ನವದೆಹಲಿ: ಹಾಲಿ ಐಪಿಎಲ್ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡವು ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ತಂಡದ ನಾಯಕನಾಗಿದ್ದ ಶ್ರೇಯಸ್ ಅಯ್ಯರ್ (Shreyas Iyer) ಅವರನ್ನು ಕೈಬಿಟ್ಟಿದೆ. ಇದೀಗ ಅಯ್ಯರ್ ಅವರನ್ನು ಹರಾಜಿನಲ್ಲಿ(IPL Auction Prediction) ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಒಲವು ತೋರಿದೆ ಎಂದು ಫ್ರಾಂಚೈಸಿಯ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಶ್ರೇಯಸ್ ಅಯ್ಯರ್ ಅವರು 2022 ರಲ್ಲಿ ಕೆಕೆಆರ್ ತಂಡ ಸೇರುವ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿದ್ದರು. ಇವರ ನಾಯಕತ್ವದಲ್ಲೇ ಡೆಲ್ಲಿ ತಂಡ ಮೊತ್ತ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್ನಲ್ಲಿ ಸೋಲು ಕಂಡಿತ್ತು. ಇದಾದ ಬಳಿಕ ಅಯ್ಯರ್ ಗಾಯಗೊಂಡು ಮುಂದಿನ ಆವೃತ್ತಿಯ ಐಪಿಎಲ್ನಿಂದ ಹೊರಗುಳಿದಿದ್ದರು. ಹೀಗಾಗಿ ರಿಷಭ್ ಪಂತ್ಗೆ ಡೆಲ್ಲಿಯ ನಾಯಕತ್ವದ ಜವಾಬ್ದಾರಿ ನೀಡಲಾಗಿತ್ತು. ಒಂದು ಆವೃತ್ತಿ ಆಡದ ಅಯ್ಯರ್ ಆ ಬಳಿಕ ಕೆಕೆಆರ್ ತಂಡ ಸೇರಿದ್ದರು. ಪಂತ್ ಕೂಡ ಈ ಬಾರಿ ಡೆಲ್ಲಿ ತಂಡ ತೊರೆದಿದ್ದಾರೆ. ತಂಡಕ್ಕೆ ಸೂಕ್ತ ನಾಯಕನ ಅಗತ್ಯವಿರುವ ಕಾರಣ ಶ್ರೇಯಸ್ ಅವರನ್ನು ಮತ್ತೆ ಡೆಲ್ಲಿ ತಂಡಕ್ಕೆ ಸೇರಿಸಲು ಫ್ರಾಂಚೈಸಿ ಮುಂದಾಗಿ ಎನ್ನಲಾಗಿದೆ.
ಇದನ್ನೂ ಓದಿ IND vs AUS: ಹೊಸ ಉಡುಪು, ಹೊಸ ಹುರುಪಿನೊಂದಿಗೆ ಟೀಮ್ ಇಂಡಿಯಾ ಅಭ್ಯಾಸ
ಡೆಲ್ಲಿ ಬಳಿ ಹರಾಜಿಗೆ ಲಭ್ಯವಿರುವ ಮೊತ್ತ 73 ಕೋಟಿ ರೂ. ಮಾತ್ರ. ಈ ಮೊತ್ತದ ಒಳಗಡೆ ಬೇರೆ ಆಟಗಾರರನ್ನು ಮತ್ತು ಅಯ್ಯರ್ ಅವರನ್ನು ಖರೀದಿ ಮಾಡಲು ಸಾಧ್ಯನಾ ಎಂದು ಕಾದು ನೋಡಬೇಕಿದೆ. ಅಕ್ಷರ್ ಪಟೇಲ್(16.5 ಕೋಟಿ ರೂ.), ಕುಲ್ ದೀಪ್ ಯಾದವ್ (13.25 ಕೋಟಿ ರೂ.), ಟ್ರಿಸ್ಟಾನ್ ಸ್ಟಬ್ಸ್(10 ಕೋಟಿ ರೂ.) ಅಭಿಷೇಕ್ ಪೋರೆಲ್(4 ಕೋಟಿ) ಅವರನ್ನು ಡೆಲ್ಲಿ ಈ ಬಾರಿ ರಿಟೈನ್ ಮಾಡಿಕೊಂಡಿದೆ.
2022ರಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕೋಲ್ಕತ್ತಾ ನೈಟ್ರೈಡರ್ಸ್ (KKR) ಪಾಲಾಗಿದ್ದ ಶ್ರೇಯಸ್ ಅಯ್ಯರ್, 2023ರಲ್ಲಿ ಗಾಯದ ಸಮಸ್ಯೆಯಿಂದ ಕಣಕ್ಕಿಳಿದಿರಲಿಲ್ಲ. 2024ರಲ್ಲಿ ನಾಯಕನಾಗಿ ಮತ್ತೊಮ್ಮೆ ಎಂಟ್ರಿ ಕೊಟ್ಟಿದ್ದರು. ಕೆಲ ಮೂಲಗಳ ಪ್ರಕಾರ ಶ್ರೇಯಸ್ ಅಯ್ಯರ್ ಕೆಕೆಆರ್ನಲ್ಲಿ ಉಳಿಯಲು ಮ್ಯಾನೇಜ್ಮೆಂಟ್ ಬಳಿ 30 ಕೋಟಿ ರೂ. ಕೇಳಿದ್ದರು, ಆದರೆ ಇಷ್ಟು ದೊಡ್ಡದ ಮೊತ್ತವನ್ನು ಪಾವತಿಸಲು ಸಾಧ್ಯವಾಗದ ಕಾರಣ ಅವರನ್ನು ತಂಡದಿಂದ ಕೈ ಬಿಡಲಾಯಿತು ಎನ್ನಲಾಗಿದೆ.