್‌ ಪಾಟಿದಾರ್‌ ಪ್ರತಿಕ್ರಿಯೆ!