Sunday, 17th November 2024

IPL Auction: ಆರ್‌ಸಿಬಿ ಅಲ್ಲ ಚೆನ್ನೈ ಸೇರಲಿದ್ದಾರೆ ರಾಹುಲ್‌; ಸುಳಿವು ಬಿಟ್ಟುಕೊಟ್ಟ ಮಾಜಿ ಆಟಗಾರ

ಬೆಂಗಳೂರು: ಇದೇ ತಿಂಗಳು ನಡೆಯುವ ಐಪಿಎಲ್‌ ಆಟಗಾರರ ಮೆಗಾ ಹರಾಜಿನಲ್ಲಿ(IPL Auction) ಸ್ಟಾರ್‌ ಆಟಗಾರರಾದ ಕೆ.ಎಲ್‌ ರಾಹುಲ್‌(KL Rahul), ರಿಷಭ್‌ ಪಂತ್‌, ಇಶಾನ್‌ ಕಿಶನ್‌, ಮೊಹಮ್ಮದ್‌ ಶಮಿ, ಶ್ರೇಯಸ್‌ ಅಯ್ಯರ್‌ ಯಾವ ತಂಡದ ಪಾಲಾಗಬಹುದು ಎಂಬ ಬಗ್ಗೆ ಹಲವು ಮಾಜಿ ಆಟಗಾರರು ತಮ್ಮ ಭವಿಷ್ಯ ನುಡಿದಿದ್ದಾರೆ. ಆರ್‌ಸಿಬಿ ಸೇರಬಹುದು ಎನ್ನಲಾಗಿರುವ ರಾಹುಲ್‌ ಚೆನ್ನೈ ಸೂಪರ್‌ ಕಿಂಗ್ಸ್‌(Chennai Super Kings) ತಂಡ ಸೇರುವುದು ಖಚಿತ ಎಂದು ಆಕಾಶ್‌ ಚೋಪ್ರಾ(Aakash Chopra) ಹೇಳಿದ್ದಾರೆ.

ʼಧೋನಿಗೆ ಮಂಡಿ ನೋವಿನಿಂದ ಬಳಲುತ್ತಿರುವ ಕಾರಣ ಅವರು ಈ ಬಾರಿ ಪೂರ್ಣ ಪ್ರಮಾಣದ ಕೀಪರ್‌ ಆಗಿ ಆಡುವುದು ಕಷ್ಟ. ಹೀಗಾಗಿ ಅವರಿಗೆ ಪರ್ಯಾಯ ವಿಕೆಟ್‌ ಕೀಪರ್‌&ಬ್ಯಾಟರ್‌ ಅಗತ್ಯವಿದೆ. ಆರಂಭದಲ್ಲಿ ಪಂತ್‌ ಅವರನ್ನು ಖರೀದಿ ಮಾಡುವ ಆಸಕ್ತಿ ಹೊಂದಿದ್ದ ಚೆನ್ನೈಗೆ ಇದು ಅಸಾಧ್ಯ ಎನ್ನುವುದು ಅರಿವಿಗೆ ಬಂದಿದೆ. ಏಕೆಂದರೆ ಪಂತ್‌ 25 ಕೋಟಿ ರೂ. ಅಧಿಕ ಮೊತ್ತಕ್ಕೆ ಬಿಕರಿಯಾಗುವ ಸಾಧ್ಯತೆ ಕಂಡು ಬಂದಿದೆ. ಹೀಗಾಗಿ ಚೆನ್ನೈ ತಂಡ ಕೆ.ಎಲ್‌ ರಾಹುಲ್‌ ಖರೀದಿಗೆ ಆಸಕ್ತಿ ತೋರಿದೆʼ ಎಂದು ಆಕಾಶ್‌ ಚೋಪ್ರಾ ತಿಳಿಸಿದ್ದಾರೆ.

ಕಳೆದ ವರ್ಷವೇ ತಂಡದಲ್ಲಿ ಸೂಕ್ತ ವಿಕೆಟ್​ ಕೀಪರ್​ ಇಲ್ಲದ ಕಾರಣ ಧೋನಿ ತಮ್ಮ ಕಾಲು ನೋವಿನ ಮಧ್ಯೆಯೂ ಸಂಪೂರ್ಣವಾಗಿ ಕೀಪಿಂಗ್​ ನಡೆಸಿದ್ದರು. ಈ ಬಾರಿ ಧೋನಿ ಇಂತಹ ರಿಸ್ಕ್‌ ತೆಗೆದುಕೊಳ್ಳುವುದು ಅನುಮಾನ. ಧೋನಿ ಈ ಬಾರಿ ಕೇವಲ ಇಂಪ್ಯಾಕ್ಟ್​ ನಿಯಮದ ಪ್ರಕಾರ ಬ್ಯಾಟಿಂಗ್‌ ಮಾತ್ರ ನಡೆಸಬಹುದು.

ಇದನ್ನೂ ಓದಿ IPL 2025: ಕೆಕೆಆರ್‌ಗೆ ರಿಂಕು ಸಿಂಗ್‌ ನಾಯಕ?

ರಾಹುಲ್‌ ಆರ್‌ಸಿಬಿ ಸೇರಲಿದ್ದಾರೆ ಎಂದು ಈಗಾಗಲೇ ಅಭಿಮಾನಿಗಳು ಭಾರೀ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಹೀಗಿರುವಾಗಲೇ ಆಕಾಶ್‌ ಚೋಪ್ರಾ ಅವರು ರಾಹುಲ್‌ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಖರೀದಿ ಮಾಡಲಿದೆ ಎಂದಿರುವುದು ಆರ್‌ಸಿಬಿ ಮತ್ತು ರಾಹುಲ್‌ ಅಭಿಮಾನಿಗಳಿಗೆ ಚಿಂತೆಗೀಡು ಮಾಡಿದೆ. ಕೆಲ ನೆಟ್ಟಿಗರು ಈ ಬಗ್ಗೆ ಕಮೆಂಟ್‌ ಕೂಡ ಮಾಡಿದ್ದು ಆರ್‌ಸಿಬಿಯ ಬದ್ಧ ಎದುರಾಳಿ ಚೆನ್ನೈ ಬಿಟ್ಟು ಬೇರೆ ಯಾವುದೇ ತಂಡಕ್ಕೆ ಹೋದರೂ ಬೇಸರವಿಲ್ಲ. ಆದರೆ ಚೆನ್ನೈ ತಂಡಕ್ಕೆ ಬೇಡ ಎಂದು ಹೇಳಿದ್ದಾರೆ.

ಚೆನ್ನೈ ತಂಡ ನಾಯಕ ಋತುರಾಜ್‌ ಗಾಯಕ್ವಾಡ್(18‌ ಕೋಟಿ ರೂ), ಮತೀಶಾ ಪತಿರಾಣ(13 ಕೋಟಿ ರೈ), ರವೀಂದ್ರ ಜಡೇಜಾ(18 ಕೋಟಿ ರೂ.), ಎಂಎಸ್‌ ಧೋನಿ(4 ಕೋಟಿ ರೂ.) ನೀಡಿ ರಿಟೇನ್‌ ಮಾಡಿಕೊಂಡಿದೆ. ತಂಡದ ಬಳಿ ಉಳಿದಿರುವ ಮೊತ್ತ 55 ಕೋಟಿ ರೂ.