Wednesday, 6th November 2024

ಇರಾನಿ ಕಪ್ ಗೆದ್ದ ಶೇಷ ಭಾರತ

ಗ್ವಾಲಿಯರ್: ಶೇಷ ಭಾರತ ಧ್ಯಪ್ರದೇಶದ ವಿರುದ್ಧ 238 ರನ್‌ಗಳ ಭಾರಿ ಜಯ ಸಾಧಿಸಿ ಇರಾನಿ ಕಪ್ ಗೆದ್ದು ಬೀಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಶೇಷ ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 484 ರನ್‌ಗಳನ್ನು ಕಲೆ ಹಾಕಿತು. ಯಶಸ್ವಿ ಜೈಸ್ವಾಲ್ 213 ರನ್ ಗಳಿಸಿದರೆ, ಅಭಿಮನ್ಯು ಈಶ್ವರನ್ 154 ರನ್ ಗಳಿಸಿದರು.

ನಂತರ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ಮಧ್ಯಪ್ರದೇಶ 294 ರನ್‌ಗಳಿಗೆ ಆಲೌಟ್ ಆಯಿತು. ಯಶ್ ದುಬೆ 109 ರನ್ ಗಳಿಸಿದರೆ, ಹರ್ಷ್ ಗಾವ್ಲಿ 54 ರನ್ ಗಳಿಸಿದರು, ಸರಂಶ್ ಜೈನ್ 66 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

ಶೇಷ ಭಾರತ ತಂಡದ ಬೌಲರ್ ಪುಲ್ಕಿತ್ ನಾರಂಗ್ 4 ವಿಕೆಟ್ ಪಡೆದರೆ, ನವದೀಪ್ ಸೈನಿ 3 ವಿಕೆಟ್ ಪಡೆದುಕೊಂಡರು. ಮುಕೇಶ್ ಕುಮಾರ್ 2 ವಿಕೆಟ್, ಸೌರಭ್ ಕುಮಾರ್ 1 ವಿಕೆಟ್ ಪಡೆದರು.

ಮೊದಲ ಇನ್ನಿಂಗ್ಸ್‌ನಲ್ಲಿ 188 ರನ್‌ಗಳ ಮುನ್ನಡೆ ಪಡೆದ ಶೇಷ ಭಾರತ ಎರಡನೇ ಇನ್ನಿಂಗ್ಸ್‌ನಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಉಳಿದ ಬ್ಯಾಟರ್ ಗಳು ರನ್ ಗಳಿಸಲು ಪರದಾಡಿದರೆ, ಯಶಸ್ವಿ ಜೈಸ್ವಾಲ್ ಮಾತ್ರ ಅತ್ಯುತ್ತಮ ಆಟವಾಡಿದರು.157 ಎಸೆತಗಳಲ್ಲಿ 16 ಬೌಂಡರ್ 3 ಸಿಕ್ಸರ್ ನೆರವಿನಿಂದ 144 ರನ್ ಗಳಿಸುವ ಮೂಲಕ ಶೇಷ ಭಾರತ ತಂಡ ಬೃಹತ್ ಮುನ್ನಡೆ ಪಡೆದುಕೊಳ್ಳಲು ಕಾರಣ ವಾದರು. ಎರಡನೇ ಇನ್ನಿಂಗ್ಸ್‌ನಲ್ಲಿ 246 ರನ್‌ಗಳಿಗೆ ಆಲೌಟ್ ಆದ ಶೇಷ ಭಾರತ 434 ರನ್‌ಗಳ ಭಾರಿ ಮುನ್ನಡೆ ಪಡೆದುಕೊಂಡಿತು.

ಗುರಿ ಬೆನ್ನತ್ತಿದ ಮಧ್ಯಪ್ರದೇಶ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಅರ್ಹಂ ಆಕಿಲ್ ಶೂನ್ಯಕ್ಕೆ ಔಟಾದರು. ನಾಯಕ ಹಿಮಾಂಶು ಮಂತ್ರಿ ಅರ್ಧಶತಕ ಗಳಿಸಿದರು. ಉಳಿದಂತೆ ಯಾವೊಬ್ಬ ಬ್ಯಾಟರ್ ಗಳು ಕೂಡ ಹೆಚ್ಚಿನ ರನ್ ಗಳಿಸುವಲ್ಲಿ ವಿಫಲವಾದರು.ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಗಳಿಸಿದ್ದ ಯಶಸ್ವಿ ಜೈಸ್ವಾಲ್ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಶತಕ ಗಳಿಸುವ ಮೂಲಕ ಶೇಷ ಭಾರತದ ಗೆಲುವಿಗೆ ಪ್ರಮುಖ ಕಾರಣವಾದರು. ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನಕ್ಕಾಗಿ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು.

ಕಳೆದ ಬಾರಿ ಸೌರಾಷ್ಟ್ರ ತಂಡವನ್ನು ಮಣಿಸಿದ್ದ ಶೇಷ ಭಾರತ ತಂಡ ಇರಾನಿ ಕಪ್ ಗೆದ್ದುಕೊಂಡಿತ್ತು.