Sunday, 15th December 2024

ಏಪ್ರಿಲ್ 9ರಿಂದ ಚೆನ್ನೈನಲ್ಲಿ ಐಪಿಎಲ್‌ ಸಂಭ್ರಮ ಶುರು

ಮುಂಬೈ: ಪ್ರಸಕ್ತ ಸಾಲಿನ ಐಪಿಎಲ್ ಕೂಟಕ್ಕೆ ಕಡೆಗೂ ದಿನಾಂಕ ನಿಗದಿಯಾಗಿದೆ. ಈ ಬಾರಿಯ ಐಪಿಎಲ್ ಎಪ್ರಿಲ್ 9ರಂದು ಚೆನ್ನೈನಲ್ಲಿ ಆರಂಭವಾಗಲಿದೆ.

ನಿರೀಕ್ಷೆಯಂತೆ ಐಪಿಎಲ್ ಫೈನಲ್ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ಮೇ 30ರಂದು ನಡೆಯಲಿದೆ. ಕಳೆದ ಬಾರಿ ಯುಎಇ ನಲ್ಲಿ ನಡೆದಿದ್ದ ವಿಶ್ವದ ಶ್ರೀಮಂತ ಕ್ರಿಕೆಟ್ ಕೂಟ ಈ ಬಾರಿ ಭಾರತಕ್ಕೆ ಮರಳಿದೆ. ಆದರೆ ಈ ಬಾರಿ ಕೇವಲ ಆರು ಮೈದಾನದಲ್ಲಿ ಪಂದ್ಯಗಳು ನಡೆಯಲಿದೆ.

ಪಂದ್ಯಗಳು ದೇಶದ ಪ್ರಮುಖ ನಗರಗಳಾದ ಅಹಮದಾಬಾದ್‌, ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ ಹಾಗೂ ಕೋಲ್ಕತಾದಲ್ಲಿ ನಡೆಯಲಿದೆ.

ಏಪ್ರಿಲ್‌ 9ರಂದು ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ – ರಾಯಲ್‌ ಚಾಲೆಂಜರ‍್ಸ್ ಬೆಂಗಳೂರು ತಂಡದ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಪ್ಲೇಆಫ್‌ ಹಾಗೂ ಫೈನಲ್‌ ಪಂದ್ಯಗಳಿಗೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಈ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಐಪಿಲ್‌ ಪಂದ್ಯಗಳಾಗಲಿವೆ.

56 ಲೀಗ್‌ ಪಂದ್ಯಗಳಲ್ಲಿ ಚೆನ್ನೈ, ಮುಂಬೈ, ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ತಲಾ ಹತ್ತು ಪಂದ್ಯಗಳಿ ನಡೆಯಲಿವೆ. ಅಹಮದಾಬಾದ್‌ ಹಾಗೂ ದೆಹಲಿ ತಲಾ ಎಂಟು ಪಂದ್ಯಗಳ ಆತಿಥ್ಯ ವಹಿಸಲಿದೆ. ಎಲ್ಲಾ ತಂಡಗಳು ತಮ್ಮದೇ ನೆಲದ ಬದಲಾಗಿ ಬೇರೆ ಕ್ರೀಡಾಂಗಣದಲ್ಲಿ ನಾಲ್ಕು ಪಂದ್ಯವನ್ನಾಡಲಿರುವುದು ಈ ಬಾರಿಯ ವಿಶೇಷವಾಗಿದೆ. ಎಂದಿನಂತೆ ಮಧ್ಯಾಹ್ನ 3.30 ಹಾಗೂ ಸಂಜೆ 7.30 ಕ್ಕೆ ಪಂದ್ಯಗಳು ನಡೆಯಲಿವೆ.