Sunday, 15th December 2024

ಕೋಲ್ಕತಾ, ಅಹ್ಮದಾಬಾದ್‌ನಲ್ಲಿ ಐಪಿಎಲ್‌ ಪ್ಲೇ ಆಫ್ ಪಂದ್ಯ: ಬಿಸಿಸಿಐ

ನವದೆಹಲಿ: ಐಪಿಎಲ್‌ ಪ್ಲೇ ಆಫ್ ನಾಲ್ಕು ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಮಂಗಳವಾರ ಪ್ರಕಟಿಸಿದೆ. ಪಂದ್ಯಗಳು ಕೋಲ್ಕತಾ ಹಾಗೂ ಅಹ್ಮದಾಬಾದ್‌ನಲ್ಲಿ ನಡೆಯಲಿವೆ.

ಐಪಿಎಲ್‌ ಪಂದ್ಯಾವಳಿಯ ಮೊದಲ ಕ್ವಾಲಿಫೈಯರ್‌ ಮೇ 24ರಂದು ಮತ್ತು ಎಲಿಮಿ ನೇಟರ್‌ ಪಂದ್ಯ ಮೇ 25ರಂದು ಕೋಲ್ಕತಾದ “ಈಡನ್‌ ಗಾರ್ಡನ್ಸ್‌’ ಅಂಗಳದಲ್ಲಿ ನಡೆಯಲಿದೆ. ಗ್ರೂಪ್‌ ಹಂತದಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳು ಮೊದಲ ಕ್ವಾಲಿಫೈಯರ್‌ ನಲ್ಲಿ ಎದುರಾಗಲಿವೆ. ಗೆದ್ದ ತಂಡ ನೇರವಾಗಿ ಫೈನಲ್‌ ತಲುಪುತ್ತದೆ.

3ನೇ ಹಾಗೂ 4ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್‌ ಸುತ್ತಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿವೆ. ಇಲ್ಲಿ ಸೋತ ತಂಡ ಕೂಟದಿಂದ ನಿರ್ಗಮಿಸುತ್ತದೆ. ಗೆದ್ದ ತಂಡ ಮೊದಲ ಕ್ವಾಲಿಫೈಯರ್‌ನಲ್ಲಿ ಪರಾಭವಗೊಂಡ ತಂಡವನ್ನು ದ್ವಿತೀಯ ಕ್ವಾಲಿಫೈಯರ್‌ ನಲ್ಲಿ ಎದುರಿಸಲಿದೆ.

ಈ ಪಂದ್ಯ ಮೇ 27ರಂದು ಅಹ್ಮದಾಬಾದ್‌ನ “ನರೇಂದ್ರ ಮೋದಿ ಸ್ಟೇಡಿಯಂ’ನಲ್ಲಿ ಏರ್ಪಡಲಿದೆ. ಮೇ 29ರ ಫೈನಲ್‌ ಕೂಡ ಇಲ್ಲಿಯೇ ನಡೆಯಲಿದೆ. 3 ವನಿತಾ ತಂಡಗಳ ನಡುವಿನ ಟಿ20 ಚಾಲೆಂಜ್‌ ಸರಣಿಯ ಆತಿಥ್ಯ ಪುಣೆ ಪಾಲಾಗಿದೆ. ಮೇ 23, 24, 26 ಮತ್ತು 28ರಂದು ಈ ಪಂದ್ಯ ಗಳು ನಡೆಯಲಿವೆ.